ದಾವಣಗೆರೆ: ಕರ್ನಾಟಕದ 67ನೇ ರಾಜ್ಯೋತ್ಸವ ಅಂಗವಾಗಿ ಶುಕ್ರವಾರ ಅತ್ಯಂತ ಅದ್ದೂರಿಯಾಗಿ ನನ್ನ ನಾಡು- ನನ್ನ ಹಾಡು, ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಿತು.
ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಮಹಾನಗರ ಪಾಲಿಕೆ, ವಿಶ್ವವಿದ್ಯಾಲಯ, ತಾಲೂಕು ಕಚೇರಿ, ಸಾಹಿತ್ಯ ಪರಿಷತ್ತು, ಶಾಲಾ- ಕಾಲೇಜು, ಕನ್ನಡ ಪರ ಸಂಘಟನೆ, ಸಂಸ್ಥೆಗಳಲ್ಲಿ ಏಕಕಾಲಕ್ಕೆ ಸಾವಿರಾರು ಜನರು ಆಯ್ದ ಆರು ಹಾಡುಗಳ ಹಾಡುವ ಮೂಲಕ ಎಲ್ಲೆಡೆ ಕನ್ನಡದ ವಾತಾವರಣ ನಿರ್ಮಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಪ್ರಮುಖ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪುರವರ ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ಬಾರಿಸು ಕನ್ನಡ ಡಿಂಡಿಮವ, ಹುಯಿಲಗೋಳ ನಾರಾಯಣರಾವ್ ಅವರ ಉದಯವಾಗಲಿ ನಮ್ಮ ಚಲುವ ಕನ್ನಡನಾಡು, ಚೆನ್ನವೀರ ಕಣವಿಯವರ ವಿಶ್ವ ವಿನೂತನ, ಡಿ.ಎಸ್. ಕರ್ಕಿಯವರ ಹಚ್ಚೇವು ಕನ್ನಡದ ದೀಪ, ಹಂಸಲೇಖರ ವರ, ಹುಟ್ಟಿದರೆ ಕನ್ನಡನಾಡಲ್ಲಿ ಹಾಡುಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡುವ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿ, ಹಿರಿಮೆ, ಗರಿಮೆಯ ಬಿಂಬಿಸಿದರು.
ಇದನ್ನೂ ಓದಿ:ಕರೆನ್ಸಿ ನೋಟಿನಲ್ಲಿ ಲಕ್ಷ್ಮಿ ಮತ್ತು ಗಣೇಶನ ಚಿತ್ರ: ಪ್ರಧಾನಿ ಮೋದಿಗೆ ಪತ್ರಬರೆದ ಕೇಜ್ರಿವಾಲ್
ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎ. ಚನ್ನಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಲಕ್ಷ್ಮಿದೇವಿ ಇತರರು ಕನ್ನಡದ ಹಬ್ಬಕ್ಕೆ ಸಾಕ್ಷಿಯಾದರು.