Advertisement

ತಜ್ಞ ವೈದ್ಯರಿಲ್ಲದೆ ರೋಗಿಗಳ ಪರದಾಟ!

12:23 PM Apr 28, 2019 | Naveen |

ಕೊಟ್ಟೂರು: ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡುವುದಕ್ಕಾಗಿ ಪಟ್ಟಣದಲ್ಲಿ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸಿದೆ. ಆದರೆ, ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳು ತಜ್ಞ ವೈದ್ಯರು ಇಲ್ಲದೆ ಪರದಾಡುತ್ತಿದ್ದಾರೆ.

Advertisement

30 ಬೆಡ್‌ ಹೊಂದಿರುವ ಸಮುದಾಯ ಆರೋಗ್ಯ ಕೇಂದ್ರ, ಸುಸಜ್ಜಿತವಾದ ಕಟ್ಟಡ, ಕೊಠಡಿಗಳು, ನವೀಕರಣಗೊಂಡ ಉಪಕರಣಗಳು ಸೇರಿದಂತೆ ಎಲ್ಲಾ ಸೌಲಭ್ಯ ಹೊಂದಿದ್ದು, ಹೈಟೆಕ್‌ ಆಸ್ಪತ್ರೆ ಮೀರಿಸುವಂತಿದೆ. ಆದರೆ ತಜ್ಞ ವೈದ್ಯರು ಇಲ್ಲದೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ಲಭ್ಯವಿಲ್ಲದಂತಾಗಿದೆ. ಅಲ್ಲದೆ, ದಿನೇ ದಿನೇ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಪರಿಸ್ಥಿತಿ ಸರಿದೂಗಿಸಲು ಇರುವ ವೈದ್ಯರು ಹರಸಾಹಸ ಮಾಡುತ್ತಿದ್ದಾರೆ.

ಪ್ರಮುಖ ತ‌ಜ್ಞ ವೈದ್ಯರ ಕೊರತೆ?: ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣ ಆದಾಗಿನಿಂದಲು ಇಲ್ಲಿ ತಜ್ಞ ವೈದ್ಯರ ಕೊರತೆ ಕಾಡುತ್ತಲೇ ಇದೆ. ಇಲ್ಲಿ ಪ್ರಮುಖವಾಗಿ ಮುಖ್ಯ ವೈದ್ಯರಾದ ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು, ಚರ್ಮರೋಗ ತಜ್ಞರು, ಕೀಲು ಮೂಳೆ ತಜ್ಞರು, ಅರವಳಿಕೆ ತಜ್ಞರು ಹೀಗೆ, ತಜ್ಞರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ತಜ್ಞ ವೈದ್ಯರು ಇಲ್ಲದಿದ್ದರೂ ಹಾಲಿ ಇರುವ ಆಡಳಿತ ವೈದ್ಯಾಧಿಕಾರಿಗಳು, ದಂತ ವೈದ್ಯರು, ಹಾಗೂ ಬಿಎಂಎಸ್‌ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.

