Advertisement

ಮದುವೆ ಸಮಾರಂಭದಲ್ಲಿ ಮೊಳಗಿದ ನಾಡಗೀತೆ-ರಾಷ್ಟ್ರ ಗೀತೆ

05:37 PM Mar 14, 2020 | Naveen |

ಕೊಟ್ಟಿಗೆಹಾರ: ಅದೊಂದು ಅಪೂರ್ವ ಕಾರ್ಯಕ್ರಮ. ತಳಿರು-ತೋರಣ, ಮಂತ್ರಘೋಷ, ವಾದ್ಯ ಗೋಷ್ಠಿಗಳ ನಡುವೆ ವಧು-ವರರು ವೈವಾಹಿಕ ಬಂಧಕ್ಕೆ ಕಾಲಿಡುವ ಸುಮಧುರ ಸಮಾರಂಭ.

Advertisement

ಮದುವೆಗೆ ಬಂದ ಬಂಧು-ಬಳಗ-ಹಿತೈಷಿಗಳು-ಆಮಂತ್ರಿತ‌ರು ಶಿಸ್ತಿನಿಂದ ನಿಂತು ನಾಡಗೀತೆ, ರಾಷ್ಟ್ರಗೀತೆ ಹಾಡಿದರು. ಮಂತ್ರಘೋಷಗಳ ನಡುವೆ ನಾಡು- ನುಡಿ ಗೀತೆಗಳು ಮೇಳೈಸಿದವು. ಇಂತಹ ಅಪೂರ್ವ ಕಾರ್ಯಕ್ರಮ ನಡೆದದ್ದು ಮೂಡಿಗೆರೆಯ ರೈತ ಭವನದಲ್ಲಿ. ಕವಯತ್ರಿ ಜಯಂತಿ ಕಲ್ಲಕ್ಕಿ ಮತ್ತು ಮಂಜುನಾಥ್‌ ಅವರ ವಿವಾಹ ಸಮಾರಂಭದಲ್ಲಿ ಮೂಡಿಗೆರೆ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಬಣಕಲ್‌ ಘಟಕದ ವತಿಯಿಂದ ಈ ವಿನೂತನ ಕಾರ್ಯಕ್ರಮ ನಡೆಯಿತು.

ಆಶೀರ್ವಾದ ಸೂಚಕವಾದ ಅಕ್ಷತೆಯ ಜೊತೆಗೆ ವಧು-ವರರನ್ನು ಸಾಹಿತ್ಯಾಕ್ಷತೆಯ ನುಡಿಗಳ ಮೂಲಕ ಸಾಹಿತ್ಯಾಕ್ಷತೆ ಹಾಕುವ ಈ ವಿನೂತನ ಕಾರ್ಯಕ್ರಮದಲ್ಲಿ ಸಾಹಿತಿ ಚಟ್ನಳ್ಳಿ ಮಹೇಶ್‌ ವಿಶೇಷ ಉಪನ್ಯಾಸ ನೀಡಿದರು. ಪತಿ-ಪತ್ನಿಯರು ಪರಸ್ಪರ ಅರಿತು ಸಾಮರಸ್ಯದಿಂದ ಬದುಕಬೇಕು. ಮದುವೆ ಸಂದರ್ಭದಲ್ಲಿ ಇರುವ ಸಂಪ್ರದಾಯಗಳು ವಧು-ವರರನ್ನು ಬೆಸೆಯುವ ಜೊತೆಗೆ ಎರಡೂ ಮನೆ-ಮನಗಳನ್ನು ಒಂದಾಗಿಸುತ್ತವೆ. ಗಂಡನ ಮನೆಗೆ ಹೋಗುವ ಹೆಣ್ಣು ಅತ್ತೆಯನ್ನು ತಾಯಿಯಂತೆ ಮತ್ತು ಅತ್ತೆ-ಸೊಸೆಯನ್ನು ಮಗಳಂತೆ ನೋಡಿಕೊಂಡಾಗ ಬದುಕು ಸುಂದರವಾಗುತ್ತದೆ ಎಂದರು.

ಮೂಡಿಗೆರೆ ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್‌ ಮಾತನಾಡಿ, ಮದುವೆ ಸಮಾರಂಭಕ್ಕೆ ಸಾಹಿತ್ಯ ಸ್ಪರ್ಶ ನೀಡಿ ಇಲ್ಲಿನ ಆಚಾರ-ವಿಚಾರ ಸಂಪ್ರದಾಯಗಳ ವಿಶೇ‚ಷ ಅರ್ಥಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.

ಬಣಕಲ್‌ ಕಸಾಪ ಅಧ್ಯಕ್ಷ ವಸಂತ್‌ ಹಾರ್‌ ಗೋಡು ಮಾತನಾಡಿ, ಕಸಾಪ ಸಮ್ಮೇಳನ ಕವಿಗೋಷ್ಠಿಗಳಿಗಷ್ಟೇ ಸೀಮಿತವಾಗದೇ, ಬೇರೆ ಬೇರೆ ಪರಿಸರ ಮತ್ತು ಕ್ಷೇತ್ರದಲ್ಲಿ ಸಾಹಿತ್ಯ ಸ್ಪರ್ಶವನ್ನು ನೀಡುವ ಸಾಧ್ಯತೆಗಳನ್ನು ಕಂಡುಕೊಂಡು ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದರು.

Advertisement

ಗಾಯಕ ಬಕ್ಕಿ ಮಂಜುನಾಥ್‌ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು. ಕಸಾಪ ಪದಾಧಿ ಕಾರಿಗಳಾದ ಲಕ್ಷ್ಮಣಗೌಡ, ಪ್ರಕಾಶ್‌, ಎಂ.ಎಸ್‌. ನಾಗರಾಜ್‌, ಶಾಂತಕುಮಾರ್‌, ಭಕ್ತೇಶ್‌, ಮೋಹನ್‌ ರಾಜಣ್ಣ, ಶೇಖರಪ್ಪ, ಹಾ.ಬಾ. ನಾಗೇಶ್‌, ಕೆ.ಎಲ್‌. ರವಿ, ಅನಿಲ್‌ ಮೊಂತೆರೊ, ನಂದೀಶ್‌ ಬಂಕೇನಹಳ್ಳಿ, ಸಂತೋಷ್‌ ಸಾಲಿಯಾರ್‌, ಕಲ್ಲೇಶ್‌ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next