ಬೆಂಗಳೂರು : ಕನ್ನಡ ರಾಜ್ಯೋತ್ಸವವು ನಮ್ಮೆಲ್ಲರ ಮನೆಯ ಹಬ್ಬವಾಗಿದ್ದು, ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ರಾಜ್ಯದ 17 ಸಾವಿರ ಕಾರ್ಖಾನೆಯ 17 ಲಕ್ಷ ಉದ್ಯೋಗಿಗಳು ಭಾಗಿಯಾಗಲಿದ್ದಾರೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ವಿಧಾನಸೌಧದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ನಮ್ಮ ನಾಡಿನ ಅಸ್ಮಿತೆಯ ಹಬ್ಬವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅಗತ್ಯ ವಿಜೃಂಭಣೆಯಿಂದ ಆಚರಿಸುತ್ತಿರುವುದು ಅತ್ಯಂತ ಸ್ವಾಗತಾರ್ಹ ಅದಕ್ಕಾಗಿ ನಮ್ಮ ಕಾರ್ಮಿಕ ಇಲಾಖೆಯು ಈ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದೆ ಎಂದರು.
ಕನ್ನಡ ರಾಜ್ಯೋತ್ಸವ ನಮ್ಮೆಲ್ಲರ ಹಬ್ಬ. ರಾಜ್ಯೋತ್ಸವು ನಿತ್ಯೋತ್ಸವವಾಗಲಿ. ಅದಕ್ಕಾಗಿ ಕಾರ್ಮಿಕ ಇಲಾಖೆ ಸದಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಹಕಾರ ನೀಡಲಿದೆ. ಈ ಕಾರ್ಯಕ್ರಮವನ್ನು ನಾವೆಲ್ಲರೂ ಸೇರಿ ಅರ್ಥಪೂರ್ಣವಾಗಿ ಆಚರಿಸೋಣ ಎಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಮಾತನಾಡಿ, ಕೋಟಿ ಕಂಠ ಕಾರ್ಯಕ್ರಮಕ್ಕಾಗಿ ಕಾರ್ಮಿಕ ಇಲಾಖೆಯೊಂದಿಗೆ ಜೊತೆಗೂಡಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ಇಲಾಖೆಯು ನೀಡಿರುವ ದಾಟಿಯಲ್ಲಿ ಗೀತೆಯನ್ನು ಹಾಡಲು ಪೂರ್ವ ಸಿದ್ದತೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ. ಅಭಿಯಾನದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಯಾವುದೇ ಸಮಸ್ಯೆ ಉಂಟಾದಲ್ಲಿ ನಮ್ಮ ಇಲಾಖೆ ಸಹಕಾರ ನೀಡಲಿದೆ ಎಂದರು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್, ಕಾರ್ಮಿಕ ಆಯುಕ್ತ ಅಕ್ರಂ ಪಾಷ, ಕಕ ಮತ್ತು ಇನಿಕಾಕ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯದರ್ಶಿ ಗುರುಪ್ರಸಾದ್ ಎಂ ಪಿ, ಫ್ಯಾಕ್ಟರಿ ಮತ್ತು ಬಾಯ್ಲರ್ ನಿರ್ದೇಶಕರಾದ ಶ್ರೀನಿವಾಸ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಅಭಿವೃದ್ಧಿಗೆ ಕಾಯುತ್ತಿದೆ ಪುತ್ತಿಗೆ; ಡೀಮ್ಡ್ ಫಾರೆಸ್ಟ್ ಸಮಸ್ಯೆ ನಡುವೆ ಕೊರಗರ ಕೂಗು