ಕೊಟ್ಟೂರು: ಪಟ್ಟಣದ ಮುಖ್ಯ ರಸ್ತೆ, ಚರಂಡಿ ನಿರ್ಮಾಣ ಮತ್ತಿತರ ಕಾಮಗಾರಿ ಪ್ರಾರಂಭಿಸಲು ಲೋಕೋಪಯೋಗಿ ಇಲಾಖೆ ಮುಂದಾಗಿರುವುದನ್ನು ಕೆಲವರು ವಿರೋಧಿಸಲು ಮುಂದಾದರೆ ಮತ್ತೆ ಕೆಲವರು ಕಾಮಗಾರಿ ಆರಂಭಗೊಳ್ಳಲೇಬೇಕು ಎಂದು ಪಟ್ಟು
ಹಿಡಿದಿದ್ದರಿಂದ ಲೋಕೋಪಯೋಗಿ ಇಲಾಖೆ ಪೊಲೀಸರ ಸಹಕಾರ ಪಡೆದು ಭಾನುವಾರ ಕಾಮಗಾರಿ ಪ್ರಾರಂಭಿಸಿತು.
ಕೆಲ ದಿನಗಳ ಹಿಂದೆ ಪಟ್ಟಣದ ಪ್ರಮುಖ ರಸ್ತೆಯಾದ ಮಹತ್ಮಗಾಂಧಿ ವೃತ್ತದಿಂದ ಉಜ್ಜಯಿನಿ ವೃತ್ತದವರೆಗೆ 1.42 ಕೋಟಿ ರೂ ವೆಚ್ಚದಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಉಭಯ ಕಡೆ ಚರಂಡಿ ಮತ್ತು ಡೆಸ್ಕ್ಸ್ಲಾಬ್ ಹಾಕುವ ಕಾಮಗಾರಿಗೆ ಶಾಸಕ ಎಸ್. ಭೀಮಾನಾಯ್ಕ ಭೂಮಿಪೂಜೆ ನೆರವೇರಿಸಿದ್ದರು.
ಪ್ರಥಮ ದರ್ಜೆ ಗುತ್ತಿಗೆದಾರ ನಾಗರಾಜ್ ಕಾಮಶೆಟ್ಟಿ ಈ ಕಾಮಗಾರಿಯನ್ನು ಪ್ರಾರಂಭಿಸಲಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಕೆಲವರು ರಸ್ತೆ ಚೆನ್ನಾಗಿಯೇ ಇದೆ. ರಸ್ತೆ ನಿರ್ಮಾಣ ಕಾರ್ಯ ಮಾಡದೇ ಅಲ್ಲಲ್ಲಿ ಕೆಟ್ಟಿರುವ ರಸ್ತೆಯನ್ನು ದುರಸ್ತಿಗೊಳಿಸಿ ಈ ಅನುದಾನವನ್ನು ಬೇರೆಕಡೆ ವರ್ಗಾಯಿಸಿ ಅಭಿವೃದ್ಧಿಪಡಿಸಬೇಕೆಂದು ಮುಖಂಡ ಎಸ್. ತಿಂದಪ್ಪ ಮತ್ತಿತರರು ಸಂಸದ ವೈ. ದೇವೇಂದ್ರಪ್ಪನವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಈ ಸಂಬಂಧ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಜಿಲ್ಲಾಧಿಕಾರಿಗೂ ಪತ್ರ ಬರೆದು ಒತ್ತಾಯಿಸಿದ್ದರು.
ರಸ್ತೆ ನಿರ್ಮಾಣದ ವಾರ್ಡ್‌ನ್ನು ಪ್ರತಿನಿಧಿಸಿರುವ 1ನೇ ವಾರ್ಡ್ ಪಟ್ಟಣ ಪಂಚಾಯಿತಿ ಸದಸ್ಯ ಮರಬದ ಕೊಟ್ರೇಶ್, ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಮಳೆ ಬಂದಾಗಲೆಲ್ಲಾ ಚರಂಡಿಯಲ್ಲಿ ನೀರು ಹೋಗದೆ ರಸ್ತೆ ಮೇಲೆ ನಿಂತುಕೊಳ್ಳುತ್ತವೆ. ಶಾಸಕರು ಇದೀಗ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು 1 ಕೋಟಿ ರೂಗೂ ಹೆಚ್ಚಿನ ಅನುದಾನವನ್ನು ಮೀಸಲಿರಿಸಿ ಕಾಮಗಾರಿ ಕೈಗೊಳ್ಳಲು ಮುಂದಾಗಿರುವುದು ಸ್ವಾಗತಾರ್ಹ. ಇದನ್ನು ರಾಜಕೀಯ ಮಾಡಲು ಕೆಲವರು ವಿರೋಧಿಸುತ್ತಿದ್ದಾರೆ. ಅದರಲ್ಲಿ ಅವರ ಸ್ವಾರ್ಥವು ಇದೆ ಎಂದು ದೂರಿದರು.
