Advertisement

ಕೋಟೇಶ್ವರ: ಇಂದು ಕೊಡಿ ಹಬ್ಬ

08:41 PM Dec 11, 2019 | mahesh |

ಕೋಟೇಶ್ವರ: ಶ್ರೀಕೋಟಿಲಿಂಗೇಶ್ವರ ದೇಗುಲದ ರಥೋತ್ಸವ (ಕೊಡಿ ಹಬ್ಬ) ಡಿ. 12 ರಂದು ನಡೆಯಲಿದ್ದು, ಪೇಟೆಯು ಶೃಂಗಾರಗೊಂಡಿದ್ದು ಮದುಮ ಗಳಂತೆ ಅಣಿಯಾಗಿದೆ. ದೇಗುಲ ದಲ್ಲಿ ಡಿ. 5ರಿಂದ ಅಂಕುರಾರೋಹಣ ದೊಡನೆ ಆರಂಭಗೊಂಡ ಧಾರ್ಮಿಕ ಕಾರ್ಯಗಳು ಡಿ. 12ರ ರಥೋತ್ಸವದವರೆಗೆ ನಡೆಯಲಿದೆ. ಡಿ. 13 ರಂದು ಚೂರ್ಣೋತ್ಸವ ಹಾಗೂ ಅವಭೃತ ಸ್ನಾನ ನಡೆಯುವುದು.

Advertisement

ನಾಡವರಿಂದ ಓಕುಳಿಸೇವೆ
1,200 ವರ್ಷಗಳ ಇತಿಹಾಸ ಹೊಂದಿರುವ ಈ ಪುರಾತನ ದೇಗುಲವು ಪುರಾಣ ಪ್ರಸಿದ್ಧವಾಗಿದ್ದು ಮಾರ್ಕೋಡು, ಮಲ್ಯಾಡಿ ಹಾಗೂ ತೆಕ್ಕಟ್ಟೆಯ ಬಂಟರಿಂದ ನಡೆಯುವ ಓಕುಳಿ ಸೇವೆ ಹೆಚ್ಚಿನ ಮಹತ್ವ ಪಡೆದಿದೆ. ನಡುರಾತ್ರಿಯಿಂದ ನಸುಕಿನವರೆಗೆ ನಡೆಯುವ ಸೇವೆಯನ್ನು ವೀಕ್ಷಿಸಲು ಅನೇಕ ಗ್ರಾಮಸ್ಥರು ಸೇರುತ್ತಾರೆ.

ಕಬ್ಬಿನ ಕೊಡಿ ಸೇವೆ
ಜಾತ್ರೆಯ ದಿನ ಮಾರಾಟಕ್ಕಿಟ್ಟ ಕಬ್ಬಿನ ಕೊಡಿಯನ್ನು ಖರೀದಿಸಿ ಮನೆಗೆ ಕೊಡೊಯ್ಯುವ ಪರಂಪರೆ ಇಂದಿಗೂ ನಡೆದುಕೊಂಡು ಬಂದಿದೆ.

ವಧೂವರರ ಅನ್ವೇಷಣೆ
ಕೊಡಿಹಬ್ಬದಂದು ದೇಗುಲದಲ್ಲಿ ದೇವರ ದರ್ಶನದ ಸಂದರ್ಭದಲ್ಲಿ ವಧು- ವರರ ಅನ್ವೇಷಣೆಗಾಗಿ ನಿಮಿತ್ತ ನೋಡುವ ಪದ್ಧತಿ ಇದೆ. ನಿಮಿತ್ತ ಕೂಡಿ ಬಂದಲ್ಲಿ ಮುಂದಿನ ವರ್ಷದ ಜಾತ್ರೆಯೊಳಗೆ ವಿವಾಹ ನಡೆದು ದೇಗುಲಕ್ಕೆ ಆಗಮಿಸಿ ಕೃತಾರ್ಥರಾಗುವ ಸಂಪ್ರದಾಯ ಪ್ರಚಲಿತವಿದೆ. ರಥೋತ್ಸವದಂದು ಕೋಟಿತೀರ್ಥ ಪುಷ್ಕರಿಣಿಯನ್ನು ದೀಪಾಲಂಕಾರಗೊಳಿಸಲಾಗುವುದು.

