Advertisement
ಕೋಟಿ ಚೆನ್ನಯರ ಹೆಸರನ್ನು ಪುತ್ತೂರು ಬಸ್ ನಿಲ್ದಾಣಕ್ಕೆ ಇಡುವ ಸಂಬಂಧ ಸಾರಿಗೆ ಸಚಿವ ಶ್ರೀರಾಮಲು ಅವರ ಸೂಚನೆಯ ಮೇರೆಗೆ ಇಲಾಖೆಯು ಆದೇಶ ನೀಡುವ ಮೂಲಕ ಹಲವು ಕಾಲದ ಬೇಡಿಕೆಗೆ ಸ್ಪಂದನೆ ಸಿಕ್ಕಿದೆ. ಕೆ.ಎಸ್.ಆರ್.ಟಿ.ಸಿ. ಗೆ ಸೇರಿದ ಜಾಗದಲ್ಲಿ ಖಾಸಗಿಯವರು ಬಸ್ ನಿಲ್ದಾಣ ಕಟ್ಟಿದ್ದು, ಇದು ಜಿಲ್ಲೆಯಲ್ಲಿ ಸರಕಾರಿ ಖಾಸಗಿ ಸಹಭಾಗಿತ್ವದ (ಪಿಪಿಪಿ) ಅತಿದೊಡ್ಡ ಬಸ್ ನಿಲ್ದಾಣ ಎಂಬ ಹೆಗ್ಗಳಿಕೆ ಹೊಂದಿದೆ.
Related Articles
Advertisement
ಯುವವಾಹಿನಿ ಪುತ್ತೂರು ಘಟಕದ ವತಿಯಿಂದ 2 ವರ್ಷಗಳ ಹಿಂದೆ ಶಾಸಕರಿಗೆ ಮನವಿ ಸಲ್ಲಿಸಿ ಅವಳಿ ವೀರರ ಹೆಸರನ್ನು ಪುತ್ತೂರು ಬಸ್ ನಿಲ್ದಾಣಕ್ಕೆ ಇಡುವಂತೆ ಕೋರಲಾಗಿತ್ತು. ದೇಯಿ ಬೈದ್ಯೆತಿ- ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತಿಲ್ ವತಿಯಿಂದ ಮನವಿ ಮಾಡಲಾಗಿತ್ತು. ಪಡುಮಲೆಯ ಕೋಟಿ ಚೆನ್ನಯ ಜನ್ಮಸ್ಥಳ ಸಂಚಾಲನ ಸಮಿತಿಯಿಂದ ಪುತ್ತೂರು ನಗರಸಭೆಗೆ ಮನವಿ ಸಲ್ಲಿಸಲಾಗಿತ್ತು. ಹೀಗೆ ಸತತ ಮನವಿಗಳ ಹಿನ್ನೆಲೆ ಮತ್ತು ಶಾಸಕರ ಪ್ರಯತ್ನ ಇದೀಗ ಫಲ ನೀಡಿದೆ.
ಮೂಲ ಊರು
ತುಳುನಾಡಿನಾದ್ಯಂತ 250ಕ್ಕಿಂತಲೂ ಅಧಿಕ ಗರಡಿಗಳಲ್ಲಿ ಉಪಾಸನೆ ಪಡೆಯುತ್ತಿರುವ ಕೋಟಿ ಚೆನ್ನಯರ ಮೂಲ ಊರು ಪುತ್ತೂರು. ಹೀಗಾಗಿ ಪುತ್ತೂರು ಬಸ್ ನಿಲ್ದಾಣಕ್ಕೆ ವೀರರ ಹೆಸರು ಸೂಕ್ತವೆಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಕೋಟಿ ಚೆನ್ನಯರ ಮೂಲಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತಿಲ್, ಕೋಟಿ ಚೆನ್ನಯರ ಜನ್ಮಸ್ಥಳ ಪಡುಮಲೆ, ಬಲ್ಲಾಳರ ಬೀಡು, ಸ್ವರ್ಣಕೇದಗೆ ಬೆಳೆದ ಮನೆಯೂ ಸೇರಿದಂತೆ ಅವಳಿ ವೀರರ ಬದುಕಿನ ಕುರುಹುಗಳು ಇಲ್ಲಿವೆ. ದೇಯಿ ಬೈದ್ಯೆತಿ ಔಷಧಿವನ ಮುಡಿಪುನಡ್ಕದಲ್ಲಿದೆ.
ಮೂರೂವರೆ ಎಕ್ರೆ ಬಸ್ ನಿಲ್ದಾಣ
ಕೆ.ಎಸ್.ಆರ್.ಟಿ.ಸಿ.ಗೆ ಸೇರಿದ ಸುಮಾರು ಮೂರೂವರೆ ಎಕ್ರೆ ಪ್ರದೇಶದಲ್ಲಿ ಪುತ್ತೂರು ಬಸ್ ನಿಲ್ದಾಣ ನಿರ್ಮಾಣವಾಗಿದೆ. ಹಿಂದುಸ್ಥಾನ್ ಪ್ರೊಮೋಟರ್ಸ್ ಮತ್ತು ಡೆವಲಪರ್ಸ್ ಸಂಸ್ಥೆ 33 ಕೋಟಿ ರೂ. ವೆಚ್ಚದಲ್ಲಿ ಬಸ್ ಟರ್ಮಿನಲ್ ಹಾಗೂ ವಾಣಿಜ್ಯ ಮಳಿಗೆ ನಿರ್ಮಿಸಿದೆ. 33 ವರ್ಷಗಳ ಕಾಲ ಇದರ ನಿರ್ವಹಣೆ ಈ ಸಂಸ್ಥೆಗೆ ಸೇರಿದೆ. 2016ರ ಜನವರಿ 9ರಂದು ಅಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಸ್ ಟರ್ಮಿನಲ್ ಉದ್ಘಾಟಿಸಿದ್ದರು.
ಬೇಡಿಕೆಗೆ ಸ್ಪಂದನೆ: ಕಾರಣಿಕ ಶಕ್ತಿಗಳಾದ ಕೋಟಿ ಚೆನ್ನಯರ ಹುಟ್ಟೂರಿನಲ್ಲಿ ಇರುವ ತಾಲೂಕು ಬಸ್ ನಿಲ್ದಾಣಕ್ಕೆ ಅವಳಿ ವೀರರ ಹೆಸರು ಇಡಬೇಕು ಎನ್ನುವ ಬೇಡಿಕೆಗೆ ಸ್ಪಂದನೆ ಸಿಕ್ಕಿದೆ. ಸಚಿವ ಶ್ರೀರಾಮಲು ಅವರು ನಮ್ಮ ಬೇಡಿಕೆಗೆ ಸ್ಪಂದಿಸಿದ್ದಾರೆ. ಇದೀಗ ಕೋಟಿ ಚೆನ್ನಯ ಹೆಸರು ಅಂತಿಮ ಗೊಂಡಿರುವ ಆದೇಶ ದೊರೆತಿದೆ. –ಸಂಜೀವ ಮಠಂದೂರು, ಶಾಸಕರು, ಪುತ್ತೂರು