Advertisement

ರೈತರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ… ಅಧಿಕಾರಿಗಳಿಗೆ ನೂತನ ಜಿಲ್ಲಾಧಿಕಾರಿ ಸೂಚನೆ

02:20 PM Dec 18, 2023 | Team Udayavani |

ಕೊರಟಗೆರೆ: ತಾಲೂಕಿನ ಕಸಬಾ ಹೋಬಳಿ ಬೋಡಬಂಡೇನಹಳ್ಳಿ ರಸ್ತೆಯ ರೈತರ ಜಮೀನುಗಳಿಗೆ ಸೋಮವಾರ ಬೆಳ್ಳಂ ಬೆಳಗ್ಗೆ ನೂತನ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ, ರೈತರ ಬೆಳೆ ನಷ್ಟ ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಶೀಘ್ರವೇ ಪರಿಹರಿಸುವಂತೆ ಸೂಚಿಸಿದರು.

Advertisement

ನೂತನ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾಹಿತಿ ಪಡೆದ ನಂತರ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ ಮಳೆ ಕೈಕೊಟ್ಟು ರೈತರಿಗೆ ಸಂಪೂರ್ಣ ನಷ್ಟ ಉಂಟಾಗಿದೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗದಂತೆ ರೈತರಿಗೆ ಅವಶ್ಯಕ ಮೇವಿನ ಬೀಜವನ್ನು ವಿತರಣೆ ಮಾಡಲಾಗಿದೆ, ಇನ್ನೂ ಅವಶ್ಯಕತೆ ಇದ್ದಲ್ಲಿ ಶೀಘ್ರವೇ ವಿತರಣೆ ಮಾಡುವಂತೆ ಕೃಷಿ ಹಾಗೂ ಪಶು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಈ ಬಾರಿ ಕುಡಿಯುವ ನೀರಿನಲ್ಲಿ ಸಮಸ್ಯೆ ಕಂಡುಬರದಂತೆ ವಿತರಣೆ ಮಾಡಲು ಜಿಲ್ಲಾಡಳಿತ ಸಿದ್ಧವಾಗಿದೆ, ಟಾಸ್ಕ್ಪೋರ್ಸ್ ಕಮಿಟಿ ಮತ್ತು ಜೆಜೆಎಂ ಮುಖಾಂತರ ನೂತನ ಬೋರ್‌ವೆಲ್ ಕೊರೆದು ನೀರಿನ ಯೂರೇನಿಯಂ ಚೆಕ್ ಮಾಡಲು ತಿಳಿಸಿದ್ದೇನೆ, ಅದರ ರಿಪೋರ್ಟ್ ನೋಡಿ ಕುಡಿಯುವ ನೀರಿಗೆ ಯೋಗ್ಯವಾಗಿದ್ದಲ್ಲಿ ನೀರನ್ನು ವಿತರಣೆ ಮಾಡುವಂತೆ ತಿಳಿಸಲಾಗಿದೆ ಎಂದರು.

ಹೈನು. ರಾಸುಗಳಿಗೆ ಮೇವಿನ ತೊಂದರೆ ಆಗದಂತೆ ಸಂಬಂಧಪಟ್ಟ ಅಧಿಕಾರಿಗಳು ರೈತರ ಸಂಪರ್ಕದಲ್ಲಿ ಇರುವಂತೆ ತಿಳಿಸಿದ್ದೇನೆ, ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಊಟದ ವ್ಯವಸ್ಥೆ ಮತ್ತು ಮೊಟ್ಟೆ ವಿತರಣೆಯಲ್ಲಿ ಸಮಸ್ಯೆ ಏನಾದರೂ ಕಂಡಿದಿಯಾ ಎಂದು ಪೋಷಕರನ್ನು ಕೇಳಿ ಅವರಿಂದ ಮಾಹಿತಿ ಪಡೆದರು, ರೈತರ ಹಾಗೂ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿ ಶೀಘ್ರವಾಗಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.

