ಉಡುಪಿ: ನಮ್ಮ ನಡುವೆ ರವೀಂದ್ರನಾಥ ಟ್ಯಾಗೋರ್ ಆಗಲಿ, ಕೋಟ ಶಿವರಾಮ ಕಾರಂತರಾಗಲಿ ಅಥವಾ ಥಾಮಸ್ ಆಲ್ವ ಎಡಿಸನ್ ಆಗಲಿ ನಮ್ಮ ನಡುವೆ ಇಲ್ಲ ಆದರೆ ನಮ್ಮೊಂದಿಗೆ ಅವರೆಲ್ಲರ ಹೋಲಿಕೆಯಾಗಿ ಕೆ.ಪಿ.ರಾಯರಿದ್ದಾರೆ ಅದು ನಮ್ಮ ಸೌಭಾಗ್ಯ. ನಾವು ಇಂದು ಬಳಸುವ ಕೀಲಿಮಣೆಯ ತಂತ್ರಜ್ಞಾನದ ಪಿತಾಮಹಾ ಅವರು ಎಂಬುದಾಗಿ ಮೂಡುಬಿದಿರೆ ಜೈನ ಮಠದ ಮಠಾಧಿಪತಿ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು.
ಇದನ್ನೂ ಓದಿ:ವಿಮಾನದಲ್ಲಿ ಎಸಿಯಿಲ್ಲದೆ ಪರದಾಡಿದ ಪ್ರಯಾಣಿಕರು: ಬೆವರು ಒರೆಸಲು ಟಿಶ್ಯೂ ಕೊಟ್ಟ ಗಗನಸಖಿ
ಅವರು ಭಾನುವಾರ (ಆ.6) ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಕಾರದಲ್ಲಿ ನಾಡೋಜ ಪ್ರೊ.ಕೆ.ಪಿ.ರಾವ್ ಅಭಿನಂದನ ಸಮಿತಿ ವತಿಯಿಂದ ನಡೆದ ಪ್ರೊ.ಕೆ.ಪಿ.ರಾವ್ ಅಭಿನಂದನಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ನುಡಿ ಸಂದೇಶದಲ್ಲಿ ಮಾತನಾಡಿದರು.
ಪ್ರೊ.ಕೆ.ಪಿ.ರಾವ್ ಅವರು ಕನ್ನಡಕ್ಕೆ ಬಹಳ ಕೊಡುಗೆಯನ್ನು ನೀಡಿರುವುದು ಶ್ಲಾಘನೀಯ. ಕನ್ನಡದ ಕೀಲಿಮಣೆ ಅಕ್ಷರದ ವಿನ್ಯಾಸ, ತುಳು ಲಿಪಿ, ಭಾಷೆ, ಸಂಸ್ಕೈತಿಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸುತ್ತಿರುವುದು ನಮ್ಮೆಲ್ಲರ ಭಾಗ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ.ಪಿ.ವಿ.ಭಂಡಾರಿ ಅವರು ಮಾತನಾಡಿ, ಪ್ರೊ.ಕೆ.ಪಿ.ರಾವ್ ಅವರು ಸರಳ, ಸಜ್ಜನಿಕೆಯ ಪ್ರಬುದ್ಧ ಮನಸ್ಸಿನ ವ್ಯಕ್ತಿತ್ವವನ್ನು ಹೊಂದಿದವರು. ಒಂದು ವೇಳೆ ಅವರು ಬೇರೆ ದೇಶದಲ್ಲಿ ಇದ್ದಿದ್ದರೆ ಅವರ ಪ್ರತಿಭೆಯನ್ನು ಹೇಗೆ ಬಳಸಿಕೊಳ್ಳುತ್ತಿದ್ದರು ಎನ್ನಿಸುತ್ತಿದೆ. ಕೆ.ಪಿ.ರಾವ್ ಅವರು ಸರ್.ಎಂ.ವಿಶ್ವೇಶ್ವರಯ್ಯನವರನ್ನು ಹೋಲುವ ಅದ್ಭುತ ಪ್ರತಿಭೆಯಾಗಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕೆಪಿ ರಾವ್ ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಭಿನಂದನಾ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರವಿರಾಜ್ ಎಚ್ ಪಿ ಪ್ರಾಸ್ತಾವಿಕ ಮಾತನ್ನಾಡಿದರು. ಜನಾರ್ದನ್ ಕೊಡವೂರು ವಂದಿಸಿ, ತುಮುರಿ ಜಿ.ಪಿ.ಪ್ರಭಾಕರ್ ನಿರೂಪಿಸಿದರು.