Advertisement

ಕೋಟಿ ಕಂಠ ಗಾಯನ ಆಯೋಜನೆ: ದೇಶದ ಇತಿಹಾಸದಲ್ಲೇ ಮೊದಲು: ಸಚಿವ ಸುನಿಲ್‌

12:58 AM Oct 19, 2022 | Team Udayavani |

ಮಂಗಳೂರು: ಕರ್ನಾಟಕ ರಾಜ್ಯೋತ್ಸವವನ್ನು ಅವಿಸ್ಮರಣೀಯ ವಾಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅ. 28ರಂದು ಬೆಳಗ್ಗೆ 11 ಗಂಟೆಗೆ ಜಗತ್ತಿನಾದ್ಯಂತ ಏಕಕಾಲ ದಲ್ಲಿ ಕೋಟಿ ಕಂಠ ಗಾಯನ ಆಯೋಜಿಸಲಾಗಿದೆ. ಒಂದು ಭಾಷೆ, ಸಂಸ್ಕೃತಿಯನ್ನು ಪ್ರತಿನಿಧಿಸುವ ಈ ಕಾರ್ಯಕ್ರಮ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯಲಿದೆ ಎಂದು ಇಲಾಖಾ ಸಚಿವ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಕಾರ್ಯಕ್ರಮದ ಪೂರ್ವಭಾವಿ ಯಾಗಿ ಮಂಗಳವಾರ ದ.ಕ. ಜಿ.ಪಂ. ಸಭಾಂಗಣದಲ್ಲಿ ಜರಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ತಣ್ಣೀರುಬಾವಿ, ಪಣಂಬೂರು ಬೀಚ್‌, ಮೂಡುಬಿದಿರೆಯ ಆಳ್ವಾಸ್‌ ಕಾಲೇಜು, ಸಾವಿರ ಕಂಬದ ಬಸದಿಗಳಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಜತೆಗೆ ಸರಕಾರಿ ಕಚೇರಿ, ಶಾಲಾ, ಕಾಲೇಜು, ಖಾಸಗಿ ಕಚೇರಿ, ಮೆಡಿಕಲ್‌, ಪ್ಯಾರಾಮೆಡಿಕಲ್‌, ಎಂಜಿನಿಯರಿಂಗ್‌ ಕಾಲೇಜು, ಗ್ರಾ.ಪಂ. ಮಟ್ಟದಲ್ಲಿ, ಸ್ವಸಹಾಯ ಸಂಘ, ಬ್ಯಾಂಕ್‌, ಕೆಎಸ್ಸಾರ್ಟಿಸಿ, ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಭಾಗವಹಿಸಬೇಕು. ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲೂ ಆಯೋಜಿಸಬೇಕು. ಜಿಲ್ಲೆಯಿಂದ ಕನಿಷ್ಠ 7 ಲಕ್ಷ ಮಂದಿ ಪಾಲ್ಗೊಳ್ಳುವ ಗುರಿ ನೀಡಲಾಗಿದೆ ಎಂದರು.

ಆರು ಹಾಡುಗಳು
ಬೆಳಗ್ಗೆ 10.30ಕ್ಕೆ ಸಿದ್ಧತೆ ಪಡಿಸಿಕೊಂಡು, 11 ಗಂಟೆಗೆ ಗಾಯನ ಆರಂಭಿಸಬೇಕು. ಮೊದಲಿಗೆ ನಾಡಗೀತೆ, ಅನಂತರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವವಿನೂತನ ವಿದ್ಯಾಚೇತನ ಹಾಗೂ ಕೊನೆಯಲ್ಲಿ ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು. ಈ ಹಾಡುಗಳ ಟ್ರ್ಯಾಕ್ ಇಲಾಖೆಯ ಯೂಟ್ಯೂಬ್‌ ಚಾನಲ್‌ನಲ್ಲಿ ಲಭ್ಯವಿದೆ.

ಕಾರ್ಯಕ್ರಮ ದಲ್ಲಿ ಭಾಗವಹಿಸುವ ಸಂಘ-ಸಂಸ್ಥೆಗಳು ಇಲಾಖಾ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಬಿಡುಗಡೆಗೊಳಿಸಲಾಗಿರುವ ಕ್ಯುಆರ್‌ ಕೋಡ್‌ ಮೂಲಕ ನೋಂದಾ ಯಿಸಬೇಕು ಎಂದು ಸೂಚಿಸಿದರು.

