ಕೊಟ್ಟೂರು: ಪಡುವಣದಲ್ಲಿ ಸೂರ್ಯ ಜಾರುತ್ತಿದ್ದಂತೆ ಇತ್ತ ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಭವ್ಯ ಮತ್ತು ಆಕರ್ಷಕ ರಥೋತ್ಸವ ಲಕ್ಷಾಂತರ ಭಕ್ತಸಾಗರದ ಮಧ್ಯೆ ಮಂಗಳವಾರ ವೈಭವೋಪೇತವಾಗಿ ಜರುಗಿತು.
ವಿಜೃಂಭಣೆಯಿಂದ ಮೂಲಾ ನಕ್ಷತ್ರ ಕೂಡುವ ಸಮಯಕ್ಕೆ ಸರಿಯಾಗಿ ರಥವು ಸ್ವತಃ ಒಂದು ಹೆಜ್ಜೆ ಉರುಳುತ್ತದೆ. ನಂತರವೇ ಭಕ್ತರು ಜೈಕಾರ, ಶ್ರೀಗುರು ಕೊಟ್ಟೂರು ದೊರೆಯೇ ನೀನಗಾರು ಸರಿಯೇ ಸರಿ ಸರಿ ಎಂದವರ ಹಲ್ಲು ಮುರಿಯೇ ಬಹುಪರಾಕ್ ಎಂಬ ಜಯಘೋಷ ಮಾಡುತ್ತ ರಥವನ್ನು ಲಕ್ಷಾಂತರ ಭಕ್ತರು ರಥದ ಮಿಣಿ(ಹಗ್ಗ) ಯನ್ನು ಹಿಡಿದು ಬನ್ನಿಮಂಟಪದ ಪಾದಗಟ್ಟೆಯವರೆಗೆ ನಿಧಾನವಾಗಿ ರಥೋತ್ಸವ ಸಾಗಿತು. ನಂತರ ಅಲ್ಲಿಂದ ತೇರುಗಡ್ಡೆಯ ಸಮೀಪ ತೇರುನಿಲ್ಲುವ ಸ್ಥಳಕ್ಕೆ ಸಂಜೆ 6.40 ರ ಸುಮಾರಿಗೆ ನಿಲುಗಡೆಯಾಗುತ್ತಿದ್ದಂತೆ ಭಕ್ತರು ವಿಜಯೋತ್ಸವ ಆಚರಿಸಿ ಕೊಟ್ಟೂರೇಶ್ವರನಿಗೆ ನಮಿಸಿ ಧನ್ಯತೆ ಸಲ್ಲಿಸಿದರು. ಇದಕ್ಕೂ ಮೊದಲು ಶ್ರೀಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯ ನಡೆಯಿತು. ಗುರು ಕೊಟ್ಟೂರೇಶ್ವರ ಸ್ವಾಮಿಯ ಮೂಲ ಮೂರ್ತಿಯನ್ನು ಹೊರ ತಂದು ಬೆಳ್ಳಿ ಪಲ್ಲಕ್ಕಿಯಲ್ಲಿ ಕೂಡಿಸಿ ಸಂಭ್ರಮದ ಮೆರವಣಿಗೆ ಮಾಡಲಾಯಿತು.
ದಲಿತ ಮಹಿಳೆಯಿಂದ ಆರತಿ: ಸಮಾಳ ನಂದಿಕೋಲು ಮತ್ತಿತರ ವಾದ್ಯಗಳ ನಿನಾದದೊಂದಿಗೆ ಬೆಳ್ಳಿ ಪಲ್ಲಕ್ಕಿ ಮೆರವಣಿಗೆ ಕರಗಲ್ಲು ಸುತ್ತುವರೆದು ದ್ವಾರಬಾಗಿಲ ಮುಖಾಂತರ ಗಾಂಧಿ ವೈತ್ತದ ಬಳಿ ಬರುತ್ತಿದ್ದಂತೆ 5 ದಿನಗಳ ಕಾಲ ಶ್ರೀಸ್ವಾಮಿಗೆ ಹರಕೆ ಹೊತ್ತು ಉಪವಾಸ ವ್ರತ ನಡೆಸಿದ ದಲಿತ ಮಹಿಳೆ ದುರುಗಮ್ಮ ಶ್ರೀ ಸ್ವಾಮಿಗೆ ಕಳಸದಾರತಿ ಬೆಳಗಿದರು. ನಂತರ ಪಲ್ಲಕ್ಕಿ ಉತ್ಸವ ತೇರು ಬಜಾರ್ ಮೂಲಕ ಸಂಚರಿಸಿ ತೇರು ಬಯಲು ತಲುಪುತ್ತಿದ್ದಂತೆ ರಥದ ಸುತ್ತಲೂ, ಸ್ವಾಮಿ ಸುತ್ತಲೂ ಧರ್ಮಕರ್ತರ ಬಳಗ 5 ಸುತ್ತು ನಂದಿಕೋಲು ವಾದ್ಯದೊಂದಿಗೆ ಪ್ರದಕ್ಷಿಣೆ ಹಾಕಿ ನಂತರ ರಥದ ಒಳಗೆ ಸ್ವಾಮಿಯನ್ನು ಕೊಂಡೊಯ್ದರು.
