ಕೊರಟಗೆರೆ: ಕೋರಾ ಮತ್ತು ಪುರವಾರ ಜಿಪಂ ಕ್ಷೇತ್ರಕ್ಕೆ ಸರ್ಕಾರದ ಆದೇಶದಂತೆ ಅನುದಾನ ಹಂಚಿಕೆ ಮಾಡಿ ನೀವೇನು ನನ್ನ ಕ್ಷೇತ್ರಕ್ಕೆ ಏನು ದಾನ ಕೊಡಬೇಡಿ, ಟಾಸ್ಕ್ ಫೋರ್ಸ್ ಸಮಿತಿಯಿಂದ ನನ್ನ ಕೈಬಿಟ್ಟಿರುವ ಹಿಂದಿರುವ ಉದ್ದೇಶವೇನು ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ತುಮಕೂರು ಗ್ರಾಮಾಂತರ ಮತ್ತು ಮಧುಗಿರಿ ತಹಶೀಲ್ದಾರ್, ತಾಲೂಕು ಪಂಚಾಯಿತಿ ಇಒ ವಿರುದ್ಧ ಕಿಡಿಕಾರಿದರು.
ಪಟ್ಟಣದ ತಾಪಂ ಸಭಾಂಗಣರ ಏರ್ಪಡಿಸಲಾಗಿದ್ದ ತುರ್ತುಸಭೆಯಲ್ಲಿ ಮಾತನಾಡಿ, ತುಮಕೂರು ಗ್ರಾಮಾಂತರ, ಕೊರಟಗೆರೆ ಮತ್ತು ಮಧುಗಿರಿ ತಾಲೂಕು ಬರ ಪೀಡಿತವೆಂದು
ಸರ್ಕಾರ ಘೋಷಣೆ ಮಾಡಿ ಪ್ರತಿ ತಾಲೂಕಿಗೆ 1 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದರು. ತುಮಕೂರು ಗ್ರಾಮಾಂತರದ ಕೋರಾ ಮತ್ತು ಮಧುಗಿರಿಯ ಪುರವಾರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಕೊರಟಗೆರೆ ಕ್ಷೇತ್ರದಲ್ಲಿನ ಕುಡಿವ ನೀರಿನ ಸಮಸ್ಯೆ ಮತ್ತು ಟಾಸ್ಕ್ ಫೋರ್ಸ್ ಕಮಿಟಿ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಲಾಕ್‌ಡೌನ್ ಸಮಸ್ಯೆಯಿಂದ ಕೊರಟಗೆರೆ ಕ್ಷೇತ್ರದಲ್ಲಿ 50 ಕೋಟಿ ಹುಣಸೆ ಮತ್ತು 10 ಕೋಟಿ ಹೂವಿನ ಬೆಳೆ ನಷ್ಟವಾಗಿದೆ. ಮಾವು, ಹೂವು, ಬಾಳೆ ಮತ್ತು ತರಕಾರಿ ನಷ್ಟದ ಅಂದಾಜು ವೆಚ್ಚದ ಅಂಕಿ ಅಂಶ ತೋಟಗಾರಿಕೆ ಇಲಾಖೆ ನೀಡಬೇಕಾಗಿದೆ. ಬಡಜನತೆ ಮತ್ತು ಕೂಲಿ ಕಾರ್ಮಿಕರ ಸಮಸ್ಯೆ ಹೆಚ್ಚಾಗತೊಡಗಿದೆ. ಕೂಲಿ ಕಾರ್ಮಿಕ ಮತ್ತು ರೈತಾಪಿವರ್ಗಕ್ಕೆ ರಾಜ್ಯ ಸರ್ಕಾರ ನೆರವು ನೀಡಬೇಕು ಎಂದು ಒತ್ತಾಯಿಸಿದರು. ಕೊರಟಗೆರೆ, ಮಧುಗಿರಿ ಮತ್ತು ಪಾವಗಡದ ಗಡಿಭಾಗ ರಕ್ಷಣೆಗೆ ಮಧುಗಿರಿ ಎಸಿ ನೇತೃತ್ವದ ತಂಡ ಹಗಲುರಾತ್ರಿ ಶ್ರಮಿಸಿದೆ. ತುಮಕೂರು ಜಿಲ್ಲೆಯ ಜನತೆಯ ಆರೋಗ್ಯ ರಕ್ಷಣೆಗಾಗಿ ಹಗಲುರಾತ್ರಿ ದುಡಿಯುತ್ತಿರುವ ಕೊರೊನಾ ಸೈನಿಕರಿಗೆ ನಾವೆಲ್ಲರೂ ಗೌರವಿಸಬೇಕು ಎಂದು ಹೇಳಿದರು.
ತುಮಕೂರು ಜಿಪಂ ಉಪಕಾರ್ಯದರ್ಶಿ ರಮೇಶ್, ಮಧುಗಿರಿ ಎಸಿ ಡಾ.ನಂದಿನಿದೇವಿ, ತಾಪಂ ಅಧ್ಯಕ್ಷೆ ನಾಜೀಮಾಬೀ, ಕೊರಟಗೆರೆ ತಹಶೀಲ್ದಾರ್ ಗೋವಿಂದ ರಾಜು, ಇಒ
ಶಿವಪ್ರಕಾಶ್, ತುಮಕೂರು ಗ್ರಾಮಾಂತರ ತಹಶೀಲ್ದಾರ್ ಮೋಹನ್, ಇಒ ಜೈಪಾಲ್, ಮಧುಗಿರಿ ಇಒ ದೊಡ್ಡಸಿದ್ದಪ್ಪ, ಕೃಷಿ ಇಲಾಖೆ ನಾಗರಾಜು ಇದ್ದರು.