Advertisement

ಬಂಡ್ರಿ ಓಣಿಗೆ ಬೇಕಿದೆ ಮೂಲ ಸೌಕರ್ಯ

03:11 PM Dec 28, 2019 | Naveen |

ಕೊಟ್ಟೂರು: ಎರಡು ಸಾವಿರ ಜನಸಂಖ್ಯೆ ಹೊಂದಿರುವ ಕೊಟ್ಟೂರಿನ 5ನೇ ವಾರ್ಡ್‌ನ ಬಂಡ್ರಿ ಓಣಿ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಇಲ್ಲಿಯ ಜನ ಪಟ್ಟಣ ಪಂಚಾಯಿತಿ ನಿರ್ಲಕ್ಷಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಓಣಿ ತುಂಬೆಲ್ಲ ಕಸದ ರಾಶಿ ಕಾಣುತ್ತಿದ್ದರೆ ಚರಂಡಿಗಳಲ್ಲಿ ನೀರು ಹರಿಯದೆ ತುಂಬಿ ತುಳುಕುತ್ತಿದೆ. ಸಿಸಿ ರಸ್ತೆ ಹಾಳಾಗಿದ್ದು, ರಸ್ತೆ ತುಂಬೆಲ್ಲ ತಗ್ಗು ಗುಂಡಿಗಳು ಬಿದ್ದಿದೆ. ಬೀದಿ ದೀಪಗಳು ಇಲ್ಲದೇ ರಾತ್ರಿ ವೇಳೆ ಜನ ಓಡಾಡಲು ಭಯವಡುವಂತ ಸ್ಥಿತಿ ಎದುರಾಗಿದೆ. ದಿನೇ ದಿನೇ ಸೊಳ್ಳೆಗಳು ಹೆಚ್ಚುತ್ತಿದ್ದು, ಸ್ವಚ್ಛತೆ ಇಲ್ಲದೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಜನರನ್ನು ಕಾಡುತ್ತಿದೆ. ಕೂಲಿ ಕಾರ್ಮಿಕರು, ಹಿಂದುಳಿದವರೇ ಹೆಚ್ಚಾಗಿ ವಾಸಿಸುತ್ತಿರುವ ಈ ಓಣಿಗೆ 4 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಈ ವರೆಗೂ ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿಲ್ಲ. ಈಗಲೂ ಜನ ಶೌಚಕ್ಕೆ ಬಯಲು ಪ್ರದೇಶವನ್ನೇ ನೆಚ್ಚಿಕೊಂಡಿದ್ದಾರೆ. ಕಳೆದ 15 ವರ್ಷಗಳಿಂದ ಈ ಓಣಿಯಲ್ಲಿ ಒಂದಿಲ್ಲ ಒಂದು ಮೂಲ ಸೌಲಭ್ಯದ ಕೊರೆತ ಇದ್ದರೂ ಯಾರೂ ಕೇಳುವವರಿಲ್ಲ.

ಸದಾ ತುಂಬಿರುವ ಚರಂಡಿಗಳು, ತಿಪ್ಪೆಗುಂಡಿಗಳು, ಕಸ ವಿಲೇವಾರಿಯೂ ಸಹ ಸರಿಯಾಗಿ ಆಗದೇ ಇರುವುದು ಪಟ್ಟಣ ಪಂಚಾಯತದ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ. ಹಲವು ಬಾರಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಮನವಿ ನೀಡಿದರೂ ಯಾರೂ ಸ್ಪಂದಿಸುತ್ತಿಲ್ಲ. ಪ್ರತಿಯೊಬ್ಬರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇನ್ನಾದರೂ ಈ ವಾರ್ಡ್‌ನತ್ತ ಗಮನಹರಿಸುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.

15 ವರ್ಷಗಳಿಂದ ಇಲ್ಲಿಯೇ ಜೀವನ ಸಾಗಿಸುತ್ತ ಬಂದಿದ್ದೇವೆ. ಆದರೆ ಮೂಲ ಸೌಕರ್ಯ ಎಂಬುದೇ ಇಲ್ಲ. ಗಬ್ಬುನಾರುವ ಓಣಿಗಳಲ್ಲಿ ಮೂಗು ಮುಚ್ಚಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಸ್ಥಳೀಯ ಅಧಿ ಕಾರಿಗಳು ಇತ್ತ ಗಮನ ಹರಿಸುವುದಿಲ್ಲ. ಚುನಾವಣೆ ಬಂದಾಗ ಮಾತ್ರ ಮಾದರಿ ಓಣಿಯನ್ನಾಗಿ ಮಾಡುವ ಭರವಸೆ ನೀಡುವ ಜನಪ್ರತಿನಿಧಿಗಳೂ ಇತ್ತ ಗಮನಹರಿಸುತ್ತಿಲ್ಲ.
ಬಂಡ್ರಿ ರಮೇಶ,
ಸ್ಥಳೀಯ ನಿವಾಸಿ

ಚುನಾವಣೆ ಮುಗಿದು ವರ್ಷ ಕಳೆದಿದೆ. ಆದರೆ ಸ್ಥಳೀಯ ಆಡಳಿತ ರಚನೆಯಾಗಿಲ್ಲ. ಆದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅನುದಾನವಿಲ್ಲ. ಕಾರಣ ಸ್ಥಳೀಯ ಆಡಳಿತ ರಚನೆಯಾಗುತ್ತಿದ್ದಂತೆ 5ನೇ ವಾರ್ಡ್‌ಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ ಜನರ ಕಾಳಜಿ ಬಗ್ಗೆ ಗಮನಹರಿಸಲಾಗುವುದು.
ಪಕ್ಕೀರಪ್ಪ,
ಪಪಂ ಸದಸ್ಯ

Advertisement

ಈಗಾಗಲೇ 5ನೇ ವಾರ್ಡ್‌ನಲ್ಲಿ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು. ಪ್ರತಿ 2 ದಿನಗಳಿಗೊಮ್ಮ
ಕಸ ವಿಲೇವಾರಿಗೆ ವಾಹನ ಕಳುಹಿಸಲಾಗುತ್ತಿದೆ. ವಾರ್ಡ್ ನ ಜನ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ ಮನೆಯ ಹಸಿ ಕಸವನ್ನು ಡಬ್ಬಿಯಲ್ಲಿ
ಸಂಗ್ರಹಿಸಿ ದಿನ ಬೆಳಗ್ಗೆ ಬರುವ ವಾಹನಗಳಲ್ಲಿ ಹಾಕಬೇಕು.
ಎಚ್‌.ಎಫ್‌. ಬಿದರಿ
ಮುಖ್ಯಾಧಿಕಾರಿಗಳು,
ಪಪಂ ಕೊಟ್ಟೂರು

„ಎಂ. ರವಿಕುಮಾರ

Advertisement

Udayavani is now on Telegram. Click here to join our channel and stay updated with the latest news.

Next