Advertisement

ಪಡುಮಲೆಯಲ್ಲಿ ಕೋಟಿ –ಚೆನ್ನಯ ಅಧ್ಯಯನ ಕೇಂದ್ರ: ರಮಾನಾಥ ರೈ

03:00 AM Jul 05, 2017 | Karthik A |

ಪುತ್ತೂರು: ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ ಚೆನ್ನಯರ ಹುಟ್ಟೂರು ಪಡುಮಲೆಯ ಅಭಿವೃದ್ಧಿಗೆ ಸರಕಾರದಿಂದ ಮಂಜೂರಾಗಿರುವ 5 ಕೋಟಿ ರೂ. ಅನುದಾನದಲ್ಲಿ ಮೊದಲ ಹಂತದ ಕಾಮಗಾರಿಗಳನ್ನು ಡಿಸೆಂಬರ್‌ ತಿಂಗಳ ಒಳಗೆ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಬಿ. ರಮಾನಾಥ ರೈ ಹೇಳಿದರು. ಪುತ್ತೂರು ಮಿನಿ ವಿಧಾನಸೌಧದಲ್ಲಿ ಮಂಗಳವಾರ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮತ್ತು ಸಹಾಯಕ ಕಮಿಷನರ್‌ ಡಾ| ರಘುನಂದನ ಮೂರ್ತಿ ಅವರ ಜತೆ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

Advertisement

ಪಡುಮಲೆ ಪ್ರದೇಶದ ಶಂಖಪಾಲ ಬೆಟ್ಟದ ತಪ್ಪಲಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಈ ಕಾಮಗಾರಿಯನ್ನು ತ್ವರಿತವಾಗಿ ನಡೆಸುವಂತೆ ಸೂಚಿಸಲಾಗಿದೆ. ಇದೇ ಪ್ರದೇಶದಲ್ಲಿ ಕೋಟಿ -ಚೆನ್ನಯ ಅಧ್ಯಯನ ಕೇಂದ್ರ ನಿರ್ಮಿಸಲಾಗುವುದು. ಶಂಖಪಾಲ ಬೆಟ್ಟದ ತುದಿಯಲ್ಲಿ ಧಾರ್ಮಿಕ ಪರಂಪರೆಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಕಾಮಗಾರಿ ನಡೆಸಲಾಗುವುದು ಎಂದರು.

ಶಂಖಪಾಲ ಬೆಟ್ಟದ ಅಭಿವೃದ್ಧಿ
ಶಂಖಪಾಲ ಬೆಟ್ಟದಲ್ಲಿ ಮಾತೆ ದೇಯಿ ಬೈದ್ಯೆತಿ ಮತ್ತು ಅವಳಿ ವೀರರಾದ ಕೋಟಿ – ಚೆನ್ನಯರ ಪ್ರತಿಮೆ ಸ್ಥಾಪಿಸುವ ಮೂಲಕ ಈ ಪ್ರದೇಶವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಸಮುದಾಯ ಭವನದಿಂದ ಬೆಟ್ಟದ ತುದಿಗೆ ಹೋಗಲು ಅನುಕೂಲವಾಗುವಂತೆ ಸುಂದರ ಮೆಟ್ಟಿಲುಗಳನ್ನು ನಿರ್ಮಿಸಲಾಗುವುದು ಎಂದರು. ಇದರ ಜತೆಗೆ ಕಾರಣಿಕ ಕ್ಷೇತ್ರ ಪೂಮಾಣಿ – ಕಿನ್ನಿಮಾಣಿ ದೈವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದ್ದು, ಇದಕ್ಕೆ 20 ಲಕ್ಷ ರೂ. ಮಂಜೂರು ಮಾಡಲಾಗಿದೆ ಎಂದರು.