50ನೇ ವರ್ಷದ ಕಟ್ಟೆ ಪೂಜೆ
ಕೋಟೇಶ್ವರ: ಕೊಡಿ ಹಬ್ಬದ ಪ್ರಯುಕ್ತ ಕೋಟೇಶ್ವರದ ರಾಮನಾಥ ಗೋಳಿಕಟ್ಟೆ ಫ್ರೆಂಡ್ಸ್‌ ವತಿಯಿಂದ 50ನೇ ವರ್ಷದ ಕಟ್ಟೆ ಪೂಜೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಡಿ. 12ರಂದು ರಾತ್ರಿ 9ಕ್ಕೆ ಮೂರು ಮುತ್ತು ಕಲಾವಿದರಿಂದ ಹೊಟೇಲ್‌ ಸುಂದರ ಹಾಸ್ಯ ನಾಟಕ, ಡಿ.13 ರಂದು ರಾತ್ರಿ ಹಾಲಾಡಿ ಮೇಳ ಮತ್ತು ಅತಿಥಿ ಕಲಾವಿದರಿಂದ ಚಂದ್ರಾವಳಿ ವಿಲಾಸ ಹಾಗೂ ಸುಧನ್ವಾರ್ಜುನ ಯಕ್ಷಗಾನ ಪ್ರದರ್ಶನ, ಡಿ.14ಕ್ಕೆ ರಾಕ್‌ ಆನ್‌ ಮೂಸಿಕಲ್‌ ಮಂಗಳೂರು ವತಿಯಿಂದ ಸಂಗೀತ ರಸಮಂಜರಿಯು ಕೋಟೇಶ್ವರದ ಪಬ್ಲಿಕ್‌ ಸ್ಕೂಲ್‌ನಲ್ಲಿ ನಡೆಯಲಿದೆ.

Advertisement

ಮದ್ಯ ಮಾರಾಟ ನಿಷೇಧ
ಕುಂದಾಪುರ: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋಟೇಶ್ವರ ಗ್ರಾಮದ ಕೋಟಿಲಿಂಗೇಶ್ವರ ದೇವಸ್ಥಾನ ರಥೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಡಿ. 11ರಂದು ಆರಂಭಗೊಂಡಿದ್ದು 13ರ ವರೆಗೆ ನಡೆಯಲಿರುವುದರಿಂದ, ಈ ಸಮಯದಲ್ಲಿ ಬಾರ್‌ ಮತ್ತು ವೈನ್‌ಶಾಪ್‌ಗ್ಳು ತೆರೆದಿದ್ದಲ್ಲಿ, ಮದ್ಯಪಾನಾಸಕ್ತರು ಮದ್ಯಪಾನ ಮಾಡಿ ಗಲಭೆ ಮಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ, ಕುಂದಾಪುರ ಠಾಣಾ ವ್ಯಾಪ್ತಿಯ ಹಂಗಳೂರು, ಕೋಟೇಶ್ವರ, ಗೋಪಾಡಿ, ಬೀಜಾಡಿ ಗ್ರಾಮ ವ್ಯಾಪ್ತಿಯೊಳಗಿನ ಪ್ರದೇಶದಲ್ಲಿ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್‌ ಮತ್ತು ರೆಸ್ಟೋರೆಂಟ್‌ ಮತ್ತು ವೈನ್‌ಶಾಪ್‌ಗ್ಳ ಮದ್ಯ ಮಾರಾಟವನ್ನು ಡಿ. 12ರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಅಬಕಾರಿ ಸನ್ನದುಗಳನ್ನು ಮುಚ್ಚಲು ಆದೇಶಿಸಿ, ಈ ಗ್ರಾಮಗಳ ವ್ಯಾಪ್ತಿಯಲ್ಲಿ ಒಣ ದಿನವೆಂದು ಘೋಷಿಸಿ, ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಜಿ.ಜಗದೀಶ್‌ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next