ಎಂ. ರವಿಕುಮಾರ
ಕೊಟ್ಟೂರು: ಪಟ್ಟಣದ ಮಾರ್ಕಂಡೇಶ್ವರ ಹಿಂಭಾಗದಲ್ಲಿರುವ ನೇಕಾರರ ಕಾಲೋನಿಯಲ್ಲಿ 40 ಕುಟುಂಬಗಳುಳ್ಳ ಜನರ ಜೀವನ ನೇಯ್ಗೆ ಮೇಲೆ ನಿಂತಿದೆ. ಇಂತಹ ಕುಟುಂಬಗಳಿಗೆ ಸರ್ಕಾರದಿಂದ ದೊರಕುವ ಯೋಜನೆ ಸೌಲಭ್ಯಗಳು ಮರೀಚಿಕೆಯಾಗಿವೆ.
ಸ್ವಾತಂತ್ರ್ಯ ಪೂರ್ವದಿಂದಲೂ ಗಾಂಧಿಧೀಜಿಯವರು ಸ್ವದೇಶಿ ವಸ್ತ್ರ ಧರಿಸುವಂತೆ ಕರೆ ನೀಡಿ ವಿದೇಶಿ ವಸ್ತ್ರಗಳು ತ್ಯಜಿಸಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ರಾಷ್ಟ್ರಪಿತ ಹಾಕಿಕೊಟ್ಟ ಖಾದಿ ನೇಯ್ಗೆಯಿಂದ ಎಷ್ಟೋ ಜನ ದೇಶದಲ್ಲಿ ತಮ್ಮ ಜೀವನ ನಡೆಸಿದ್ದರು. ಇದನ್ನು ನಾವು ಈಗಲೂ ಅವರ ಭಾವಚಿತ್ರಗಳನ್ನು ಚರಕ ಹಿಡಿದು ನೇಯುವುದನ್ನು ನೋಡುತ್ತೇವೆ. ವಿನಃ ಅದನ್ನು ಇಲ್ಲಿಯವರೆಗೂ ಯಾರು ಕಾಯಂ ಆಗಿ ಜಾರಿಗೊಳಿಸದೇ ಇರುವುದು ಸೋಜಿಗದ ಸಂಗತಿಯಾಗಿದೆ.
ಇದಕ್ಕೆ ಪೂರಕವೆನ್ನುವಂತೆ ಈಗ ಕೊಟ್ಟೂರಿನಲ್ಲಿರುವ ನೇಯ್ಗೆ ಮಾಡಿ ಜೀವನ ಸಾಗಿಸುತ್ತಿರುವ ಇಲ್ಲಿನ ಮಾರ್ಕಂಡೇಶ್ವರ ದೇವಸ್ಥಾನದ ಬಳಿ ಇರುವ ನೇಕಾರ ಕುಟುಂಬದವರು ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯದೇ ಹಿಂದುಳಿದಿದ್ದಾರೆ. ನೇಯ್ಗೆ ನೇಯ್ದ ಬಟ್ಟೆಗಳನ್ನು ಎಲ್ಲ ರಾಜಕೀಯ ಮುಖಂಡರು ಗಾಂಧಿಧೀಜಿಯವರು ಹಾಕಿಕೊಟ್ಟ ಸ್ವದೇಶಿ ವಸ್ತ್ರ ಧರಿಸುವ ಪದ್ಧತಿ ಮುಂದುವರಿಸುತ್ತಿದ್ದಾರೆ. ಆದರೆ ಸ್ವದೇಶಿ ವಸ್ತ್ರವನ್ನು ನೇಯುವ ಕುಟುಂಬಗಳಿಗೆ ಏನು ಮಾಡಿದ್ದಾರೆ? ಖಾದಿ ಉದ್ಯಮದವರು ಈಗಾಗಲೇ ನೇಯ್ಗೆಯಿಂದಲೇ ಜೀವನ ನಡೆಸುತ್ತಾರೆ. ಆದರೆ ನೇಯ್ಗೆ ಕುಟುಂಬಗಳು 50 ವರ್ಷಗಳವರೆಗೆ ನೇಯುತ್ತಾರೆ. 