ಔಷಧ ವನಕ್ಕೆ ಮತ್ತಷ್ಟು ಅನುದಾನ
ಪಡುಮಲೆ ಕ್ಷೇತ್ರ ವ್ಯಾಪ್ತಿಯ ಮುಡಿಪುನಡ್ಕದಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಿಸಲಾಗಿರುವ ದೇಯಿ ಬೈದ್ಯೆತಿ ಔಷಧವನದಲ್ಲಿ ಈಗಾಗಲೇ ಮೊದಲ ಹಂತದ ಸಸ್ಯ ನಾಟಿ ಮುಗಿದು ಔಷಧ ವನ ಸುಂದರವಾಗಿ ರೂಪುಗೊಂಡಿದೆ. ಆರೂವರೆ ಎಕ್ರೆ ಪ್ರದೇಶದ ಈ ವನದಲ್ಲಿ ಅರ್ಧದಷ್ಟು ಜಾಗ ಇನ್ನೂ ಖಾಲಿ ಇದೆ. ಅದರಲ್ಲೂ ಪಾದಚಾರಿ ಪಥ, ಸುಂದರ ವನ, ಔಷಧ ವನ ಮೊದಲಾದವುಗಳನ್ನು ನಿರ್ಮಿಸುವ ಉದ್ದೇಶವಿದೆ. ಅರಣ್ಯ ಇಲಾಖೆಯಿಂದ ಎರಡನೇ ಹಂತದ ಅಭಿವೃದ್ಧಿ ಕಾರ್ಯ ಮಾಡಲಾಗುವುದು. ಮೈಂದನಡ್ಕ ಪ್ರದೇಶದ ಸಮೀಪದಲ್ಲಿರುವ ಪ್ರಾಚೀನ ಕೆರೆಯೊಂದನ್ನು ಅರಣ್ಯ ಇಲಾಖೆ ಅನುದಾನದಲ್ಲೇ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ರಸ್ತೆಗಳ ಅಭಿವೃದ್ಧಿ
ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಪಡುಮಲೆ ಪ್ರದೇಶದ ಅಭಿವೃದ್ಧಿಯ ಜತೆಗೆಯೇ ಅಲ್ಲಿನ ರಸ್ತೆಗಳ ಅಭಿವೃದ್ಧಿಯೂ ನಡೆಯುತ್ತಿದೆ. ಎರಡನೇ ಹಂತದಲ್ಲಿ ರಸ್ತೆ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡಲಾಗುವುದು ಎಂದರು.

Advertisement

ಜಾಗ ಬಿಟ್ಟುಕೊಡದಿದ್ದರೆ ಅನುದಾನ ಅಸಾಧ್ಯ
ದೇಯಿ ಬೈದ್ಯೆತಿ, ಕೋಟಿ – ಚೆನ್ನಯರ ಬದುಕಿನ ಪ್ರಮುಖ ಕುರುಹುಗಳಿರುವ ಪ್ರದೇಶಗಳು ಖಾಸಗಿ ಜಮೀನುಗಳಲ್ಲಿವೆ. ಅವುಗಳನ್ನು ಸರಕಾರಕ್ಕೆ ಬಿಟ್ಟು ಕೊಟ್ಟರೆ ಅಲ್ಲಿ ಅಭಿವೃದ್ಧಿ ಕಾರ್ಯ ನಡೆಸಲು ಸಾಧ್ಯ. ಆದರೆ ಖಾಸಗಿ ಜಮೀನು ನೀಡಲು ಮಾಲಕರು ಸಿದ್ಧರಿಲ್ಲ. ಹಾಗಾಗಿ ಅಲ್ಲಿಗೆ ಸರಕಾರದ ದುಡ್ಡು ಕೊಡಲೂ ಸಾಧ್ಯವಾಗುವುದಿಲ್ಲ. ಶಂಖಪಾಲ ಬೆಟ್ಟ ಪ್ರದೇಶ ಸರಕಾರದ ವಶದಲ್ಲಿರುವ ಕಾರಣ ಅಲ್ಲಿ ಉತ್ತಮ ಪ್ರವಾಸಿ ಕೇಂದ್ರವನ್ನು ಕೋಟಿ – ಚೆನ್ನಯರ ಹೆಸರಿನಲ್ಲಿ ನಿರ್ಮಿಸಲಾಗುವುದು. ಈ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿ ಪ್ರಮೀಳಾ ಅವರಿಗೆ ಇದರ ಉಸ್ತುವಾರಿ ವಹಿಸಲಾಗಿದ್ದು, ಅವರ ಮೂಲಕ ಈ ಕೆಲಸ ನಡೆಯಲಿವೆ. ಡಿಸೆಂಬರ್‌ ಹೊತ್ತಿಗೆ ಮೊದಲ ಹಂತದ ಕೆಲಸ ಮುಗಿಸುವ ಗುರಿ ಇದೆ.
– ರಮಾನಾಥ ರೈ, ದ.ಕ., ಜಿಲ್ಲಾ ಉಸ್ತುವಾರಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next