Advertisement

Kottara ಜಂಕ್ಷನ್‌, ಎಲ್ಲರಿಗೂ ಟೆನ್ಶನ್‌!;ಚೌಕಿಯಲ್ಲಿ ಸಂಚಾರ ಗೊಂದಲ

02:07 PM Sep 15, 2024 | Team Udayavani |

ಕೊಟ್ಟಾರ ಚೌಕಿ: ರಾಷ್ಟ್ರೀಯ ಹೆದ್ದಾರಿ ಮೂಲಕ ಉಡುಪಿ ಭಾಗದಿಂದ ಮಂಗಳೂರು ನಗರ ಪ್ರವೇಶಿಸುವ ಪ್ರಮುಖ ಜಂಕ್ಷನ್‌ ಆಗಿರುವ ಕೊಟ್ಟಾರ ಚೌಕಿಯಲ್ಲಿ ರಸ್ತೆ ಅಭಿವೃದ್ಧಿಯಾದರೂ, ಸಂಚಾರ ವ್ಯವಸ್ಥೆಯಲ್ಲಿರುವ ಗೊಂದಲದಿಂದಾಗಿ ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

ವಾಹನಗಳ ಅಡ್ಡಾದಿಡ್ಡಿ ಸಂಚಾರ, ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳು, ಎಲ್ಲಿ ದಾಟಬೇಕು ಎಂದು ಗೊಂದಲಕ್ಕೆ ಒಳಗಾಗುವ ಪಾದಚಾರಿಗಳಿಂದಾಗಿ  ಕೊಟ್ಟಾರ ಚೌಕಿ  ಅಪಘಾತ ವಲಯವಾಗಿಯೂ ಬದಲಾಗಿದೆ.  ಮೊದಲ ಬಾರಿ ವಾಹನ ಚಲಾಯಿಸಿಕೊಂಡು ಬರುವವರಂತೂ ಅತಿ ಹೆಚ್ಚು ಗೊಂದಲಕ್ಕೆ ಒಳಗಾಗುತ್ತಾರೆ.

ಪಾದಚಾರಿಗಳಿಗೆ ಅವಕಾಶವೇ ಇಲ್ಲ
ಕೊಟ್ಟಾರ ಚೌಕಿ ಪ್ರಮುಖ ಜಂಕ್ಷನ್‌ ಆಗಿರುವುದರಿಂದ ಅಂಗಡಿಗಳು, ಹೊಟೇಲ್‌, ಉದ್ಯೋಗ ಸಂಸ್ಥೆಗಳು ಎಲ್ಲವನ್ನೂ ಒಳಗೊಂಡಿದೆ. ದಿನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಇಲ್ಲಿ ಅಡ್ಡಾಡುತ್ತಾರೆ. ಆದರೆ ಹೆದ್ದಾರಿ, ಸರ್ವಿಸ್‌ ರಸ್ತೆಗಳನ್ನು ದಾಟುವುದು ಜನರಿಗೆ ತ್ರಾಸದಾಯಕವಾಗಿ ಪರಿಣಮಿಸಿದೆ. ಪಾದಚಾರಿಗಳಿಗೆ ರಸ್ತೆ ದಾಟಲು ಝೀಬ್ರಾ ಕ್ರಾಸಿಂಗ್‌ ಕೂಡಾ ಇಲ್ಲ. ಸಂಚಾರ ವಿಭಾಗದ ಪೊಲೀಸರನ್ನು ನಿಯೋಜಿಸಿದರೂ, ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡುಗಳನ್ನು ಮಾಡದ ಹೊರತು ನಿಯಂತ್ರಣ ಸಾಧ್ಯವಿಲ್ಲ. ಈ ಬಗ್ಗೆ ಹಲವು ಸಭೆಗಳಲ್ಲಿ ವಿಚಾರ ಪ್ರಸ್ತಾಪವಾದರೂ, ಸಂಬಂಧಪಟ್ಟವರು ಕ್ರಮ ವಹಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಏನೇನು ಸಮಸ್ಯೆ?

Advertisement

ಸದ್ಯನಗರದ ಕಡೆಯಿಂದ ಕೂಳೂರು ಕಡೆಗೆ ತೆರಳುವ ವಾಹನಗಳು ಮಾತ್ರ ಯಾವುದೇ ಅಡ್ಡಿ ಆತಂಕ ಇಲ್ಲದೆ ನೇರವಾಗಿ ಸಾಗಬಹುದಾಗಿದೆ.

