Advertisement

ಕೌರವನ ರಕ್ತಚರಿತ್ರೆ

06:30 PM Nov 03, 2017 | |

“ಈ ಊರಿಗೊಂದು ರಕ್ತಚರಿತ್ರೆ ಇದೆ. ಇಲ್ಲಿನವರ ಸಹವಾಸ ಬೇಡ ಸಾರ್‌ …’ ಆಗಷ್ಟೇ ಸ್ಟೇಷನ್‌ಗೆ ಎಂಟ್ರಿಕೊಟ್ಟ ಇನ್ಸ್‌ಪೆಕ್ಟರ್‌ಗೆ, ಕಾನ್‌ಸ್ಟಬಲ್‌ ಹೇಳುತ್ತಾನೆ. ಆದರೆ, ಇನ್ಸ್‌ಪೆಕ್ಟರ್‌ ಅದನ್ನು ತಲೆಗೆ ಹಾಕಿಕೊಳ್ಳೋದಿಲ್ಲ. ಆತನ ಕಾಯಕದಲ್ಲಿ ಆತ ಮುಂದುವರಿಯುತ್ತಾನೆ. ಎಚ್ಚರಿಕೆ ಅಷ್ಟಕ್ಕೇ ಮುಗಿಯೋದಿಲ್ಲ, ಇನ್ಸ್‌ಪೆಕ್ಟರ್‌ನ ತಾತ ಕೂಡಾ ಆ ಊರಿನ ರಕ್ತಚರಿತ್ರೆಯ ಕಥೆ ಹೇಳಿಬಿಡುತ್ತಾರೆ.

Advertisement

ಅಲ್ಲಿಗೆ ಇನ್ಸ್‌ಪೆಕ್ಟರ್‌ ಕಿರಣ್‌ ಒಂದು ನಿರ್ಧಾರಕ್ಕೆ ಬಂದು ಬಿಡುತ್ತಾನೆ. ಏನೇ ಆದರೂ ಈ ಊರು ಬಿಟ್ಟು ಹೋಗಬಾರದೆಂದು. ಅಷ್ಟಕ್ಕೂ ಆ ನಿರ್ಧಾರದ ಹಿಂದಿನ ಕಾರಣ ಏನೆಂದು ತಿಳಿಯುವ ಕುತೂಹಲ ನಿಮಗಿದ್ದರೆ  “ಒನ್ಸ್‌ ಮೋರ್‌ ಕೌರವ’ ನೋಡಿ. ಮೇಲ್ನೋಟಕ್ಕೆ ನಿಮಗೆ “ಒನ್ಸ್‌ ಮೋರ್‌ ಕೌರವ’ ಚಿತ್ರ ಒಂದು ಪೊಲೀಸ್‌ ಸ್ಟೋರಿಯಂತೆ ಕಂಡರೂ ಇಲ್ಲಿ ಅದರಿಂದ ಹೊರತಾದ ಒಂದು ಕಥೆ ಇದೆ.

ಇಡೀ ಸಿನಿಮಾವನ್ನು ಮುನ್ನಡೆಸಿಕೊಂಡು ಹೋಗೋದು ಕೂಡಾ ಅದೇ. ಆ ಮಟ್ಟಿಗೆ ನಿರ್ದೇಶಕ ಎಸ್‌.ಮಹೇಂದರ್‌ ಒಂದು ಗಟ್ಟಿಕಥೆಯೊಂದಿಗೆ ಸಿನಿಮಾ ಮಾಡಿದ್ದಾರೆ. ಸಾಮಾನ್ಯವಾಗಿ ಮಹೇಂದರ್‌ ಚಿತ್ರಗಳಿಂದ ನೀವು ಏನು ಬಯಸುತ್ತೀರೋ ಆ ಅಂಶಗಳು “ಕೌರವ’ದಲ್ಲೂ ಮುಂದುವರಿದಿದೆ. ಲವ್‌, ಸೆಂಟಿಮೆಂಟ್‌, ಆ್ಯಕ್ಷನ್‌, ಗ್ರಾಮೀಣ ಸೊಗಡು, ಜೊತೆಗೆ ಕಾಮಿಡಿ … ಈ ಸರಕುಗಳನ್ನಿಟ್ಟುಕೊಂಡು ಇಡೀ ಸಿನಿಮಾ ಕಟ್ಟಿಕೊಟ್ಟಿದ್ದಾರೆ ಮಹೇಂದರ್‌. 

