ಕೊಟ್ಟೂರು: ತಾಲೂಕಿನ ದೂಪದಹಳ್ಳಿ ಗ್ರಾಪಂ ವ್ಯಾಪ್ತಿಯ ನಾಲ್ಕು ಗ್ರಾಮಗಳಲ್ಲಿ ಜಲಕ್ಷಾಮ ಎದುರಾಗಿದ್ದು, ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಗ್ರಾಪಂ ವ್ಯಾಪ್ತಿಯ ನಾಲ್ಕು ಗ್ರಾಮಗಳ ಪೈಕಿ ದೂಪದಹಳ್ಳಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು, ಕುಡಿಯುವ ನೀರಿಗಾಗಿ ದಿನೇ ದಿನೇ ಉಲ್ಬಣ ಹೆಚ್ಚಾಗುತ್ತಿದೆ.
ಗ್ರಾಪಂ ಕೇಂದ್ರವಾಗಿರುವ ದೂಪದಹಳ್ಳಿ ಗ್ರಾಮದಲ್ಲಿ ಒಂದು ಖಾಸಗಿ ಬೋರು, ಗ್ರಾಪಂಗೆ ಒಳಪಟ್ಟಿರುವ ಒಂದು ಬೋರ್ ಇದೆ. ಇವೆರೆಡು ಕೊಳವೆ ಬಾವಿಗಳು ಗ್ರಾಮಕ್ಕೆ ಆಸರೆಯಾಗಿದ್ದು, ಇದರಿಂದ ಗ್ರಾಮದ ಜನರಿಗೆ ಸಮರ್ಪಕವಾಗಿ ನೀರೊದಗಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, 500 ರಿಂದ 600 ಅಡಿಗಳಷ್ಟು ಬೋರ್ ಕೊರೆದರೂ ಸಹ ನೀರು ಬರುತ್ತಿಲ್ಲ. ಇಲ್ಲಿಯವರೆಗೆ ಒಟ್ಟು 18 ಬೋರ್ ಕೊರೆಯಿಸಲಾಗಿದೆ. ಆದರೂ ಸಹ ಇಲ್ಲಿ ನೀರು ಸಿಕ್ಕಿಲ್ಲ.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ಇಲ್ಲಿಯವರೆಗೂ ಕುಡಿಯುವ ನೀರು ಪೂರೈಕೆಯಾಗಿಲ್ಲ. ನೀರಿಗಾಗಿ ಜನರು ತಳ್ಳುವ ಬಂಡಿಗಳಲ್ಲಿ ಖಾಲಿ ಕೊಡಗಳನ್ನು ಇಟ್ಟುಕೊಂಡು ಇಲ್ಲಿನ ಖಾಸಗಿ ಹಾಗೂ ಗ್ರಾಪಂ ಬೋರ್ ಬಳಿ ಸಾಲುಗಟ್ಟಿ ನಿಂತು ದಿನವಿಡೀ ನೀರಿಗಾಗಿ ಕಾಯುವುದು ಇಲ್ಲಿನ ಸಹಜ ದೃಶ್ಯವಾಗಿದೆ.
ದೂಪದಹಳ್ಳಿ ಗ್ರಾಪಂಗೆ ಸೇರಿದ ಒಟ್ಟು 4 ಗ್ರಾಮಗಳು ಗೊಲ್ಲರಹಳ್ಳಿ, ದೂಪದಹಳ್ಳಿ ತಾಂಡಾ ಹಾಗೂ ಬೇವೂರು ಗ್ರಾಮಗಳಲ್ಲೂ ಸಹ ಇದೇ ಪರಿಸ್ಥಿತಿ ಉಂಟಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿನ ಅಂತರ್ಜಲ ಮಟ್ಟ ಕುಸಿದಿರುವುದು ನೀರು ಪೂರೈಕೆಗೆ ಅಡ್ಡಿಯಾಗಿರುವುದರಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ತಲೆ ಬಿಸಿಯಾಗಿದೆ.
ಕುಡಿಯುವ ನೀರಿಲ್ಲದೆ ಜನಜಾನುವಾರುಗಳ ಪರಿಸ್ಥಿತಿ ಶೋಚನೀಯವಾಗಿದೆ. ಇಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ನಾವು ಆಸ್ತಿ ಕೇಳುವುದಿಲ್ಲ, ನೀರು ಕೊಡಿ ಸಾಕು. ಶಾಸಕರ ಅನುದಾನದಡಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ನೀರು ಪೂರೈಸಬೇಕು.
ಸಿದ್ದಪ್ಪ,
ಗ್ರಾಮದ ಮುಖಂಡ, ದೂಪದಹಳ್ಳಿ
ಗ್ರಾಪಂ ವ್ಯಾಪ್ತಿಯ ನಾಲ್ಕು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕೂಡಲೇ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಂಡು ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು.
ಕೆಂಚಪ್ಪ, ಪಿಡಿಒ,
ದೂಪದಹಳ್ಳಿ ಗ್ರಾಪಂ.
ಎಂ.ರವಿಕುಮಾರ್