Advertisement
ಬಿಜೆಪಿ ಸೇರಲು ತಾವು ಯಾವುದೇ ಬೇಡಿಕೆ ಮುಂದಿಟ್ಟಿಲ್ಲ. ಪಕ್ಷದಲ್ಲಿ ಅಟೆಂಡರ್ ಕೆಲಸ ಕೊಟ್ಟರೂ ಅದ್ನನು ಮಾಡುತ್ತೇನೆ ಎಂದು ಕೆ.ಪಿ.ನಂಜುಂಡಿ ಹೇಳಿದರೆ, ನಂಜುಂಡಿ ಅವರಿಗೆ ಶೀಘ್ರವೇ ರಾಜ್ಯ ಮಟ್ಟದ ಜವಾಬ್ದಾರಿಯನ್ನು ಪಕ್ಷದಲ್ಲಿ ಕೊಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
Related Articles
Advertisement
ಬಿಜೆಪಿ ಸೇರಲು ಯಾವುದೇ ಷರತ್ತು ವಿಧಿಸಿಲ್ಲ- ಕೆ.ಪಿ.ನಂಜುಂಡಿಬೆಂಗಳೂರು: “ಕಳೆದ 16 ವರ್ಷ ಕಾಂಗ್ರೆಸ್‌ನಲ್ಲಿ ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದೆ. ಸಮುದಾಯದ ಕಾರ್ಯಕ್ರಮಗಳು ಸೇರಿದಂತೆ ಎಲ್ಲವನ್ನೂ ಕಾಂಗ್ರೆಸ್‌ನವರನ್ನೇ ಇಟ್ಟುಕೊಂಡು ಕಾಯಕ್ರಮಗಳನ್ನು ಮಾಡಿದೆ. ಆದರೆ, ನನಗೆ ಜ್ಞಾನೋದಯವಾಗುವ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಠ ಕಲಿಸಿಕೊಟ್ಟಿದ್ದಾರೆ. ಆ ಪಾಠದಿಂದಾಗಿಯೇ ಇಂದು ಬಿಜೆಪಿ ಸೇರಿದ್ದೇನೆ’. ಸೋಮವಾರ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದ ಬಳಿಕ ಸುದ್ದಿಗೋಷ್ಠಿಯಲ್ಲಿ ವಿಶ್ವಕರ್ಮ ಸಮುದಾಯದ ಮುಖಂಡ ಕೆ.ಪಿ.ನಂಜುಂಡಿ ಪ್ರತಿಕ್ರಿಯಿಸಿದ್ದು ಹೀಗೆ. ನಾನು ಕಾಂಗ್ರೆಸ್ ಸೇರುವ ಸಂದರ್ಭದಲ್ಲಿ ಅನೇಕ ಸ್ವಾಮೀಜಿಗಳು, ಮುಖಂಡರು ಬೇಡ ಎಂದು ಹೇಳಿದ್ದರು. ಆದರೆ, ಎಲ್ಲರ ಸಲಹೆಯನ್ನು ಮೀರಿ ಕಾಂಗ್ರೆಸ್ ಸೇರಿದೆ. ಇಡೀ ಸಮುದಾಯವನ್ನು ಕಾಂಗ್ರೆಸ್‌ಗೆ ಕರೆತರುತ್ತೇನೆ ಎಂದು ಹೇಳಿ ಅದನ್ನು ಸಾಧಿಸಿ ತೋರಿಸಿದೆ. ಕಾಂಗ್ರೆಸ್‌ಗೆ ಸೇರಿ 16 ವರ್ಷದ ಬಳಿಕ ನಾನು ಕಾಂಗ್ರೆಸ್‌ಗೆ ಹೋಗಿದ್ದು ತಪ್ಪು ಎಂಬ ಅರಿವಾಯಿತು ಎಂದು