Advertisement

ಕೋವಿಡ್-19 ಭೀತಿ: ಸರಕಾರಿ ಸೇವೆ ಭಾಗಶಃ ಸ್ಥಗಿತ

11:20 AM Mar 22, 2020 | mahesh |

ಉಡುಪಿ: ಕೊರೊನಾ ವೈರಾಣು ವ್ಯಕ್ತಿಗೆ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋಡ್‌-19 ರೆಗ್ಯೂಲೇಷನ್ಸ್‌-2020ರ ನಿಯಮ 12ರಲ್ಲಿ ಹಾಗೂ Disaster Management Act 2005 ಕಲಂ 24 (ಎ), (ಬಿ), 30 (2)ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಈ ಕೆಳಕಂಡ ಸೇವೆಗಳನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್‌ ಆದೇಶ ಹೊರಡಿಸಿದ್ದಾರೆ.

Advertisement

ಸ್ಥಗಿತಗೊಂಡ ಸೇವೆಗಳು
ಜಿಲ್ಲಾ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯ ಆಧಾರ್‌ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿ ರುವ ಸೇವೆಗಳು, ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೀಡಲಾಗುತ್ತಿರುವ ಹೊಸ ವಾಹನ ಚಾಲನಾ ರಹದಾರಿ, ಕಲಿಯುವವರ ಪರವಾನಿಗೆ ನೋಂದಣಿ (ಎಪ್ರಿಲ್‌ 15ರ ವರೆಗೆ ಸಿಂಧುತ್ವ ಹೊಂದಿರುವ ಕಲಿಕಾ ಚಾಲನಾ ಅನುಜ್ಞಾ ಪತ್ರಗಳ ಅಭ್ಯರ್ಥಿಗಳಿಗೆ ಮಾತ್ರ ವಾಹನ ಚಾಲನಾ ಅನುಜ್ಞಾ ಪತ್ರಗಳಿಗೆ ಪರೀಕ್ಷೆಗೆ ಹಾಜರಾಗಲು ಈ ನಿರ್ಬಂಧ ಅನ್ವಯಿಸುವುದಿಲ್ಲ), ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾ.ಪಂ.ವ್ಯಾಪ್ತಿಗಳಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳು ( ಸಾರ್ವಜನಿಕ ಹರಾಜುಗಳು, ಗ್ರಾಮಸಭೆ, ಇತರ ಲೈಸೆನ್ಸ್‌ ನೀಡುವಿಕೆ ಸೇವೆಗಳು), ಸರಕಾರಿ ಸಂಘಗಳ ಉಪ ನಿಬಂಧಕರು ಹಾಗೂ ಸಹಕಾರ ಸಂಘಗಳ ಸಹಾಯಕ ಉಪ ನಿಬಂಧಕರು, ಸಹಕಾರ ಇಲಾಖೆಗೆ ಸಂಬಂಧಿಸಿದಂತೆ ನೀಡಲಾಗುವ ಸೇವೆಗಳು (ಬ್ಯಾಂಕಿಂಗ್‌ ಹೊರತುಪಡಿಸಿ), ಕೃಷಿ/ ತೋಟಗಾರಿಕೆ /ಮೀನುಗಾರಿಕೆ ಇಲಾಖೆಯಲ್ಲಿನ ವಿವಿಧ ಸೇವೆಗಳು (ರೈತರ ಆತ್ಮಹತ್ಯೆ, ರೈತರ ಆಕಸ್ಮಿಕ ಮರಣಗಳು ಹಾಗೂ ಇತರ ತುರ್ತು ವಿಷಯಗಳನ್ನು ಹೊರತುಪಡಿಸಿ), ಸಮಾಜ ಕಲ್ಯಾಣ ಇಲಾಖೆ / ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ/ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಅಧೀನದಲ್ಲಿ ಬರುವ ನಿಗಮ ಮಂಡಳಿಗಳ ಸೇವೆಗಳು, ಯುವ ಸಶಕ್ತೀಕರಣ, ಕ್ರೀಡಾ ಇಲಾಖೆ, ಕನ್ನಡ -ಸಂಸ್ಕೃತಿ ಇಲಾಖೆಯ ಸೇವೆಗಳು ಸ್ಥಗಿತಗೊಳ್ಳಲಿವೆ.

ಕಚೇರಿ ತೆರೆಯಬೇಕು
ಮೇಲ್ಕಂಡ ಸೇವೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದರೂ ಸಹ ಈ ಕಚೇರಿಗಳಿಗೆ ರಜೆ ಘೋಷಣೆ ಮಾಡಿರುವುದಿಲ್ಲ ಹಾಗೂ ಸಂಬಂಧಿಸಿದ ಎಲ್ಲಾ ಅಧಿಕಾರಿ / ಸಿಬಂದಿ ವರ್ಗದವರು ಎಂದಿನಂತೆ ಕಚೇರಿಯಲ್ಲಿ ಲಭ್ಯ ಇರಬೇಕು. ಅನಧಿಕೃತ ಗೈರು ಹಾಜರಿ ಅಥವಾ ಅನಧಿಕೃತವಾಗಿ ಕಚೇರಿಯನ್ನು ತೆರೆಯದಿದ್ದಲ್ಲಿ ಅಧಿಕಾರಿ/ ಸಿಬಂದಿಗಳ ಮೇಲೆ ಕಾನೂನು ಕ್ರಮ ಜರಗಿಸಲಾಗುತ್ತದೆ.