ಕಾಮಗಾರಿ ಆರಂಭಿಸಲು ಮುಂದಾದ ಪಿಡಬ್ಲೂಡಿ: ಲೋಕೋಪಯೋಗಿ ಇಲಾಖೆ ರಸ್ತೆ ಅಭಿವೃದ್ಧಿಪಡಿಸುವುದಕ್ಕಿಂತ ಮುಂಚಿತವಾಗಿ ರಸ್ತೆ ಎರಡು ಕಡೆ ಚರಂಡಿಗಳನ್ನು ನಿರ್ಮಿಸಲೆಂದು ಗುತ್ತಿಗೆದಾರ ಕೆಲಸ ಆರಂಭಿಸಲು ಮುಂದಾಗುತ್ತಿದ್ದಂತೆ ವಿಷಯ ತಿಳಿದ ಮುಖಂಡ ಎಸ್. ತಿಂದಪ್ಪ ಕಾಮಗಾರಿ ಕೈಗೊಳ್ಳಲು ನಾನು ಬಿಡುವುದಿಲ್ಲ ಎಂದು ಹೇಳಿ ವಿರೋಧ ವ್ಯಕ್ತಪಡಿಸಿದರು. ಜೆಇ ಸೋಮಣ್ಣ, ಪಪಂ ಮುಖ್ಯಾಧಿಕಾರಿ ಎಚ್.ಎಫ್. ಬಿದರಿ ವಿರೋಧ ವ್ಯಕ್ತಪಡಿಸುವವರಿಗೆ ಸಮಾಧಾನ ಹೇಳಿ ಈಗಾಗಲೇ ಈ ಯೋಜನೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾಮಗಾರಿ ಆರಂಭಿಸಲೇಬೇಕು ಸಹಕರಿಸಿ ಎಂದು ಮನವೊಲಿಸುವ ಪ್ರಯತ್ನ ಮಾಡಿದರು. ಇತ್ತ ಕಾಮಗಾರಿಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವ ಮಾಹಿತಿ ತಿಳಿದು ಪಪಂ ಮಾಜಿ ಸದಸ್ಯ ನಾಗರಾಜ ಮತ್ತಿತರರು ಸ್ಥಳಕ್ಕೆ ಆಗಮಿಸಿ ಚರಂಡಿ ಕಾಮಗಾರಿ ಆರಂಭಗೊಳ್ಳಲೇಬೇಕು. ರಸ್ತೆ ನಿರ್ಮಾಣ ಆಗಲೇಬೇಕೆಂದು ಒತ್ತಾಯಿಸಿದರು. ಈ ಹಂತದಲ್ಲಿ ಗಲಾಟೆ ಜೋರಾಗುತ್ತಿದ್ದಂತೆ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಎ. ಕಾಳಿಂಗ ಕಾಮಗಾರಿ ಸ್ಥಳದಲ್ಲಿ ಬಂದೋಬಸ್ತ್ ಕಾರ್ಯ ಕೈಗೊಂಡರು. ನಂತರ ಚರಂಡಿ ಕಾಮಗಾರಿಯನ್ನಷ್ಟೇ ಪ್ರಾರಂಭಿಸೋಣ ಎಂಬ ರಾಜಿಸೂತ್ರದ ಮೂಲಕ ಕಾಮಗಾರಿ ಪ್ರಾರಂಭಗೊಂಡಿತು.
ಮುಖ್ಯರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ.
ಕಾಮಗಾರಿಗೆ ನಾಲ್ಕು ತಿಂಗಳು ಗಡುವು ವಿಧಿ ಸಲಾಗಿದೆ. ಅಷ್ಟರೊಳಗೆ ಗುತ್ತಿಗೆದಾರರು ಕಾಮಗಾರಿ ಮಾಡಬೇಕಿದ್ದು ಜನತೆ ಸಹಕರಿಸಬೇಕು.
ಸೋಮಣ್ಣ ಜೆಇ. ಪಿಡಬ್ಲೂಡಿ
ಕಾಮಗಾರಿ ಆಗಲು ಜನತೆ ಸಹಕರಿಸಬೇಕು. ಯಾವುದೇ ಕಾರಣಕ್ಕೂ ಅಭಿವೃದ್ಧಿ ಕಾಮಗಾರಿಗೆ ಅಡ್ಡಿ ಉಂಟುಮಾಡಬಾರದು. ಸಮಸ್ಯೆಗಳಿದ್ದರೆ ಬಗೆಹರಿಸಿಕೊಂಡು ಅಧಿಕಾರಿಗಳಿಗೆ ಸಹಕಾರ ನೀಡಿ.
ಎಚ್.ಎಫ್.ಬಿದರಿ, ಮುಖ್ಯಾಧಿಕಾರಿ,
ಪಟ್ಟಣ ಪಂಚಾಯಿತಿ ಕೊಟ್ಟೂರು