Advertisement
ಈ ಪ್ರದೇಶ ಆವೆ (ಕೊಜೆ) ಮಣ್ಣಿನಿಂದ ಕೂಡಿದ್ದು ಎಲ್ಲ ಬಾವಿಗಳಲ್ಲಿ ಕೆಂಪು ನೀರು ಸಿಗುತ್ತದೆ. ಹೀಗಾಗಿ ಇಲ್ಲಿನ 100 ಕುಟುಂಬಗಳು ಪ್ರತಿದಿನವೂ ನಳ್ಳಿ ನೀರನ್ನೆ ಅವಲಂಭಿಸಿವೆ. ಆದರೆ ಹಲವು ದಿನಗಳಿಂದ ಈ ಭಾಗಕ್ಕೆ ನೀರಿನ ಪೂರೈಕೆಯಾಗುತ್ತಿಲ್ಲ.
ನಾಲ್ಕೈದು ದಿನಕ್ಕೆ ಆಗೊಮ್ಮೆ-ಈಗೊಮ್ಮೆ ನೀರು ಬರುತ್ತದೆ. ಒಂದೆರಡು ವರ್ಷದಿಂದ ಈ ಸಮಸ್ಯೆ ಇದೆ. ಒಂದು ಕೊಡಪಾನ ನೀರಿಗಾಗಿ ಕಿ.ಮೀ. ಸುತ್ತಾಡಬೇಕು. ಕೆಲವು ದಿನದಿಂದ ಮನೆಯ ಮೇಲ್ಛಾವಣಿಯ ಮಳೆಯ ನೀರನ್ನು ನೇರವಾಗಿ ಬಳಕೆ ಮಾಡುತ್ತಿದ್ದೇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಂಪೂರ್ಣ ಮಹಿಳೆಯರೇ ಸೇರಿದ್ದು ವಿಶೇಷವಾಗಿತ್ತು. ಕೆಲವರು ನಳ್ಳಿಯಿಂದ ಅಕ್ರಮ ಸಂಪರ್ಕ ಪಡೆದು ತೋಟ, ಟ್ಯಾಂಕ್‌ಗಳಲ್ಲಿ ನೀರು ಸಂಗ್ರಹ ಮಾಡುತ್ತಾರೆ ಮತ್ತು ವಾಟರ್ ಮ್ಯಾನ್ ಸರಿಯಾಗಿ ಕಾರ್ಯನಿರ್ವಹಿಸು ವುದಿಲ್ಲ. ಸಮಸ್ಯೆಯನ್ನು ಸರಿಪಡಿಸುವ ತನಕ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.
Related Articles
ಗ್ರಾ.ಪಂ. ಅಧ್ಯಕ್ಷ ರಘು ತಿಂಗಳಾಯ ಹಾಗೂ ಪಿಡಿಒ ಶೈಲಜಾ ಪೂಜಾರಿ ಮನವಿ ಸ್ವೀಕರಿಸಿ ಮಾತನಾಡಿ, ಮೂರು ದಿನಗಳಲ್ಲಿ ಅಕ್ರಮ ಸಂಪರ್ಕವನ್ನು ಗುರುತಿಸಿ ಕ್ರಮಕೈಗೊಳ್ಳಲಾಗುವುದು ಮತ್ತು ನೀರಿನ ಪೂರೈಕೆಗೆ ಇರುವ ಸಮಸ್ಯೆಯನ್ನು ದುರಸ್ತಿಪಡಿಸಲಾಗುವುದು. ವಾಟರ್ ಮ್ಯಾನ್‌ಗೆಸರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಅನಂತರ ಪ್ರತಿಭಟನೆ ಹಿಂಪಡೆಯಲಾಯಿತು.
Advertisement
ವಾರ್ಡ್ ಸದಸ್ಯ ಜಯಪ್ರಕಾಶ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಲೋಕೇಶ್ ಶೆಟ್ಟಿ, ಕಾರ್ಯದರ್ಶಿ ಮೀರಾ ಹಾಗೂ ಸದಸ್ಯರಾದ ವಾಸು ಪೂಜಾರಿ, ಸತೀಶ್ ಉಪಸ್ಥಿತರಿದ್ದರು. ಹಂದಟ್ಟು ನಿವಾಸಿಗಳಾದ ಪುಷ್ಪಾ, ಆಶಾ, ಜಲಜಾ, ಗ್ರಾ.ಪಂ. ಸದಸ್ಯೆ ಅಕ್ಕು, ರತ್ನಾ, ಸವಿತಾ, ದೀಪಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಅನುದಾನ ಮೀಸಲಿರಿಸಲಾಗಿದೆಇಲ್ಲಿನ ಕುಡಿಯುವ ನೀರಿನ ಕಾಮಗಾರಿಗಾಗಿ ಜಿ.ಪಂ.ನಿಂದ 10.50ಲಕ್ಷ ಮತ್ತು 14ನೇ ಹಣಕಾಸು ನಿಧಿಯಿಂದ 3.63ಸಾವಿರ ಮೀಸಲಿರಿಸಿದ್ದೇವೆ. ಆದರೆ ಮಳೆಗಾಲ ಕಳೆಯುವ ತನಕ ಕಾಮಗಾರಿ ನಡೆಸಲು ಅಸಾಧ್ಯ. ಮಳೆಗಾಲ ಮುಗಿಯುತ್ತಿದ್ದಂತೆ ಶಾಶ್ವತ ಕಾಮಗಾರಿ ನಡೆಸುತ್ತೇವೆ. ಸಮಸ್ಯೆಗೆ ಕಾರಣ ಪತ್ತೆಹಚ್ಚಿ ಬಗೆಹರಿಸುತ್ತೇವೆ ಎಂದು ಗ್ರಾ.ಪಂ. ಅಧ್ಯಕ್ಷ ರಘು ತಿಂಗಳಾಯ ಹಾಗೂ ಸದಸ್ಯ ಜಯಪ್ರಕಾಶ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.