ಕೊಟ್ಟೂರು: ಈಗಾಗಲೇ ಜಿಲ್ಲಾಡಳಿತದಿಂದ ಮನೆ ಅನಾಹುತ ಸಂಭವಿಸಿದವರಿಗೆ 18.40 ಲಕ್ಷ ರೂ ನೀಡಿದ್ದು, ಸಂಪೂರ್ಣ ಮನೆ ಹಾನಿಯಾಗಿದ್ದರೆ 5 ಲಕ್ಷ ರೂ., ಅರೆಬರೆ ಹಾನಿಯಾಗಿದ್ದರೆ 25 ಸಾವಿರದಿಂದ 1 ಲಕ್ಷದವರೆಗೆ ಪರಿಹಾರ ನೀಡಿದ್ದೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇಲ್ಲಿನ ತಾಲೂಕು ಆಡಳಿತ ಕಚೇರಿ ಯಾತ್ರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಹೊಸ ನಿಯಮಾವಳಿಗಳ ಪ್ರಕಾರ ನೆರೆ ಹಾವಳಿಗೆ ಒಳಗಾದವರಿಗೆ ಪರಿಹಾರ ನೀಡುವುದಾಗಿ ತಿಳಿಸಿದರು. ಶೀಘ್ರವೇ ತಾಲೂಕು ಕಚೇರಿಗಳನ್ನು ಮಾಡುವುದಾಗಿ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಈಗಾಗಲೇ ತಹಶೀಲ್ದಾರ್ ಕಚೇರಿ, ಭೂ, ಇಲಾಖೆ, ತಾಲೂಕು ಆಡಳಿತ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಉಳಿದ ಎಲ್ಲ ಕಚೇರಿಗಳನ್ನು ರೂಪಿಸಲು ಮೇಲಧಿಕಾರಿಗಳಿಗೆ ಸೂಚಿಸಲಾಗಿದೆ.
ನೆರೆ ಹಾವಳಿಗೆಂದೇ ಸರ್ಕಾರ ಪ್ರತ್ಯೇಕ ಹಣ ಮಂಜೂರು ಮಾಡಿಲ್ಲ. ಆದರೆ ಜಿಲ್ಲಾಡಳಿತ ನಮ್ಮ ಬಳಿ ಈಗಾಗಲೇ 10 ಕೋಟಿ ರೂಗಳ ಸಂಗ್ರಹ ಇದೆ. ಈ ಹಣದಲ್ಲಿ ನೆರೆ ಸಂತ್ರಸ್ತರಿಗೆ ಎಲ್ಲ ನೆರವು ಒದಗಿಸಿದ್ದೇವೆ. ನೆರೆ ಹಾವಳಿಯಿಂದ 3300 ಹೆಕ್ಟೇರ್ ಪ್ರದೇಶದಲ್ಲಿ ರೈತರ ಬೆಳೆ ಹಾನಿಯಾಗಿದೆ. ಇದೀಗ ಜಿಲ್ಲಾಡಳಿತ ಮತ್ತೆ ಕೃಷಿ ತೋಟಗಾರಿಕೆ ಒಡಗೂಡಿ ಹಾನಿಗೊಳಗಾದ ಬೆಳೆ ಹಾನಿ ಬಗ್ಗೆ ಸರ್ವೆ ಕಾರ್ಯ ನಡೆಸಲಾಗುವುದು ಮತ್ತು ಈ ಭಾಗವು ಬರಗಾಲ ಪೀಡಿತವಾಗಿರುವುದರಿಂದ ಬೆಳೆ ವಿಮೆ ಕೊಡಿಸಲು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ನೂತನ ತಾಲೂಕುಗಳಾದ ಕೊಟ್ಟೂರು, ಕುರುಗೋಡು ಮತ್ತು ಕಂಪ್ಲಿಗಳಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಈಗಾಗಲೇ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಕುರುಗೋಡು ಮತ್ತು ಕಂಪ್ಲಿಗಳಲ್ಲಿನ ನಿವೇಶನಗಳಿಗೆ ಹಣ ಮಂಜೂರಾತಿ ದೊರಕಿದೆ. ಕೊಟ್ಟೂರು ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಯಾವುದೇ ಸರ್ಕಾರದ ಆದೇಶವಾಗಿಲ್ಲ. ನಿವೇಶನವನ್ನು ಸಹ ಗುರುತಿಸಿಲ್ಲ. ಆದರೆ ನಿವೇಶನದ ಖಾತರಿ ಪ್ರಮಾಣ ಪತ್ರ ದೊರಕಿದ ತಕ್ಷಣ ಹಣದ ನೆರವು ಸರ್ಕಾರದಿಂದ ದೊರೆಯಲಿದೆ ಎಂದು ಅವರು ಹೇಳಿದರು.
ಕೊಟ್ಟೂರು-ಹೊಸಪೇಟೆ ರೈಲು ಮಾರ್ಗದಲ್ಲಿ ಬರುವ ಎಲ್ಲ ಕ್ರಾಸಿಂಗ್ ಗೇಟ್‌ಗಳ ಸಮಸ್ಯೆ ಹೊಸಪೇಟೆ ಉಪವಿಭಾಗದಲ್ಲಿ ಸಂಪೂರ್ಣ ನಿವಾರಣೆಗೊಂಡಿದ್ದು, ಅದರಲ್ಲಿ 3 ಗೇಟ್‌ಗಳು ಅಂಡರ್ ಗ್ರೌಂಡ್ ಮಾಡಲು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಕಂದಾಯ ಇಲಾಖೆ ಎಲ್ಲವನ್ನೂ ಬಗೆಹರಿಸಿ ರೈಲ್ವೆ ಇಲಾಖೆಗೆ ಅನುಮತಿ ನೀಡಿದೆ ಎಂದರು. ಹೊಸಪೇಟೆ ಕಂದಾಯ ಉಪ ವಿಭಾಗ ಅಧಿಕಾರಿ ಲೋಕೇಶ, ಹರಪನಹಳ್ಳಿ ಉಪವಿಭಾಗಾಧಿಕಾರಿ ಪ್ರಸನ್ನಕುಮಾರ, ಕೂಡ್ಲಿಗಿ ತಹಶೀಲ್ದಾರ್ ಮಹಾಬಲೇಶ್ವರ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಮತ್ತಿತರರು ಇದ್ದರು