Advertisement

ಕೋಟಿ-ಚೆನ್ನಯ ಥೀಮ್‌ ಪಾರ್ಕ್‌ ಸಿಬಂದಿಗಿಲ್ಲ ಸಂಬಳ

09:11 PM Mar 08, 2020 | Sriram |

ಕಾರ್ಕಳ: ಕಾರ್ಕಳದಲ್ಲಿನ ಕೋಟಿ ಚೆನ್ನಯ ಥೀಮ್‌ ಪಾರ್ಕ್‌ ಸಿಬಂದಿ ಕಳೆದ 11 ತಿಂಗಳಿನಿಂದ ವೇತನವಾಗದೇ ಸಂಕಷ್ಟದಲ್ಲಿದ್ದಾರೆ. ಇದರಿಂದ ಜೀವನ ನಿರ್ವಹಣೆಗಾಗಿ ಪರಿತಪಿಸು ವಂತಹ ದುಃಸ್ಥಿತಿ ಬಂದೊದಗಿದೆ.

Advertisement

ಕೇರ್‌ಟೇಕರ್‌ ಆಗಿರುವ ಸುರೇಂದ್ರ ಪೂಜಾರಿ ಹಾಗೂ ಸೆಕ್ಯುರಿಟಿ ಗಾರ್ಡ್‌ ಆಗಿರುವ ಶ್ಯಾಮ ಕಾಬೆಟ್ಟು ವೇತನವಿಲ್ಲದೇ ದುಡಿಯುತ್ತಿರುವ ಸಿಬಂದಿ. ಸುರೇಂದ್ರ ಪೂಜಾರಿಯವರು 2013ರಲ್ಲಿ ಹಾಗೂ ಶ್ಯಾಮ ಕಾಬೆಟ್ಟು ಅವರು 2017ರಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇರ್ಪಡೆಯಾದವರು. ಕಳೆದ ವರ್ಷದಿಂದ ಹೊರ ಗುತ್ತಿಗೆದಾರರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಣ ಸಂದಾಯವಾಗದ ಪರಿಣಾಮ ಗುತ್ತಿಗೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.

ವೇತನವೂ ಅತ್ಯಲ್ಪ
ಈ ಸಿಬಂದಿಗೆ ಹೊರಗುತ್ತಿಗೆದಾರರಿಂದ ಅತ್ಯಲ್ಪ ಪ್ರಮಾಣದಲ್ಲಿ ಸಂಬಳ ಪಾವತಿಯಾಗುತ್ತಿತ್ತು. ಸುರೇಂದ್ರ ಪೂಜಾರಿಯವರಿಗೆ 8 ಸಾವಿರ ರೂ. ನಿಗದಿಯಾಗಿದ್ದರೆ, ಶ್ಯಾಮ್‌ ಅವರಿಗೆ ದೊರೆಯುತ್ತಿದ್ದ ವೇತನ 7 ಸಾವಿರ ರೂ., ಬೆಳಗ್ಗೆ 9ರಿಂದ 5:30 ತನಕ ಕರ್ತವ್ಯ ನಿರ್ವಹಿಸುತ್ತಿರುವ ಇವರು ಪಾರ್ಕ್‌ನ ಸ್ವತ್ಛತೆ, ಗಿಡಗಳಿಗೆ ನೀರು ಸಿಂಪಡಿಸುವ ಕಾರ್ಯ ಹೀಗೆ ಪ್ರತಿಯೊಂದು ಕೆಲಸವನ್ನೂ ಮಾಡಿಕೊಂಡು ಬಂದಿರುತ್ತಾರೆ. ಆದರೆ ವೇತನವೂ ಅತ್ಯಲ್ಪ, 11 ತಿಂಗಳಿಂದ ಸಂಬಳವೂ ಇಲ್ಲದೆ ಇವರ ಕಷ್ಟ ಹೇಳತೀರದಾಗಿದೆ.

ವಿಶಾಲವಾದ ಥೀಮ್‌ ಪಾರ್ಕ್‌
ತುಳುನಾಡ ವೀರ ಪುರುಷರಾದ ಕೋಟಿ-ಚೆನ್ನಯರ ಹೆಸರಲ್ಲಿ ಕಾರ್ಕಳದಲ್ಲಿ ಕೋಟಿ ಚೆನ್ನಯ ಥೀಮ್‌ ಪಾರ್ಕ್‌ ನಿರ್ಮಾಣವಾಗಿದ್ದು, ಸುಮಾರು 10 ಎಕ್ರೆ ಪ್ರದೇಶದಲ್ಲಿ ವಿಸ್ತರಿಸಿದೆ. ನಗರದಿಂದ 3 ಕಿ.ಮೀ. ದೂರದ ತಾಲೂಕು ಕ್ರೀಡಾಂಗಣದ ಅನತಿ ದೂರದಲ್ಲಿರುವ ಈ ಪಾರ್ಕ್‌ನಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಅಭಿವೃದ್ಧಿ ಕಾಮಗಾರಿ ನಡೆದಿದೆ.

ಎರಡನೇ ಹಂತವಾಗಿ 2 ಕೋಟಿ ರೂ. ವೆಚ್ಚದಲ್ಲಿ ತುಳುನಾಡ ವೈಭವ ಸಾರುವ ಕಲಾಕೃತಿಗಳ ನಿರ್ಮಾಣ, ತೆರೆದ ಸಭಾಂಗಣ, ಉಪಾಹಾರ ಮಂದಿರ, ವಸತಿ ಗೃಹ, ಗ್ರಂಥಾಲಯ ನಿರ್ಮಾಣವಾಗುತ್ತಿದೆ.