ಕೊಟ್ಟಾರದಿಂದ ಕುಂಟಿಕಾನ ಕಡೆಗೆ, ಮಾಲಾಡಿ ರಸ್ತೆಗೆ ತೆರಳುವ ವಾಹನಗಳು ಬಲಕ್ಕೆ ತಿರುಗಿದ ಕೂಡಲೇ ಹೆದ್ದಾರಿಯಲ್ಲಿ ಕೂಳೂರು ಕಡೆಯ ವಾಹನ ಮುಖಾಮುಖೀಯಾಗುತ್ತವೆ. ಜತೆಗೆ ಕೂಳೂರು ಕಡೆಯಿಂದ ನಗರ ಪ್ರವೇಶಿಸುವ ವಾಹನಗಳೂ ಎದುರಾಗುತ್ತವೆ.

ಕುಂಟಿಕಾನ ಕಡೆಯಿದ ಬಂದು ಕೊಟ್ಟಾರ ಚೌಕಿ ಫ್ಲೈ ಓವರ್‌ನ ಎಡಬದಿಯ ಸರ್ವಿಸ್‌ ರಸ್ತೆಯಲ್ಲಿ ಬರುವ ಕೆಲವು ವಾಹನಗಳು ಕೂಳೂರು ಕಡೆಗೆ ತೆರಳಲು ಮುಖ್ಯರಸ್ತೆಯನ್ನು ದಾಟಿ ಹೋಗುತ್ತಿದ್ದು, ಇದರಿಂದಲೂ ಅಪಘಾತಕ್ಕೆ ಕಾರಣವಾಗುವ ಸಾಧ್ಯತೆಯೇ ಹೆಚ್ಚು.

ವಿರುದ್ಧ ದಿಕ್ಕಿನಲ್ಲಿ ಸಂಚಾರದ ಅಪಾಯ
ಮಾಲೆಮಾರ್‌ ಕಡೆಯಿಂದ ನಗರಕ್ಕೆ ಬರುವ ಬಹುತೇಕ ವಾಹನಗಳು ಕುಂಟಿಕಾನವಾಗಿ ಸಾಗುವ ಬದಲು, ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದು ಕೊಟ್ಟಾರ ಚೌಕಿಯಲ್ಲಿ ಹೆದ್ದಾರಿ ದಾಟಿ ಮುಂದೆ ಸಾಗುತ್ತದೆ. ಮುಖ್ಯವಾಗಿ ಕಾರು, ಆಟೋ, ದ್ವಿಚಕ್ರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ವಿರುದ್ಧ ದಿಕ್ಕಿನಲ್ಲಿಯೇ ಸಂಚರಿಸುವುದು ಕಂಡುಬರುತ್ತದೆ.

ಕೊಟ್ಟಾರ ಚೌಕಿ ಜಂಕ್ಷನ್‌ನಲ್ಲಿ ವಾಹನ ಸಂಚಾರ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿದಂತೆ ಹೆದ್ದಾರಿ ಇಲಾಖೆ, ಮಹಾನಗರ ಪಾಲಿಕೆಯವರ ಸಹಕಾರದಲ್ಲಿ ಕ್ರಮ ವಹಿಸಲಾಗುವುದು. ಯಾವ ರೀತಿ ಸಂಚಾರ ಮಾರ್ಪಾಡು ಮಾಡಿದರೆ ಗೊಂದಲ ನಿವಾರಿಸಬಹುದು ಎನ್ನುವ ಬಗ್ಗೆ ಸಾರ್ವಜನಿಕರೂ ತಮ್ಮ ಅಭಿಪ್ರಾಯವನ್ನು ತಿಳಿಸಬಹುದು.- ಬಿ.ಪಿ. ದಿನೇಶ್‌ ಕುಮಾರ್‌, ಡಿಸಿಸಿ ಅಪರಾಧ ಮತ್ತು ಸಂಚಾರ ವಿಭಾಗ

ಏನೇನು ಆಗಬೇಕಿದೆ?

  • ಜಂಕ್ಷನ್‌ ಭಾಗದಲ್ಲಿ ಸಿಗ್ನಲ್‌ ಲೈಟ್‌ಗಳ ಅಳವಡಿಕೆ
  • ಪಾದಚಾರಿಗಳಿಗೆ ಝೀಬ್ರಾ ಕ್ರಾಸಿಂಗ್‌
  • ಮಾಲೆಮಾರ್‌ ಕಡೆಯಿಂದ ಬರುವ ವಾಹನಗಳಿಗೆ ಪ್ರತ್ಯೇಕ ಸರ್ವಿಸ್‌ ರಸ್ತೆ ಬೇಕು.
  • ಹೆದ್ದಾರಿಯನ್ನು ದಾಟಿ ಹೋಗುವ ವಾಹನಗಳ ಪಥ ಬದಲಾವಣೆ ಅಗತ್ಯ
Advertisement

Udayavani is now on Telegram. Click here to join our channel and stay updated with the latest news.