ಆದೇಶದ ಅನ್ವಯ ಸರಕಾರದ ಸೇವೆಗಳನ್ನು ಒದಗಿಸುವ ಕಚೇರಿ/ ಕೇಂದ್ರಗಳಲ್ಲಿ ಸೇವೆಗಳನ್ನು ಒದಗಿಸದ ಕಾರಣ ಯಾವುದೇ ಸರಕಾರಿ/ ಖಾಸಗಿ/ ನಿಗಮ ಮಂಡಳಿಗಳು ಯಾವುದೇ ವ್ಯಕ್ತಿಯ ದಾಖಲಾತಿಗಳನ್ನು ಹಾಜರುಪಡಿಸದ ಕಾರಣದಿಂದ ಅಂತಹ ವ್ಯಕ್ತಿಗೆ ವ್ಯತಿರಿಕ್ತವಾಗುವ ರೀತಿಯ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ ಹಾಗೂ ಅಂತಹ ದಾಖಲಾತಿಯನ್ನು ಹಾಜರುಪಡಿಸಲು ಸಾಕಷ್ಟು ಕಾಲಾವಕಾಶವನ್ನು ನೀಡಬೇಕು.

ಧಾರ್ಮಿಕ ಕೇಂದ್ರಗಳಿಗೆ ಭೇಟಿ ನಿರ್ಬಂಧ
ಸರಕಾರಿ ಕಚೇರಿಗಳಿಗೆ (ಜಿಲ್ಲಾಧಿಕಾರಿಗಳು / ಉಪವಿಭಾಗಾಧಿಕಾರಿಗಳು/ ತಹಶೀ ಲ್ದಾರರು/ ಸ್ಥಳೀಯ ಸಂಸ್ಥೆಗಳು/ ಇತರೆ ಕಚೇರಿಗಳು ಸೇರಿದಂತೆ) ಅಥವಾ ಧಾರ್ಮಿಕ ಕೇಂದ್ರಗಳಿಗೆ ಸಾರ್ವ ಜನಿಕರು ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ. ಈ ನಿರ್ಬಂಧ ತುರ್ತು ಸಂದರ್ಭದಲ್ಲಿ ಹಾಗೂ ತುರ್ತು ವಿಷಯಗಳಿಗೆ ಅನ್ವಯವಾಗುವುದಿಲ್ಲ.ಮೇಲ್ಕಂಡ ಸೇವೆಗಳಲ್ಲಿ ಸರಕಾರ ಹಾಗೂ ನ್ಯಾಯಾಲಯಗಳಿಗೆ ಸಂಬಂಧಿಸಿದ ಪ್ರಕರಣಗಳು ಮತ್ತು ಅತಿ ತುರ್ತು ಪ್ರಕರಣಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

Advertisement

ಸ್ಥಗಿತದ ಆದೇಶ ಅನ್ವಯವಾಗದ ಸೇವೆಗಳು
ಬ್ಯಾಂಕ್‌, ಅಂಚೆ ಕಚೇರಿ, ಪೊಲೀಸ್‌ ಸೇವೆಗಳು, ಅಗ್ನಿಶಾಮಕ ಸೇವೆಗಳು, ದೂರವಾಣಿ ಸೇವೆಗಳು, ಇಂಟರ್‌ನೆಟ್‌ ಸೇವೆಗಳು, ಕೆಎಸ್‌ಆರ್‌ಟಿಸಿ, ಸಾರಿಗೆ ಸೇವೆಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸೇವೆಗಳು, ಸ್ವಚ್ಛತೆ ಕಾರ್ಯಕ್ರಮಗಳು, ಕುಡಿಯುವ ನೀರು, ವಿದ್ಯುತ್‌ಚ್ಛಕ್ತಿ ಪೂರೈಕೆ, ಒಳಚರಂಡಿ ವ್ಯವಸ್ಥೆ, ಅಂಗಡಿಗಳು, ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧ ಅಂಗಡಿಗಳು, ಶವ ಸಂಸ್ಕಾರ ಇತ್ಯಾದಿ ಸೇವೆಗಳು ಹಾಗೂ ತುರ್ತು ಸೇವೆಗಳಿಗೆ ಸ್ಥಗಿತದ ಆದೇಶವು ಅನ್ವಯವಾಗುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next