ವೈದ್ಯರಿಗಾಗಿ ಇಡೀ ದಿನ ಕಾಯುವ ಸ್ಥಿತಿ: ಕೊಟ್ಟೂರು ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳ ಜನಸಂಖ್ಯೆ ದೃಷ್ಟಿಯನ್ನಿಟ್ಟುಕೊಂಡು ಪಟ್ಟಣದಲ್ಲಿ ಸರ್ಕಾರ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿರ್ಮಿಸಿದೆ. ಆದರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗುವ ಒಳರೋಗಿಗಳು ಮತ್ತು ಹೊರ ರೋಗಿಗಳ ಸಂಖ್ಯೆ ನಿತ್ಯ ಹೆಚ್ಚಾಗುತ್ತದೆ. ಆದರೆ ಇರುವ ವೈದ್ಯರು ಪ್ರತಿನಿತ್ಯ ಬೆಳಗ್ಗೆ ವಾರ್ಡ್‌ಗಳಲ್ಲಿ ದಾಖಲಾಗಿರುವ ಒಳರೋಗಿಗಳನ್ನು ನೋಡಿ ಬರುವವರೆಗೂ ಹೊರ ರೋಗಿಗಳು ಒಪಿಡಿಗಳಲ್ಲಿ ಗಂಟೆಗಟ್ಟಲೇ ಕಾದು ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಪ್ರಸೂತಿ ತಜ್ಞರೇ ಇಲ್ಲ: ಪ್ರತಿ ಸೋಮವಾರ ಮತ್ತು ಗುರುವಾರ ಸುತ್ತಮುತ್ತಲಿನ ಹಳ್ಳಿಗಳಿಂದ ನೂರಾರು ಜನ ಗರ್ಭಿಣಿಯರು ಹಾಗೂ ಕಾಯಿಲೆಗಳಿಂದ ಬಳಲುವ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ. ಆದರೆ ಇಲ್ಲಿ ಪ್ರಸೂತಿ ತಜ್ಞರೇ ಇಲ್ಲ. ಸ್ಟಾಫ್‌ ನರ್ಸ್‌ಗಳ ಕೊರತೆಯೂ ಇದೆ. ಮಾತ್ರವಲ್ಲ, ಮಧ್ಯಾಹ್ನ ಮತ್ತು ರಾತ್ರಿ ಸಂದರ್ಭದಲ್ಲಿ ಏನಾದರೂ ತುರ್ತು ಚಿಕಿತ್ಸೆಗಾಗಿ ರೋಗಿಗಳು ಆಸ್ಪತ್ರೆಗೆ ಬಂದರೆ ಇಲ್ಲಿ ಕೇಳುವವರೆ ಯಾರು ಇಲ್ಲದಂತೆ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಶುದ್ಧ ಕುಡಿವ ನೀರಿನ ವ್ಯವಸ್ಥೆ ಇಲ್ಲ: ಪ್ರತಿನಿತ್ಯ ಆಸ್ಪತ್ರೆಗೆ ಬರುವ ರೋಗಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಆಸ್ಪತ್ರೆ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಘಟಕದಲ್ಲಿ ನೀರು ಶುದ್ಧೀಕರಿಸುವ ಉಪಕರಣ ಅಳವಡಿಸಿಲ್ಲ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈವರೆಗೂ ಗಮನ ಹರಿಸಿಲ್ಲ. ಅಷ್ಟೇ ಅಲ್ಲದೆ, ಮಹಿಳೆಯರಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದೆ ಆಸ್ಪತ್ರೆಗೆ ಬರುವ ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ತಾಲೂಕಿನ ಜನ ಈ ಆಸ್ಪತ್ರೆಯನ್ನೇ ಆಶ್ರಯಿಸಿದ್ದು, ಸರ್ಕಾರ ತಕ್ಷಣವೇ ತಜ್ಞ ವೈದ್ಯರನ್ನು ನೇಮಕ ಮಾಡಿ ರೋಗಿಗಳ ಸಮಸ್ಯೆ ನಿವಾರಿಸಬೇಕು. ಅಲ್ಲದೆ, ಆಸ್ಪತ್ರೆ ಆವರಣದಲ್ಲಿ ರೋಗಿಗಳಿಗೆ ಉತ್ತಮ ಉದ್ಯಾನವನ ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ ಆಸ್ಪತ್ರೆ ಬೇಕಾದ ತಜ್ಞ ವೈದ್ಯರು ಮತ್ತು ಸ್ಟಾಫ್‌ ನರ್ಸ್‌ಗಳ ಕೊರತೆ ಇದೆ. ಅಲ್ಲದೆ, ದಿನೇ ದಿನೇ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇರುವ ವೈದ್ಯರಲ್ಲಿಯೇ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಎಲ್ಲಾ ಸಮಸ್ಯೆ ನಿಭಾಯಿಸಿಕೊಂಡು ಹೋಗುತ್ತಿದ್ದೇವೆ. ತಜ್ಞ ವೈದ್ಯರು ಹಾಗೂ ಸ್ಟಾಫ್‌ ನರ್ಸ್‌ಗಳ ಕೊರತೆ ಬಗ್ಗೆ ಮೇಲಧಿಕಾರಿಗಳ ಗ‌ಮನಕ್ಕೆ ಈಗಾಗಲೇ ತಂದಿದ್ದೇವೆ. ವೈದ್ಯರುನ್ನು ನೇಮಿಸಿದರೆ ಇನ್ನು ಹೆಚ್ಚಿನ ಮಟ್ಟದ ಚಿಕಿತ್ಸೆ ಕೊಡಲು ಅನುಕೂಲವಾಗಲಿದೆ.
•ಡಾ| ಪಿ.ಬಿ.ನಾಯ್ಕ,
ವೈದ್ಯಾಧಿಕಾರಿ, ಸಮುದಾಯ ಆರೋಗ್ಯ ಕೇಂದ್ರ.

ಎಂ.ರವಿಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next