ಕೊರೊನಾ ಎರಡನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಕರ್ಫ್ಯೂ ಜಾರಿಯಿಂದ ಸಂಕಷ್ಟಕ್ಕೆ ಸಿಲುಕಿರುವ ದಿನದ ದುಡಿಮೆ ನಂಬಿ ಜೀವನ ನಡೆಸುತ್ತಿರುವವರು, ಕೈಗೆ ಬೆಳೆ ಬಂದರೂ ಮಾರಾಟವಾಗದೆ ನಷ್ಟ ಅನುಭವಿಸಿದ ರೈತರು ಹಾಗೂ ಕೆಲಸ ಇಲ್ಲದೆ ಕಷ್ಟ ಅನುಭವಿಸುತ್ತಿರುವ ಆಟೋ, ಟ್ಯಾಕ್ಸಿ ಚಾಲಕರು, ಕುಶಲ ಕರ್ಮಿಗಳು, ಬೀದಿ ವ್ಯಾಪಾರಿಗಳು ಸೇರಿದಂತೆ ಶ್ರಮಿಕ ವರ್ಗಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊನೆಗೂ ಒಟ್ಟಾರೆ 1,111 ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ.
ದುಡಿಮೆ ನಿಂತು ಸಂಕಷ್ಟ ಎದುರಾದಾಗ ಕಷ್ಟದಲ್ಲಿರುವ ವರ್ಗದ ನೆರವಿಗೆ ಬರುವುದು ಯಾವುದೇ ಸರಕಾರದ ಕರ್ತವ್ಯ ಕೂಡ. ಆ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಾರದ ಹಿಂದೆಯೇ ಈ ಬಗ್ಗೆ ಆರ್ಥಿಕ ಇಲಾಖೆ ಅಧಿಕಾರಿಗಳು ಹಾಗೂ ಸಂಪುಟದ ಸಹೋದ್ಯೋಗಿಗಳ ಜತೆ ಚರ್ಚಿಸಿದ್ದರು. ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತಿತರ ವಿಚಾರಗಳ ಬಗ್ಗೆ ಅಧ್ಯಯನ ನಡೆಸಿ ಅಂತಿಮವಾಗಿ ಪ್ಯಾಕೇಜ್ ಘೋಷಿಸಿದ್ದಾರೆ. ಇದು ಸ್ವಾಗತಾರ್ಹ ಕ್ರಮ. ನೆರೆ ರಾಜ್ಯಗಳಲ್ಲಿ ಈಗಾಗಲೇ ಪ್ಯಾಕೇಜ್ ಘೋಷಿಸಿದ್ದರಿಂದ ವಿಪಕ್ಷಗಳು ಸಹ ನಿತ್ಯ ಪ್ಯಾಕೇಜ್ ಘೋಷಣೆಗಾಗಿ ಸರಕಾರದ ಮೇಲೆ ಒತ್ತಡ ಹಾಕುತ್ತಲೇ ಇದ್ದವು. ಬಡವರ್ಗವೂ ಪ್ಯಾಕೇಜ್‌ನ ನಿರೀಕ್ಷೆಯಲ್ಲಿತ್ತು.
ಈಗಿನ ಮಟ್ಟಕ್ಕೆ ಹೇಳುವುದಾದರೆ ರಾಜ್ಯ ಸರಕಾರ ಪ್ಯಾಕೇಜ್ ಮೂಲಕ ಜನರಿಗೆ ಸ್ಪಂದಿಸುವ ಕೆಲಸ ಮಾಡಿದೆ. ಇತ್ತೀಚೆಗೆ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯದವರಿಗೂ ಮಾಸಿಕ 10 ಕೆ.ಜಿ. ಅಕ್ಕಿ ನೀಡುವ ತೀರ್ಮಾನ ಕೈಗೊಂಡಿತ್ತು. ಇಂದಿರಾ ಕ್ಯಾಂಟೀನ್‌ಗಳಲ್ಲಿ ಮೂರು ಹೊತ್ತು ಉಚಿತ ಊಟ ಸಹ ನೀಡಿತ್ತು. ಜತೆಗೆ ಕೇಂದ್ರ ಸರಕಾರವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಎರಡು ತಿಂಗಳು ಪ್ರತೀ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ ನೀಡಲು ತೀರ್ಮಾನಿಸಿತ್ತು. ಇವೆಲ್ಲವೂ ಬಡವರ್ಗ ಸ್ವಲ್ಪ ಉಸಿರಾಡುವಂತೆ ಮಾಡಿತ್ತು.