ಪಶು ಇಲಾಖೆ ಅಧಿಕಾರಿ ನಾಗರಾಜು ಮಾತನಾಡಿ, ಈಗಾಗಲೇ ಪಶು ಇಲಾಖೆಯಿಂದ ಸಮಾರು 6.550 ನೀರಾವರಿ ಹೊಂದಿರುವ ರೈತರ ಜಾನುವಾರುಗಳಿಗೆ ಮಿನಿ ಕಿಟ್ ಮೇವಿನ ಬೀಜಗಳನ್ನು ನೀಡಲಾಗಿದೆ, ಇನ್ನೂ ಹೆಚ್ಚಿನ ಮೇವಿನ ಬೀಜಗಳು ಬೇಕಿದ್ದಲ್ಲಿ ರೈತರು ನೇರವಾಗಿ ನಮ್ಮ ಇಲಾಖೆಯನ್ನು ಸಂಪರ್ಕಿಸಿ ಪಡೆಯಬಹುದು ಎಂದು ಹೇಳಿದರು.

Advertisement

ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ್, ತಾ.ಪಂ ಇಓ ಅಪೂರ್ವ, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಹೆಚ್.ನಾಗರಾಜು, ಪಶು ಇಲಾಖೆ ನಾಗರಾಜು ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಈ ಬಾರಿ ಮಳೆ ಅಭಾವದಿಂದ ತಾಲೂಕಿನ ರೈತರಿಗೆ ನಷ್ಟ ಉಂಟಾಗಿದೆ. ಆದ್ದರಿಂದ ನಮ್ಮ ಇಲಾಖೆಯಿಂದ ರೈತರಿಗೆ ೪ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಮೇವು ಮತ್ತು ಕಾಳು ಬೆಳೆಯಲು ಮುಸುಕಿನ ಜೋಳ ಹಾಗೂ ಅಲಸಂಡಿ, ಸಜ್ಜೆ, ಜೋಳ ವಿತರಿಸಲಾಗಿದೆ, ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬಹುದು.
– ಹೆಚ್.ನಾಗರಾಜ, ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ ಕೊರಟಗೆರೆ.

ತಾಲೂಕಿನ ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಚಿಕ್ಕಪಾಲನಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸೋಮವಾರ ಭೇಟಿ ನೀಡಿ ಪಶು ಸಂಗೋಪನ ಇಲಾಖೆಯಿಂದ ರಾಸುಗಳನ್ನು ಹೊಂದಿರುವ ರೈತರಿಗೆ ವಿತರಿಸಿದ ಉಚಿತ ಮೇವು ಬೀಜಗಳ ಬೆಳೆಗಳನ್ನು ಮತ್ತು ಸಿಎನ್ ದುರ್ಗಾ ಹೋಬಳಿ ಅಗ್ರಹಾರ ಗ್ರಾ.ಪಂ ವ್ಯಾಪ್ತಿಯ ದಮಗಲಯ್ಯನ ಪಾಳ್ಯ ಗ್ರಾಮದಲ್ಲಿ ನೀರಿನ ಸಮಸ್ಯೆಯಿಂದಾಗಿ ಬರಗಾಲದ ಟಾಸ್ಕ್ ಪೋರ್ಸ್ ಕಮಿಟಿಯಿಂದ ಕೊರೆಸಿದ ಕೊಳವೆ ಬಾವಿಯ ಸ್ಥಳ ಹಾಗೂ ಕಸಬಾ ಹೋಬಳಿ ಹೂಲೀಕುಂಟೆ ಗ್ರಾ.ಪಂ ವ್ಯಾಪ್ತಿಯ ಚಿಕ್ಕಗೌಡನಹಳ್ಳಿ ಗ್ರಾಮದಲ್ಲಿ ಬರಗಾಲ ಪರಿಸ್ಥಿತಿಯಿಂದ ಉಂಟಾದ ಬೆಳೆ ನಷ್ಟವಾಗಿರುವ ಜಮೀನುಗಳನ್ನು ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನಲ್ಲಿ ಸಮಸ್ಯೆ ಉಂಟಾಗದಂತೆ ಗಮನಹರಿಸಲಾಗುವುದು ಎಂದರು.

ಇದನ್ನೂ ಓದಿ: Hassan: ಅನಾಥ ‌ಸ್ಥಿತಿಯಲ್ಲಿದೆ 900 ವರ್ಷ ಪುರಾತನ ಕೊಂಡಜ್ಜಿ ದೇಗುಲ!

Advertisement

Udayavani is now on Telegram. Click here to join our channel and stay updated with the latest news.

Next