Advertisement

ಕೊಡಿ ಹಬ್ಬಕ್ಕೆ ದೇಶ-ವಿದೇಶಗಳಿಂದ ಗ್ರಾಮಸ್ಥರ ಆಗಮನ

12:31 AM Dec 10, 2019 | Sriram |

ಕೋಟೇಶ್ವರ: ಇಲ್ಲಿನ ಶ್ರೀ ಕೋಟಿಲಿಂಗೇಶ್ವರ ದೇಗುಲದ ಕೊಡಿ ಹಬ್ಬ ವೀಕ್ಷಿಸಲು ದೇಶ ವಿದೇಶದಲ್ಲಿ ನೆಲೆಸಿರುವ ಆಸುಪಾಸಿನ ಗ್ರಾಮಸ್ಥರು ಊರಿಗೆ ಆಗಮಿಸಿ ದ್ದಾರೆ. ಸಂಭ್ರಮದ ಕೊಡಿ ಹಬ್ಬ ಆಚರಣೆಗೆ ವಿವಿಧ ಸಂಘಟನೆಗಳು ಸಹಿತ ಗ್ರಾಮಸ್ಥರು ಅಣಿಯಾಗಿದ್ದು ನಾನಾ ರೀತಿಯ ಕರಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ಅಂಗಡಿ ಮುಂಗಟ್ಟುಗಳನ್ನು ದೀಪಗಳಿಂದ ಅಲಂಕರಿಸಲಾಗುತ್ತಿದೆ. ರಾಜ್ಯದ ನಾನಾ ಕಡೆಗಳಿಂದ ವ್ಯಾಪಾರ ವ್ಯವಹಾರಕ್ಕಾಗಿ ಅನೇಕ ಮಂದಿ ವಿವಿಧ ಪರಿಕರಗಳೊಡನೆ ಆಗಮಿಸಿದ್ದಾರೆ. ದೇಗುಲದ ಸುತ್ತಮುತ್ತ ಅಲ್ಲದೆ ಪೇಟೆಯಲ್ಲಿ ಆಟಿಕೆಯ ಅಂಗಡಿಸಹಿತ ತಿಂಡಿ ತಿನಿಸುಗಳ ಅಂಗಡಿಗಳು ತಲೆ ಎತ್ತಿವೆ.

ತಾಂಬೂಲಾರೂಢ ಪ್ರಶ್ನೆ: ದೇಗುಲದ ಜೀರ್ಣೋದ್ಧಾರದ ಕಾರ್ಯದ ಬಗ್ಗೆ ಕೇರಳದ ಜೋತಿಷಿ ಅವರ ತಾಂಬೂಲಾರೂಢ ಪ್ರಶ್ನೆಯ ಅನಂತರ ಪ್ರಾಯಶ್ಚಿತ್ತ ವಿಧಿ ನಡೆಸಿ ಆರಂಭಗೊಂಡ 50 ಲಕ್ಷ ರೂ. ವೆಚ್ಚದ ಅಡುಗೆ ಮನೆ ಹಾಗೂ ಭೋಜನ ಶಾಲೆಯ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಗರ್ಭಗುಡಿಯ ಮಾಡಿಗೆ ತಾಮ್ರದ ಹೊದಿಕೆ, ಹಿತ್ತಾಳೆಯ ಕವಚದೊಂದಿಗೆ ನೂತನ ಧ್ವಜಸ್ತಂಭ ಪ್ರತಿಷ್ಠಾಪನೆಯ ಕಾರ್ಯ ನಡೆಯುತ್ತಿದೆ. 1400 ವರ್ಷಗಳ ಇತಿಹಾಸ ಹೊಂದಿರುವ ಶ್ರೀಕೋಟಿಲಿಂಗೇಶ್ವರ ದೇಗುಲದಲ್ಲಿ ಎಪ್ರಿಲ್‌ ತಿಂಗಳಲ್ಲಿ ಧ್ವಜಸ್ತಂಭ ಪ್ರತಿಷ್ಟಾಪನೆ ಪ್ರಯುಕ್ತ ಮತ್ತೂಂದು ರಥೋತ್ಸವ ನಡೆಯಲಿದೆ. ಕಾರಣೀಕ ಕ್ಷೇತ್ರವಾದ ಇಲ್ಲಿ ಸಲಾಂ ಮಂಗಳಾರತಿ ಇಂದಿಗೂ ನಡೆಯುತ್ತಿದ್ದು ಸರ್ವಧರ್ಮಗಳ ಸಮನ್ವಯದ ಪ್ರತೀಕವಾಗಿದೆ.

