ಉಡುಪಿ: ಮಹಾಭಾರತ ಯುದ್ಧ ಕಾಲದಲ್ಲಿ ಭಗವದ್ಗೀತೆ ಮೂಡಿ ಬಂತು. ಈಗ ಮತ್ತೆ ಜಾಗತಿಕ ಯುದ್ಧ ನಡೆಯುತ್ತಿದೆ. ಈ ಸಂಕೀರ್ಣ ಸಂದರ್ಭದಲ್ಲಿ ನಾವು ಆಯೋಜಿಸುತ್ತಿರುವ ಕೋಟಿ ಗೀತಾ ಲೇಖನ ಯಜ್ಞ ಸಹಕಾರಿಯಾಗಲಿ ಎಂದು ಭಾವೀ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಶ್ರೀ ಅನಂತೇಶ್ವರ ದೇಗುಲದಲ್ಲಿ ಶುಕ್ರವಾರ ನಡೆದ ತಮ್ಮ ಚತುರ್ಥ ಪರ್ಯಾಯದ ಪ್ರಯುಕ್ತ ಸಂಕಲ್ಪಿಸಿರುವ ಕೋಟಿ ಗೀತಾ ಲೇಖನ ಯಜ್ಞದ ಕೋಟಿ ಲೇಖನ ಪುಸ್ತಕಗಳ ಪ್ರಥಮ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಸ್ತಾವನೆಗೈದ ಅವರು, ಮುಂದಿನ ಪರ್ಯಾಯವನ್ನು ನಾಲ್ಕನೆಯ ವಿಶ್ವ ಗೀತಾ ಪರ್ಯಾಯವಾಗಿ ನಡೆಸು ತ್ತೇವೆ ಎಂದವರು ತಿಳಿಸಿದರು.
ಇಂಗ್ಲಿಷ್ ಆವೃತ್ತಿ ಬಿಡುಗಡೆಗೊಳಿಸಿದ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಕನ್ನಡ ಆವೃತ್ತಿ ಬಿಡುಗಡೆಗೊಳಿಸಿದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನನೀಡಿ ಶ್ರೀಕೃಷ್ಣ ಉಪದೇಶಿ ಸಿದ ಭಗವದ್ಗೀತೆಯು ಸರ್ವ ಕಾಲಕ್ಕೂ ಪ್ರಸ್ತುತ ವಾಗಿದೆ ಎಂದರು.
ಗೀತಾಲೇಖನ ಪುಸ್ತಕ ಬಿಡುಗಡೆಗೆ ಮುನ್ನ ರಥಬೀದಿಯಲ್ಲಿ ಲೇಖನ ಪುಸ್ತಕಗಳ ಮೆರವಣಿಗೆ ನಡೆಯಿತು. ಮಹಿತೋಷ ಆಚಾರ್ಯ ಸ್ವಾಗತಿಸಿ ವಂದಿಸಿದರು.