50 ವರ್ಷಗಳ ನಂತರ ಅವರ ಜೀವನ ಸಾಗಿಸುವುದೇ ದುಸ್ತರವಾಗಿದೆ. 10 ಮೀಟರ್ ಖಾದಿ ಬಟ್ಟೆ ತಯಾರಿಸಲು 1 ನೂಲಿಗೆ ಗಂಜಿ ಹಾಕುವುದಕ್ಕೆ ಒಬ್ಬರು. ಒಣಗಿಸಲು ಒಬ್ಬ ವ್ಯಕ್ತಿ, ಖಾದಿಯನ್ನು ಚರಕದಿಂದ ಸುತ್ತಲು ಒಬ್ಬ ವ್ಯಕ್ತಿ, ಕಂಡಿಕೆ ಸುತ್ತಲು ಒಬ್ಬರು ವಾರ್ಪ್(ಭೀಮ್) ತಿರುವಲು ಇಬ್ಬರು ಸಹಾಯಕರು, ವೈಪಣಿ ಮಾಡಲು ಸಹಾಯಕರು ಇಬ್ಬರು ಒಟ್ಟು ಸುಮಾರು 8-10 ಜನ ಸೇರಿ ಮಾಡಿದರೆ 10ಮೀಟರ್ ನೇಯಬಹುದು. ಆದರೆ ಈ 10ಮೀಟರ್‌ಗೆ ಬರೀ 250 ರೂ. ಮಾತ್ರ ಕೂಲಿ ಸಿಗುತ್ತದೆ. ಈ ಕೂಲಿಯಿಂದ 10 ಜನರು ಹೇಗೆ ಹಂಚಿಕೊಳ್ಳಬೇಕು?. ಮಗ್ಗ ನೇಯ್ಗೆಯಿಂದ ನಿವೃತ್ತಿ ಹೊಂದಿದ ನಂತರ ಜೀವನ ಸಾಗಿಸಲು ಯಾವುದೇ ಪಿಂಚಣಿ ಇರುವುದಿಲ್ಲ. ಆದ್ದರಿಂದ ಸರ್ಕಾರ ಇತ್ತ ಕಡೆ ಗಮನ ಹರಿಸಿ ಬಡತನದಿಂದ ಬಳಲುತ್ತಿರುವ ದೇಶಕ್ಕೆ ಸ್ವದೇಶಿ ವಸ್ತ್ರ ಒದಗಿಸುವಲ್ಲಿ ಶ್ರಮ ವಹಿಸುತ್ತಿರುವ ನೇಕಾರ ಕುಟುಂಬಗಳಿಗೆ ಸರ್ಕಾರದಿಂದ ಹೊಸ ಯೋಜನೆ ರೂಪಿಸಬೇಕಿದೆ.
ಸಾರ್ವಜನಿಕರು ವಿದೇಶಿ ವ್ಯಾಮೋಹಕ್ಕೆ ಒಳಗಾಗಿ ಸ್ವದೇಶಿ ಬಟ್ಟೆಗಳನ್ನು ಖರೀದಿಸುತ್ತಿಲ್ಲ. ಇವರೆಲ್ಲ ನೇಕಾರರಿಂದ ತಯಾರಾದ ಖಾದಿ ಬಟ್ಟೆಗಳನ್ನು ಖರೀದಿಸುವುದರಿಂದ ನಮ್ಮಂತವರೂ ನೆಮ್ಮದಿಯಿಂದ ಜೀವನ ಸಾಗಿಸಬಹುದು. ಸ್ವದೇಶಿ ವಸ್ತುಗಳ ಉತ್ಪಾದನೆಗೆ ಎಲ್ಲರೂ ಸಹಕಾರ ನೀಡಬೇಕು.
•
ದೇವರೆಡ್ಡಿ ನಾಗರಾಜ,
ನೇಕಾರರು.
ಇಂದಿನ ಡಿಜಿಟಲ್ ಯುಗದಲ್ಲಿ ಆರೋಗ್ಯವೇ ಮಹಾಭಾಗ್ಯ. ಆದ್ದರಿಂದ ದೇಹಕ್ಕೆ ಉಷ್ಣತೆ ಕಡಿಮೆ ಮಾಡುವ ಸ್ವದೇಶಿ ವಸ್ತ್ರ ಖಾದಿ ಬಟ್ಟೆ ಧರಿಸುವುದು ಉತ್ತಮ. ಆದ್ದರಿಂದ ಎಲ್ಲಾ ಸಾರ್ವಜನಿಕರು ಖಾದಿ ಬಟ್ಟೆ ಧರಿಸುವಂತಾಗಲಿ.
•
ವೆಂಕಟೇಶ,
ಅಂಚೆ ಸಹಾಯಕರು.