Advertisement

ಸಚಿವ ಸಿ.ಟಿ. ರವಿಗೂ ಮನವಿ
ಫೆ. 22ರಂದು ಕೊಂಕಣಿ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಹಿನ್ನೆಲೆಯಲ್ಲಿ ಕಾರ್ಕಳಕ್ಕೆ ಆಗಮಿಸಿದ ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ. ರವಿ ಅವರ ಗಮನಕ್ಕೆ ವೇತನ ಪಾವತಿಯಾಗದ ಕುರಿತು ಗಮನ ಸೆಳೆದಾಗ, ಸ್ಥಳೀಯಾಡಳಿತ ಮತ್ತು ಜಿಲ್ಲಾಡಳಿತವೇ ಪಾರ್ಕ್‌ಗಳ ನಿರ್ವಹಣೆ ಮಾಡುತ್ತಿದೆ. ಹೀಗಾಗಿ ಜಿಲ್ಲಾಡಳಿತದಿಂದ ವೇತನ ಪಾವತಿಯಾಗಬೇಕಾಗಿದೆ ಎಂದಿದ್ದರು.

ಶೌಚಾಲಯಕ್ಕೆ 10 ಲಕ್ಷ ರೂ.
ಪ್ರವಾಸೋದ್ಯಮ ಇಲಾಖೆ ವತಿಯಿಂದ ಬಿಡುಗಡೆಗೊಂಡಿರುವ 10.5 ಲಕ್ಷ ರೂ. ವೆಚ್ಚದಲ್ಲಿ ಥೀಮ್‌ ಪಾರ್ಕ್‌ನಲ್ಲಿ ಶೌಚಾಲಯವೊಂದು ನಿರ್ಮಾಣವಾಗುತ್ತಿದೆ. ಲೋಕೋಪಯೋಗಿ ಇಲಾಖೆ ಕಾಮಗಾರಿ ಕೈಗೆತ್ತಿಗೊಂಡಿದೆ. ಹಂಚಿನಲ್ಲಿ ನಿರ್ಮಾಣವಾಗುತ್ತಿರುವ ಈ ಶೌಚಾಲಯಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಹಣ ವ್ಯಯವಾಗುವುದೇ ಎಂಬ ಪ್ರಶ್ನೆ ಸಾರ್ವಜನಿಕರದ್ದು.

ಕಾರ್ಕಳದಲ್ಲಿನ ಕೋಟಿ ಚೆನ್ನಯ ಥೀಮ್‌ ಪಾರ್ಕ್‌ ಸಿಬಂದಿ ಕೇರ್‌ ಟೇಕರ್‌ ಸುರೇಂದ್ರ ಪೂಜಾರಿ, ಸೆಕ್ಯುರಿಟಿ ಗಾರ್ಡ್‌ ಶ್ಯಾಮ ಕಾಬೆಟ್ಟು ಕಳೆದ 11 ತಿಂಗಳಿನಿಂದ ವೇತನವಾಗದೇ ಸಂಕಷ್ಟದಲ್ಲಿದ್ದಾರೆ.

ಸುತ್ತೋಲೆಗಿಲ್ಲ ಬೆಲೆ
2019ರ ಸೆ. 24ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಇ-ಮೇಲ್‌ ಮೂಲಕ ಇಲ್ಲಿನ ಸಿಬಂದಿ ವೇತನದ ಕುರಿತು ಮನವಿ ಮಾಡಿಕೊಂಡಾಗ ವೇತನ ಬಿಡುಗಡೆ ಮಾಡುವಂತೆ 2019ರ ನ. 10ರಂದು ಇಲಾಖೆ ನಿರ್ದೇಶಕರಿಂದ ಜಿಲ್ಲಾಧಿಕಾರಿಯವರಿಗೆ ಆದೇಶವಾಗಿರುತ್ತದೆ. ಆದರೆ, ತದನಂತರವೂ ವೇತನವಾಗದಿರುವುದು ಸಿಬಂದಿ ನೋವು ಇಮ್ಮಡಿಗೊಳಿಸಿದೆ.

ವೇತನ ಶೀಘ್ರ ಜಾರಿ
ಕಳೆದ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಿಡುಗಡೆ ಆಗಿರುವ ಮೊತ್ತ ಕಾರಣಾಂತರಗಳಿಂದ ಲ್ಯಾಪ್ಸ್‌ ಆಗಿದೆ. ಈ ಕುರಿತು ಇಲಾಖೆಯ ಜಂಟಿ ನಿರ್ದೇಶಕರೊಂದಿಗೆ ಚರ್ಚಿಸಿದ್ದೇನೆ. ಮುಂದಿನ ಒಂದು ವಾರದಲ್ಲಿ ಸಿಬಂದಿಗೆ ವೇತನ ಪಾವತಿಯಾಗಲಿದೆ.
-ಕುಮಾರಬಾಬು ಬೆಕ್ಕೇರಿ,ಸಹಾಯಕ ನಿರ್ದೇಶಕರು, ಕನ್ನಡ ಸಂಸ್ಕೃತಿ ಇಲಾಖೆ-ಉಡುಪಿ.

ವೇತನ ದೊರಕಿಸಿಕೊಡುತ್ತೇನೆ
ಕಳೆದ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ದೊರೆತ ಅನುದಾನ ವಾಪಸಾಗಿದೆ. ಕೆಲಸ ಮಾಡುತ್ತಿರುವ ಸಿಬಂದಿಗೆ ವೇತನ ದೊರಕಿಸಿಕೊಡುತ್ತೇನೆ.
-ಜಿ.ಜಗದೀಶ್‌,ಜಿಲ್ಲಾಧಿಕಾರಿ,ಉಡುಪಿ.

-ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next