ಹೇಳಿದರು. ಕಾಂಗ್ರೆಸ್ ಪಕ್ಷವನ್ನು ನಾನು ನಿಂದಿಸುವುದಿಲ್ಲ. ನನಗೆ ಏನು ತಪ್ಪು ಮಾಡಿದೆ ಎಂಬ ಅನುಭವ ಹೇಳಿಕೊಟ್ಟ ಪಕ್ಷ ಅದು. ಎಲ್ಲಾ ಪಕ್ಷಗಳು ಒಳ್ಳೆಯದ್ದೇ ಇರುತ್ತವೆ. ಆದರೆ, ಅದನ್ನು ನಡೆಸಿಕೊಂಡು ಹೋಗುವ ನಾಯಕರು ಸರಿಯಿದ್ದಾಗ ಮಾತ್ರ ಪಕ್ಷ ಸರಿಯಿರುತ್ತದೆ ಎಂದು ಕಾಂಗ್ರೆಸ್ ನಾಯಕತ್ವ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಹಿಂದಿನ ವಿಧಾನಸಭೆ ಚುನಾವಣೆಗಳಲ್ಲಿ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ವಿಶ್ವಕರ್ಮ ಸಮುದಾಯದವರು ಯಾವತ್ತೂ ಸಂಘಟಿತರಾಗಲು ಜೆಡಿಎಸ್‌ನವರು ಅವಕಾಶ ಮಾಡಿಕೊಟ್ಟಿರಲಿಲ್ಲ. ಆದರೆ, ನಾನು ಖುದ್ದಾಗಿ ಅಲ್ಲಿ ನಿಂತು ಸಮುದಾಯದ ಎಲ್ಲರನ್ನೂ ಕಾಂಗ್ರೆಸ್ ಪರ ಸಂಘಟಿಸಿದೆ. ಇದರಿಂದ ಸಿದ್ದರಾಮಯ್ಯ ಗೆಲ್ಲುವಂತಾಯಿತು. ಆದರೆ. ಒಂದು ದಿನವೂ ವಿಶ್ವಕರ್ಮ ಸಮುದಾಯದಿಂದ ನಾನು ಗೆದ್ದೆ ಎಂದು ಸಿದ್ದರಾಮಯ್ಯ ಹೇಳಿಕೊಳ್ಳಲಿಲ್ಲ. ಹಾಗೆಂದು ಅವರನ್ನು ನಾನು ದೂರುವುದಿಲ್ಲ. ನಂಬಿಕೆ ವಿಚಾರದಲ್ಲಿ ಸರಿಯಾದ ಪಾಠ ಕಲಿಸಿದ್ದಾರೆ. ಆ ನಂಬಿಕೆಯ ಪಾಠದಿಂದಾಗಿಯೇ ಯಡಿಯೂರಪ್ಪ ಅವರನ್ನು ನಂಬಿ ಬಿಜೆಪಿ ಸೇರಿದ್ದೇನೆ ಎಂದರು. ಬಿಜೆಪಿಯ ತತ್ವ, ಸಿದ್ಧಾಂತ ಒಪ್ಪಿಕೊಂಡಿದ್ದೇನೆ. ಈ ದೇಶವನ್ನು ಎತ್ತರಕ್ಕೆ ಕೊಂಡೊಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸವನ್ನು ಅರ್ಥ ಮಾಡಿಕೊಂಡಿದ್ದೇನೆ. ಮೋದಿ ಅವರ ಸಾರಥ್ಯದಲ್ಲಿರುವ ಬಿಜೆಪಿ ಸೇರುತ್ತಿರುವುದೇ ನನಗೆ ಖುಷಿ ತಂದಿದೆ. ಹೀಗಾಗಿ ಪಕ್ಷದಲ್ಲಿ ಏನೇ ಕೆಲಸ ಕೊಡಲಿ, ಅದನ್ನು ಪ್ರಾಮಾಣಿಕತೆಯಿಂದ ಮಾಡುತ್ತೇನೆ. ಅಟೆಂಡರ್ ಕೆಲಸ ಕೊಟ್ಟರೂ ಮಾಡುತ್ತೇನೆ ಎಂದು ಹೇಳಿದರು.