ಅಲಂಕಾರಗೊಳ್ಳುತ್ತಿರುವ ತೇರು: ಉಭಯ ಜಿಲ್ಲೆಗಳಲ್ಲೇ ಆತೀ ಎತ್ತರದ ರಥವಾಗಿದ್ದು ಇದರ ಗಾಲಿಯು ಪುರಾತನ ಕಾಲದ ಪರಂಪರೆಯ ಗತ ವೈಭವವನ್ನು ಸಾರುತ್ತದೆ. ತೇರಿಗೆ ವಿಶೇಷ ಪುಷ್ಪಾಲಂಕಾರಗೊಳಿಸಲು ಸಂಘಟನೆಗಳು ಮುಂದಾಗಿದೆ.

ನೆಲೆ ಊರಿದ ಕಬ್ಬು
ತಲೆತಲಾಂತರಗಳಿಂದ ನಂಬಿಕೆಯ ಪ್ರತೀಕವಾದ ಕೊಡಿ ಹಬ್ಬದಂದು ಕಬ್ಬಿನ ಕೊನೆ ಮನೆಗೊಯ್ಯುವ ಪರಂಪರೆ ಇಂದಿಗೂ ಪ್ರಸ್ತುತವಾಗಿ ಉಳಿದಿದೆ.

Advertisement

ಕೋಟಿತೀರ್ಥದ ಸುತ್ತ ಅಕ್ಕಿ ಚೆಲ್ಲಬೇಡಿ
ಕೋಟೇಶ್ವರ: ಕೊಡಿಹಬ್ಬದಂದು ಶ್ರೀ ಕೋಟಿಲಿಂಗೇಶ್ವರ ದೇವರ ದರ್ಶನದೊಂದಿಗೆ ಹಲವಾರು ಭಕ್ತರು ಕೋಟಿತೀರ್ಥ ಕೆರೆಯನ್ನು ಸುತ್ತಿ ಪ್ರದಕ್ಷಿಣೆಗೈಯುತ್ತಾರೆ. ಈ ಸಂದರ್ಭ ಅಕ್ಕಿಯನ್ನು ಕೆರೆದಂಡೆಯ ಮೇಲೆ ಚೆಲ್ಲುತ್ತಾರೆ. ಹೀಗೆ ದಿನವಿಡೀ ಚೆಲ್ಲಲ್ಪಟ್ಟ ಅಕ್ಕಿರಾಶಿಯು ಮಣ್ಣು, ಧೂಳಿನೊಂದಿಗೆ ಮಿಶ್ರವಾಗಿ ದಿನವಿಡೀ ಜನರ ಓಡಾಟದಿಂದ ತುಳಿಯಲ್ಪಟ್ಟು ಉಪಯೋಗರಹಿತವಾಗುತ್ತಿದೆ. ಮಣ್ಣುಮಿಶ್ರಿತ ಈ ಅಕ್ಕಿ ಬಳಸಲು ಯೋಗ್ಯವಾಗಿರುವುದಿಲ್ಲ, ಪ್ರಾಣಿ ಪಕ್ಷಿಗಳು ಕೂಡಾ ತಿನ್ನುವುದಿಲ್ಲ.

ಇಲ್ಲಿ ಅಕ್ಕಿ ಹಾಕುವುದಕ್ಕಾಗಿಯೇ ದೇವಸ್ಥಾನದಲ್ಲಿ ಹಾಗೂ ಕೆರೆದಂಡೆ ಬದಿಯಲ್ಲಿ ಆಡಳಿತ ಮಂಡಳಿಯವರು ಸೂಕ್ತ ಆಕರಗಳನ್ನು ಇರಿಸಿರುತ್ತಾರೆ. ಅಕ್ಕಿಯನ್ನು ಈ ಆಕರಗಳಲ್ಲಿ ಹಾಕುವುದರಿಂದ ದೇಗುಲದ ಮಹಾ ಸಂತರ್ಪಣೆಗೆ ಅಕ್ಕಿಯನ್ನು ಬಳಸಬಹುದು. ಈ ಮೂಲಕ ದೊಡ್ಡ ಪ್ರಮಾಣದಲ್ಲಿ ಅಕ್ಕಿ ವ್ಯರ್ಥವಾಗುವುದನ್ನು ತಪ್ಪಿಸಬಹುದು.

ಎಲ್ಲ ಭಕ್ತರೂ ಅಕ್ಕಿಯನ್ನು ಕೆರೆಬದಿ ಚೆಲ್ಲದೇ ನಿಗದಿತ ಸ್ಥಳದಲ್ಲಿಯೇ ಹಾಕಬೇಕು. ಅಮೂಲ್ಯವಾದ ಆಹಾರ ಪದಾರ್ಥ ವ್ಯರ್ಥವಾಗುವುದನ್ನು ತಪ್ಪಿಸಬೇಕು. ಇದು ಕೂಡಾ ದೇವರ ಸೇವೆಯೇ ಆಗಿದೆ ಎಂದು ಕೋಟೇಶ್ವರ ಯಜ್ಞ ನಾರಾಯಣ ಉಳ್ಳೂರ ಅವರು ಮನವಿ ಮಾಡಿದ್ದಾರೆ.

ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next