ಆರಂಭದಲ್ಲಿ ಚಿತ್ರ  ಊರೂದ್ಧಾರ ಮಾಡುವ ಒಬ್ಬ ಪೊಲೀಸ್‌ ಆಫೀಸರ್‌ ಕಥೆಯಂತೆ ಸಾಗುತ್ತದೆ. ಬಹುತೇಕ ಮೊದಲರ್ಧ ಊರಿಗೆ ಎಂಟ್ರಿಕೊಡುವ ಪೊಲೀಸ್‌ ಆಫೀಸರ್‌, ಆತನ ಒಳ್ಳೆಯ ಗುಣ, ಗ್ಯಾಪಲ್ಲೊಂದು ಫೈಟ್‌ … ಇಂತಹ ದೃಶ್ಯಗಳಲ್ಲಿ ಸಿನಿಮಾ ಮುಗಿದು ಹೋಗುತ್ತದೆ. ಆದರೆ, ಚಿತ್ರದ ಕಥೆ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಹುಲಿಗುಡ್ಡ ಎಂಬ ಊರಿನ ರಕ್ತಚರಿತ್ರೆಯ ಹಿನ್ನೆಲೆಯನ್ನು ಬಿಚ್ಚಿಡುವ ಜೊತೆಗೆ ಒಂದು ಸೆಂಟಿಮೆಂಟ್‌ ಕಥೆಯನ್ನು ಹೇಳುತ್ತಾ ಹೋಗುತ್ತಾರೆ.

ಮೊದಲೇ ಹೇಳಿದಂತೆ ಇದು ಗ್ರಾಮೀಣ ಸೊಗಡಿನ ಚಿತ್ರ. ಹಾಗಾಗಿ, ಇಲ್ಲಿ ಊರಗೌಡ, ಪುಂಡಾಟಿಕೆ, ಅವ್ಯವಹಾರ ಎಲ್ಲವೂ ಇದೆ. ಕಥೆಯ ವಿಷಯದಲ್ಲಿ “ಒನ್ಸ್‌ ಮೋರ್‌ ಕೌರವ’ ತೀರಾ ಹೊಸದೇನಲ್ಲ. ಈಗಾಗಲೇ ದ್ವೇಷದ ಹಿನ್ನೆಲೆಯಲ್ಲಿ ಸಾಗುವ ಹಲವಾರು ಕಥೆಗಳು ಬಂದಿವೆ. ಆದರೆ, ಎಸ್‌. ಮಹೇಂದರ್‌ ಮಾತ್ರ ಹೆಚ್ಚು ಅಬ್ಬರವಿಲ್ಲದೇ, ತಮ್ಮದೇ ಶೈಲಿಯಲ್ಲಿ ಹಳ್ಳಿ ಹಿನ್ನೆಲೆಯಲ್ಲಿ ಇಡೀ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ.

Advertisement

ಹಾಗಾಗಿ, ಸಿನಿಮಾ ಕೂಡಾ ತಣ್ಣನೆ ಸಾಗುತ್ತದೆ. ಸಾಮಾನ್ಯವಾಗಿ ಹೊಸ ಹೀರೋ ಲಾಂಚ್‌ ಅಂದರೆ ಅದರಲ್ಲೂ ಪೊಲೀಸ್‌ ಕ್ಯಾರೆಕ್ಟರ್‌ ಎಂದರೆ ಅಬ್ಬರದ ಡೈಲಾಗ್‌, ಸುಖಾಸುಮ್ಮನೆ ಹೈವೋಲ್ಟೆಜ್‌ ಬಿಲ್ಡಪ್‌ ಫೈಟ್‌ಗಳಿರುತ್ತವೆ. ಆದರೆ, “ಒನ್ಸ್‌ ಮೋರ್‌ ಕೌರವ’ ಮಾತ್ರ ಅವೆಲ್ಲದರಿಂದ ಮುಕ್ತ. ಇಲ್ಲಿ ಅನಾವಶ್ಯಕ ಫೈಟ್‌ ಆಗಲೀ, ಬಿಲ್ಡಪ್‌ ಆಗಲೀ ಇಲ್ಲ. ಸನ್ನಿವೇಶಕ್ಕನುಗುಣವಾಗಿ ಹಾಡು, ಫೈಟ್‌ ಬರುತ್ತದೆಯಷ್ಟೇ.