Advertisement

ದೇಶ ವಿದೇಶಗಳಲ್ಲೂ ತಯಾರಿ
10 ಸಾವಿರ ಕಡೆಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಉದ್ದೇಶವಿದ್ದು, ಈಗಾಗಲೇ ವಿವಿಧ ರಾಜ್ಯಗಳಲ್ಲಿರುವ ಕನ್ನಡ ಸಂಘಗಳು, ವಿಶ್ವದ ವಿವಿಧ ದೇಶಗಳಲ್ಲಿರುವ ಕನ್ನಡ ಸಂಘಗಳನ್ನು ಸಂಪರ್ಕಿಸಲಾಗಿದೆ. ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ತಯಾರಿ ನಡೆಸುವಂತೆ ಸೂಚನೆ ನೀಡಲಾಗಿದೆ. ರಾಜ್ಯದ ಮಟ್ಟದ ಕಾರ್ಯಕ್ರಮ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ. ಇದರಲ್ಲಿ 50 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ವಿವರಿಸಿದರು.

ಶಾಸಕರಾದ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ ವೈ., ಉಮಾನಾಥ ಕೋಟ್ಯಾನ್‌, ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಮೇಯರ್‌ ಜಯಾನಂದ ಅಂಚನ್‌, ಉಪಮೇಯರ್‌ ಪೂರ್ಣಿಮಾ, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಜಿಪಂ ಸಿಇಒ ಡಾ| ಕುಮಾರ್‌, ಎಡಿಸಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್‌.ಕೆ., ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್‌, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ, ಶಿಕ್ಷಣ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.

ಹೆಚ್ಚು ಸಂಖ್ಯೆಯಲ್ಲಿ ನೋಂದಾಯಿಸಲು ಕರೆ
ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಅ. 28ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ರಾಜ್ಯಾದಂತ ಏಕಕಾಲದಲ್ಲಿ ಕೋಟಿ ಕಂಠಗಾಯನ ಕಾರ್ಯಕ್ರಮ ನಡೆಯಲಿದೆ. ಭಾಗವಹಿಸುವವರು ವೆಬ್‌ಸೈಟ್‌: https://kannadasiri.karnataka.gov.in/kkg/public/ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ಕೋಟಿ ಕಂಠ ಗಾಯನದಲ್ಲಿ ಭಾಗವಹಿಸಿದವರಿಗೆ ಸ್ವಯಂಚಾಲಿತ ಆನ್‌ಲೈನ್‌ ಪ್ರಮಾಣ ಪತ್ರ ನೀಡಲಾಗುವುದು. ಅ. 11ರಿಂದ 28ರ ವರೆಗೆ ನೋಂದಣಿ ಅಭಿಯಾನ ನಡೆಯಲಿದೆ. ಸಾರ್ವಜನಿಕರು ಅತೀ ಹೆಚ್ಚು ಸಂಖ್ಯೆ
ಯಲ್ಲಿ ನೋಂದಾಯಿಸಬಹುದು ಎಂದು ಜಿಲ್ಲಾ ಪಂಚಾಯತ್‌ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನೆಲ-ಜಲ-
ಆಕಾಶದಲ್ಲೂ …
ಕಾರ್ಯಕ್ರಮ ನೆಲದಲ್ಲಿ ಮಾತ್ರ ನಡೆಯದೆ, ಬೋಟ್‌ಗಳಲ್ಲಿ, ವಿಮಾನದಲ್ಲೂ ನಡೆಯಲಿದೆ. ಮಂಗಳೂರು ಮತ್ತು ಉಡುಪಿಯಲ್ಲಿ ಮೀನುಗಾರ ಮುಖಂಡರನ್ನು ಈ ನಿಟ್ಟಿನಲ್ಲಿ ಸಂಪರ್ಕಿಸಲಾಗಿದ್ದು, ವಿಮಾನ ನಿಲ್ದಾಣದ ಅಧಿಕಾರಿಗಳನ್ನೂ ಸಂಪರ್ಕಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next