ರಥೋತ್ಸವದ ಮಿಣಿ (ಹಗ್ಗ) ಎಳೆಯಲು ನೆರೆದಿದ್ದ ಜನಸಾಗರ ಮುಗಿ ಬಿದ್ದು ಬಾರಿ ಪ್ರಮಾಣದ ನೂಕು ನುಗ್ಗಲು ಉಂಟಾಗದಂತೆ ಇಲ್ಲಿನ ಸಿಪಿಐ ರವೀಂದ್ರ ಕುರುಬಗಟ್ಟೆ ಮತ್ತು ಇಲಾಖಾ ಸಿಬ್ಬಂದಿಯವರು ಭದ್ರತೆ ಒದಗಿಸಿದ್ದರು. ತೇರಿಗೆ ಸ್ಟೇರಿಂಗ್, ಬ್ರೆಕ್ ಸಿಸ್ಟಂ ಅಳವಡಿಸಿರುವುದು ತೇರು ನಿಧಾನವಾಗಿ ಸಾಗಲು ನೆರವಾಯಿತು. ನಂತರ ರಥ ನೆಲೆ ನಿಂತು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯನ್ನು ಮದಾಲ್ಸಿ ಮೂಲಕ ಹಿರೇಮಠಕ್ಕೆ ಕೊಂಡೊಯ್ದು, ಯಥಾ ರೀತಿ ಭಕ್ತರ ದರ್ಶನಕ್ಕೆ ಎಡೆಮಾಡಿಕೊಟ್ಟರು. ಮತ್ತೆ ಭಕ್ತಾಗಳು ಯಥಾರೀತಿ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಕ್ರಿಯಾಮೂರ್ತಿ ಕೊಟ್ಟೂರು ದೇವರು ಶಿವಪ್ರಕಾಶ ಸ್ವಾಮೀಜಿ, ಶಾಸಕ ಎಸ್.ಭೀಮಾನಾಯ್ಕ, ಮತ್ತು ಯು.ಹೆಚ್.ಎಂ. ಪ್ರಕಾಶ್ ರಾವ್ ಕಾರ್ಯನಿರ್ವಾಹಣ ಅಧಿಕಾರಿ, ಪಿ.ಎನ್. ಲೋಕೇಶ ಸಹಾಯಕ ಆಯುಕ್ತರು, ಸಿ.ಹೆಚ್.ಎಂ. ಗಂಗಾಧರ ಧರ್ಮಕರ್ತರು, ಬೂದಿ ಶಿವಕುಮಾರ, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ್, ಎಂ.ಎಂ.ಜೆ. ಸತ್ಯಪ್ರಕಾಶ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಚ್.ಎಫ್. ಬಿದರಿ, ದಂಡಾಧಿಕಾರಿಗಳಾದ ಜಿ. ಅನೀಲ್ ಕುಮಾರ, ಪಿ.ಎಸ್.ಐ. ಕಾಳಿಂಗ ಪಾಲ್ಗೊಂಡಿದ್ದರು. ಬಿಗಿ ಭದ್ರತೆಗಾಗಿ ಸುಮಾರು 700 ಜನ
ಪೇದೆಗಳು ಮತ್ತು ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು, ಅಂಬ್ಯುಲೆನ್ಸ್, ಗೃಹರಕ್ಷಕ ದಳ ಸಿಬ್ಬಂದಿ, ಮಾಧ್ಯಮದ ಮಿತ್ರರು ಇದ್ದರು.