Advertisement
ರಾಜ್ಯಾದ್ಯಂತ ಸಾವಿರಾರು ಆರ್ಕೆಸ್ಟ್ರಾಗಳಿದ್ದು, 50 ಸಾವಿರ ಮಂದಿ ಇದೇ ಕಸುಬನ್ನು ನಂಬಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ವರ್ಷದ 8 ತಿಂಗಳು ಕೆಲಸವಿದ್ದರೆ ನಾಲ್ಕು ತಿಂಗಳು ಇಲ್ಲ. ಆದರೆ ಈ ವರ್ಷ ಕೋವಿಡ್ ಕಾರಣದಿಂದ 2 ತಿಂಗಳಿನಿಂದ ಬಿಡಿಗಾಸು ನೋಡಿಲ್ಲ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಲವರ ಸಮಸ್ಯೆ ಮತ್ತು ಸವಾಲುಗಳನ್ನು ಅರಿತು ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಮೂಲಕ ಅಸಂಘಟಿತ ಕಾರ್ಮಿಕರ ಬೆನ್ನಿಗೆ ನಿಂತಿದೆ. ಆದರೆ, ಆರ್ಕೆಸ್ಟ್ರಾವನ್ನೇ ನಂಬಿದ ರಾಜ್ಯದ 50 ಸಾವಿರಕ್ಕೂ ಅಧಿಕ ಕಲಾವಿದರು ಇಂದಿಗೂ ಸರ್ಕಾರದ ನೆರವಿನ ದಾರಿ ಎದುರು ನೋಡುತ್ತಿದ್ದಾರೆ.
ಚತುರ್ಥಿಯಿಂದ ಫೆಬ್ರವರಿ-ಮಾರ್ಚ್ ತಿಂಗಳವರೆಗೆ ಆರ್ಕೆಸ್ಟ್ರಾಗಳು ಹೆಚ್ಚು ನಡೆಯುತ್ತವೆ. ಸಭೆ, ಸಮಾರಂಭ, ಮದುವೆ ಇತ್ಯಾದಿ ಕಾರ್ಯಕ್ರಮಗಳಲ್ಲಿ
ಆರ್ಕೆಸ್ಟ್ರಾ ಮಾಮೂಲಿಯಾಗಿದೆ. ಆದರೆ, ರಾಜ್ಯಕ್ಕೆ ಕೊರೊನಾ ಕಾಲಿಟ್ಟ ಮೇಲೆ ಆರ್ಕೆಸ್ಟ್ರಾಗಳು ಕೂಡ ಮೂಲೆ ಸೇರಿವೆ. ಕಲೆಯನ್ನೇ ನೆಚ್ಚಿಕೊಂಡಿದ್ದವರ ಬದುಕು ಮೂರಾಬಟ್ಟೆಯಾಗಿದೆ. ಆರ್ಥಿಕ ಸಂಕಷ್ಟಕ್ಕೆ ಒಳಗಾದ ಕೆಲವರು ಆತ್ಮಹತ್ಯೆ ದಾರಿಯನ್ನೂ ಹಿಡಿಯುವಂತಾಗಿದೆ. ಲಾಕ್‌ಡೌನ್‌ನಿಂದ ಜೀವನ ನಡೆಸುವುದು ಕಷ್ಟಕರವಾಗಿದೆ. ಹಾಗಾಗಿ, ನಮಗೆ ಸರ್ಕಾರದ ತಾತ್ಕಾಲಿಕ ನೆರವು ಅಗತ್ಯವಿಲ್ಲ. ಬದಲಿಗೆ ಶಾಶ್ವತವಾಗಿ ಕಲಾವಿದರೆಂದು ಪರಿಗಣಿಸಿ ರಂಗಭೂಮಿ ಲಾವಿದರಂತೆ ಮಾಸಾಶನ ನೀಡಬೇಕೆಂಬುದು ಆರ್ಕೆಸ್ಟ್ರಾ ಕಲಾವಿದರ ಒತ್ತಾಸೆ. ಆರ್ಕೆಸ್ಟ್ರಾ ಬಿಟ್ಟರೆ ಬೇರೆ ಉದ್ಯೋಗ ಗೊತ್ತಿಲ್ಲ. 30-40 ವರ್ಷಗಳಿಂದ ಹಲವರು ಇದೇ ವೃತ್ತಿ ಮಾಡಿಕೊಂಡು ಬಂದಿದ್ದೇವೆ. ಇದೀಗ ಸರ್ಕಾರ ನಮ್ಮ ಕೈ ಹಿಡಿಯದಿದ್ದರೆ ಆತ್ಮಹತ್ಯೆಯೊಂದೇ ಉಳಿದಿರುವ ದಾರಿಯಾಗಿದೆ ಎನ್ನುತ್ತಾರೆ ಅಖೀಲ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಸಂಸ್ಥೆಯ ಜಿಲ್ಲಾ ಸಮಿತಿ ಸಂಚಾಲಕ ವಿಶ್ವನಾಥ. ರಾಜ್ಯದಲ್ಲಿ
ಬೆಂಗಳೂರು, ತುಮಕೂರಿನಲ್ಲಿ ಹೆಚ್ಚಿನ ಪ್ರಮಾಣದ ಆರ್ಕೆಸ್ಟ್ರಾ ತಂಡಗಳಿವೆ. ಉಳಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲೂ ಆರ್ಕೆಸ್ಟ್ರಾ ತಂಡಗಳಿವೆ. ಬರೋಬ್ಬರಿ 50 ಸಾವಿರ ಕಲಾವಿದರು ಹಾಗೂ ಅವರನ್ನು ನಂಬಿಕೊಂಡ 30 ಸಾವಿರ ಕುಟುಂಬಗಳಿಗೆ ಆರ್ಕೆಸ್ಟ್ರಾಗಳೇ ಆಸರೆಯಾಗಿವೆ. ಆದರೆ ಮೂರು ತಿಂಗಳಿಂದ ಒಂದೇ ಒಂದು ಕಾರ್ಯಕ್ರಮ ಪ್ರದರ್ಶಿಸಲಾಗದ ಸ್ಥಿತಿ ಎದುರಾಗಿದೆ. ಇದರಿಂದ ಕಲಾವಿದರು ಆರ್ಥಿಕವಾಗಿ ಕುಗ್ಗುವ ಜತೆಗೆಮಾನಸಿಕ ಒತ್ತಡಕ್ಕೂ ಒಳಗಾಗುತ್ತಿದ್ದಾರೆ.
Related Articles
ಆರ್ಕೆಸ್ಟ್ರಾವೊಂದರಲ್ಲಿ ಮ್ಯೂಸಿಶಿಯನ್ಸ್, ಸಿಂಗರ್, ಡ್ಯಾನ್ಸರ್‌ಗಳು ಸೇರಿ 15ರಿಂದ 20 ಜನರ ತಂಡಗಳಿವೆ. ಯಾವುದೇ ಸಭೆ, ಸಮಾರಂಭಗಳಿಗೆ ಆರ್ಕೆಸ್ಟ್ರಾ ತಂಡ ಆಹ್ವಾನಿಸುವುದು ಸಹಜವಾಗಿದೆ. ಆದರೆ ಒಳ್ಳೆಯ ಸೀಜನ್ ಸಮಯದಲ್ಲಿ ಲಾಕ್‌ಡೌನ್ ಬಡ ಕಲಾವಿದರ ಬದುಕನ್ನೇ ಲಾಕ್ ಮಾಡಿದೆ.
Advertisement
ನಮ್ಮಲ್ಲಿ ಹಾಡು, ನೃತ್ಯ, ಮ್ಯೂಸಿಕ್ ಕಲಾವಿದರಿದ್ದಾರೆ. ದುರಾದೃಷ್ಟವಶಾತ್ ಸರಕಾರ ನಮ್ಮನ್ನು ಕಲಾವಿದರೆಂದೇ ಪರಿಗಣಿಸಿಲ್ಲ. ಸರಕಾರ ಆರ್ಕೆಸ್ಟ್ರಾದವರನ್ನು ಕಲಾವಿದರೆಂದು ಪರಿಗಣಿಸಬೇಕು. ಎರಡು ತಿಂಗಳಿಂದ ಅತಂತ್ರವಾಗಿರುವ ನಮಗೆ ಸಹಾಯ ಮಾಡಬೇಕು. ವಿಶ್ವನಾಥ್, ಭದ್ರಾವತಿ ನ್ಯೂ ಚಂದನ್ ಮ್ಯೂಸಿಕಲ್ ನೈಟ್ಸ್ ಕಲಾವಿದ