ಇದೀಗ ಹೂವು, ಹಣ್ಣು, ತರಕಾರಿ ಬೆಳೆದು ನಷ್ಟ ಮಾಡಿಕೊಂಡಿರುವ ರೈತರಿಗೆ ಹೆಕ್ಟೇರ್‌ಗೆ 10 ಸಾವಿರ ರೂ., ಆಟೋ, ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಹಾಗೂ ಕಟ್ಟಡ ಕಾರ್ಮಿಕರಿಗೆ 3 ಸಾವಿರ ರೂ., ಕೌÒರಿಕರು, ಅಗಸರು, ಟೈಲರ್, ಹಮಾಲಿ, ಕುಂಬಾರರು, ಅಕ್ಕ ಸಾಲಿಗರು, ಭಟ್ಟಿ ಕಾರ್ಮಿಕರು, ಮೆಕ್ಯಾನಿಕ್, ಕಮ್ಮಾರ, ಗೃಹ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳಿಗೆ 2 ಸಾವಿರ ರೂ. ಅನಂತರ ಆರ್ಥಿಕ ಪ್ಯಾಕೇಜ್ ಘೋಷಿಸಿರುವುದರಿಂದ 8 ಲಕ್ಷ ಕುಟುಂಬಗಳಿಗೆ ನೆರವಾಗಲಿದೆ. ಇದರ ಜತೆಗೆ ಕಲಾವಿದರು ಹಾಗೂ ಕಲಾ ತಂಡಗಳಿಗೆ 3 ಸಾವಿರ ರೂ. ಘೋಷಿಸಿರುವುದು ಉತ್ತಮ ಕೆಲಸ.
ರೈತರು ಮತ್ತು ಸ್ವ ಸಹಾಯ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಭೂ ಅಭಿವೃದ್ಧಿ ಬ್ಯಾಂಕ್‌ಗಳಿಂದ ಪಡೆದಿರುವ ಸಣ್ಣ ಮತ್ತು ಮಧ್ಯಮ ಹಾಗೂ ದೀರ್ಘಾವಧಿ ಸಾಲಗಳ ಕಂತು ಮರುಪಾವತಿ ಮೇ 1ರಿಂದ ಜುಲೈ 31ರ ವರೆಗೂ ಮುಂದೂಡಿರುವುದರಿಂದ
4.25 ಲಕ್ಷ ರೈತ ಕುಟುಂಬಗಳಿಗೆ, ಲಕ್ಷಾಂತರ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಅನುಕೂಲವಾಗಲಿದೆ. ಆರ್ಥಿಕ ಸಂಕಷ್ಟದಲ್ಲೂ ಇತಿ ಮಿತಿಯಲ್ಲಿ ಅಲ್ಪ ಪ್ರಮಾಣದ ಪ್ಯಾಕೇಜ್ ಘೋಷಿಸಿ ಕಷ್ಟಕ್ಕೆ ಸಿಲುಕಿರು ವವರ ನೆರವಿಗೆ ಧಾವಿಸುವ ಮೂಲಕ ಸರಕಾರ ನಿಮ್ಮ ಜತೆಗಿದೆ ಎಂಬ ಧೈರ್ಯ ತುಂಬಿದೆ.