ಚಿತ್ರದಲ್ಲಿ ಕೆಲ ದೃಶ್ಯಗಳಿಗೆ ಕತ್ತರಿ ಹಾಕುವ ಅವಕಾಶ ನಿರ್ದೇಶಕರಿಗಿತ್ತು. ಮುಖ್ಯವಾಗಿ ನಾಟಕ ಅಭ್ಯಾಸಿಸುವ ದೃಶ್ಯ. ಆಗಾಗ ಬಂದು ಹೋಗುವ ದೃಶ್ಯಗಳು ಕಥೆಗೆ ಓಘಕ್ಕೆ ಧಕ್ಕೆಯುಂಟು ಮಾಡುವ ಜೊತೆಗೆ ಚಿತ್ರದಿಂದ ಹೊರತಾಗಿ ಕಾಣುತ್ತದೆ. ಅದು ಬಿಟ್ಟರೆ “ಒನ್ಸ್‌ ಮೋರ್‌ ಕೌರವ’ ಯಾವುದೇ ಡಬಲ್‌ ಮೀನಿಂಗ್‌ ಇಲ್ಲದ, ಪಕ್ಕಾ ಗ್ರಾಮೀಣ ಹಿನ್ನೆಲೆಯ ಸಿನಿಮಾ.

ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ ನರೇಶ್‌ ಗೌಡ ಅವರು ಹೆಚ್ಚು ಎಕ್ಸೆ„ಟ್‌ ಆಗದೇ ನಿರ್ದೇಶಕರ ಚೌಕಟ್ಟಿನಡಿ ನಟಿಸಿರೋದು ಎದ್ದು ಕಾಣುತ್ತದೆ. ಹಾಗಾಗಿ, ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಹಿಸಿದ್ದಾರೆ. ಆ್ಯಕ್ಷನ್‌ ದೃಶ್ಯಗಳಲ್ಲಿ ಇಷ್ಟವಾಗುವ ನರೇಶ್‌, ಸೆಂಟಿಮೆಂಟ್‌ ಹಾಗೂ ಲವ್‌ ಎಪಿಸೋಡ್‌ಗಳಲ್ಲಿ ಮತ್ತಷ್ಟು ಪಳಗಬೇಕಿದೆ. ನಾಯಕಿ ಅನುಷಾಗೆ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ ಮತ್ತು ಪ್ರಯತ್ನಿಸಿದ್ದಾರೆ.

ಚಿತ್ರದ ಟೈಟಲ್‌ “ಕೌರವ’ ಇಲ್ಲಿ ಯಾರು ಎಂಬ ಪ್ರಶ್ನೆ ಬರಬಹುದು. ಅದು ದೇವರಾಜ್‌. ಇಡೀ ಚಿತ್ರದ ಕಥೆ ತೆರೆದುಕೊಳ್ಳುವುದು ಅವರ ಹುಲಿಯಪ್ಪ ಪಾತ್ರದ ಮೂಲಕ. ಫ್ಲ್ಯಾಶ್‌ಬ್ಯಾಕ್‌ನಲ್ಲಿ ಅವರ ಪಾತ್ರ ತೆರೆದುಕೊಳ್ಳುತ್ತದೆ. ಅವರ ಗೆಟಪ್‌, ಖದರ್‌ ಇಷ್ಟವಾಗುತ್ತದೆ. ಉಳಿದಂತೆ ಹಿರಿಯ ನಟರಾದ ಶಿವರಾಂ, ಉಮೇಶ್‌ ಸೇರಿದಂತೆ ಇತರರು ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶ್ರೀಧರ್‌ ಸಂಭ್ರಮ್‌ ಸಂಗೀತದ ಎರಡು ಹಾಡು ಇಷ್ಟವಾಗುತ್ತದೆ.

ಚಿತ್ರ: ಒನ್ಸ್‌ ಮೋರ್‌ ಕೌರವ
ನಿರ್ಮಾಣ: ನರೇಶ್‌ ಗೌಡ
ನಿರ್ದೇಶನ: ಎಸ್‌.ಮಹೇಂದರ್‌
ತಾರಾಗಣ: ನರೇಶ್‌ ಗೌಡ, ಅನುಷಾ, ದೇವರಾಜ್‌, ಶಿವರಾಮ್‌ ಮತ್ತಿತರರು. 

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next