Advertisement

ಕೋಟೆಕಾರ್‌ ಬೀರಿ ಜಂಕ್ಷನ್‌: ಬೇಕಾಗಿದೆ ವ್ಯವಸ್ಥಿತ ಬಸ್‌ ತಂಗುದಾಣ

12:43 AM Mar 21, 2020 | mahesh |

ಮಹಾನಗರ: ರಾಷ್ಟ್ರೀಯ ಹೆದ್ದಾರ 66ರ ಮಂಗಳೂರು – ತಲಪಾಡಿ ನಡುವಣ ಕೋಟೆಕಾರ್‌ ಬೀರಿ ಪ್ರದೇಶವು ಮೂರು ಮಾರ್ಗಗಳು ಸೇರುವ ಪ್ರಮುಖ ಜಂಕ್ಷನ್‌. ವ್ಯವಸ್ಥಿತವಾದ ಬಸ್‌ ತಂಗುದಾಣದ ಕೊರತೆ ಈ ಜಂಕ್ಷನ್‌ನ ಬಹುಮುಖ್ಯ ಸಮಸ್ಯೆ.

Advertisement

ಮಂಗಳೂರು- ಕಾಸರಗೋಡು ಮಧ್ಯೆ 3 ನಿಮಿಷಗಳಿಗೊಮ್ಮೆ ಓಡಾಡುವ ಅಂತಾ ರಾಜ್ಯ ಬಸ್‌ಗಳು, ಮಂಗಳೂರು- ತಲಪಾಡಿ ನಡುವೆ ಸಂಚರಿಸುವ ಸಿಟಿ ಬಸ್‌ಗಳು, ಮಂಗಳೂರಿಂದ ಮಢಾರ್‌- ಪಾನೀರ್‌ ಮಾರ್ಗವಾಗಿ ಮುಡಿಪು ಕಡೆಗೆ ಸಂಚರಿ ಸುವ ಸಿಟಿ ಮತ್ತು ಸರ್ವಿಸ್‌ ಬಸ್‌ಗಳು ಈ ಜಂಕ್ಷನ್‌ ಮೂಲಕವೇ ಹಾದು ಹೋಗು ತ್ತಿವೆ. ಸಾವಿರಾರು ಮಂದಿ ಪ್ರಯಾ ಣಿಕರು ಪ್ರತಿ ನಿತ್ಯ ಇಲ್ಲಿ ಬಸ್‌
ಹತ್ತುತ್ತಾರೆ ಮತ್ತು ಇಳಿಯುತ್ತಾರೆ.

ಆದರೆ ಇಲ್ಲಿ ವ್ಯವಸ್ಥಿತವಾದ ಬಸ್‌ ತಂಗುದಾಣ ಇಲ್ಲದೆ ಪ್ರಯಾಣಿಕರು ರಸ್ತೆ ಬದಿ ಬಿಸಿಲು ಮತ್ತು ಮಳೆಗೆ ಮೈಯೊಡ್ಡಿ ನಿಲ್ಲು  ವುದು ಅನಿವಾರ್ಯ. ಪ್ರಸ್ತುತ ಉರಿ ಬಿಸಿಲಿನ ವಾತಾವರಣ ಇದ್ದು, ಬಸ್‌ಗೆ ಕಾಯುವ ಜನರು ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾಗುವ ಪರಿಸ್ಥಿತಿ ಇದೆ. ಕೆಲವು ವರ್ಷ ಗಳಿಂದ ಈ ಶೋಚನೀಯ ಸ್ಥಿತಿ ಇದೆ.

ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಹೊಂದಿ ಅದನ್ನು ಸಂಚಾರಕ್ಕೆ ಮುಕ್ತಗೊಳಿಸಿ 4 ವರ್ಷಗಳು ಕಳೆದಿವೆ. ಬೀರಿ ಪ್ರದೇಶದಲ್ಲಿ ಎರಡೂ ಬದಿ ಸರ್ವಿಸ್‌ ರಸ್ತೆ ನಿರ್ಮಾಣವಾಗಿ ಎರಡು ವರ್ಷಗಳಾಗಿವೆ. ಆದರೆ ಇಲ್ಲಿ ವ್ಯವಸ್ಥಿತ ಬಸ್‌ ತಂಗುದಾಣ ಸೌಲಭ್ಯ ಒದಗಿಸಿಲ್ಲ. ತಲಪಾಡಿ ಯಿಂದ ಮಂಗಳೂರು ಕಡೆಗೆ ಬರುವ ಸರ್ವಿಸ್‌ ರಸ್ತೆಯಲ್ಲಿ ತಂಗುದಾಣವನ್ನು ನಿರ್ಮಿಸಿದ್ದರೂ ಅದು ಊಟಕ್ಕಿಲ್ಲದ ಉಪ್ಪಿನಕಯಿಯಂತಾಗಿದೆ. ಏಕೆಂದರೆ ಈ ತಂಗು ದಾಣವು ಜಂಕ್ಷನ್‌ನಿಂದ ಸುಮಾರು 150 ಮೀಟರ್‌ ದೂರ ಇದ್ದು, ಅಲ್ಲಿ ಬಸ್‌ಗಳನ್ನು ನಿಲ್ಲಿ ಸುವುದಿಲ್ಲ. ಹಾಗಾಗಿ ಜನರು ಕೂಡ ಈ ತಂಗು ದಾಣವನ್ನು ಬಳಕೆ ಮಾಡುತ್ತಿಲ್ಲ. ಸರ್ವಿಸ್‌ ರಸ್ತೆ ನಿರ್ಮಾಣವಾಗಿ ಎರಡು ವರ್ಷ ಕಳೆದಿದ್ದು, ಈ ರಸ್ತೆಯಲ್ಲಿ ಬಸ್‌ಗಳು ಸಂಚರಿಸಬೇಕಾದರೆ ಎರಡು ವರ್ಷ ಗಳೇ ಬೇಕಾಗಿಬಂದಿತ್ತು. ಪೊಲೀಸ್‌ ಫೋನ್‌ ಇನ್‌ ಕಾರ್ಯ ಕ್ರಮದಲ್ಲಿ ಸಾರ್ವಜನಿಕರಿಂದ ವಿಷಯ ಪ್ರಸ್ತಾವ ಆದ ಬಳಿಕ ಸುಮಾರು 6 ತಿಂಗಳ ಹಿಂದೆ ಈ ಸರ್ವಿಸ್‌ ರಸ್ತೆ ಉಪ ಯೋ ಗಕ್ಕೆ ಸಿಗುವಂತಾಗಿದೆ.

ಪ್ರಸ್ತುತ ಸಂದರ್ಭ ಸಿಟಿ ಬಸ್‌ಗಳು ಮಾತ್ರ ಸರ್ವಿಸ್‌ ರಸೆಯಲ್ಲಿ ಸಂಚರಿಸುತ್ತಿವೆ. ಮಂಗ ಳೂರು – ಕಾಸರಗೋಡು ಬಸ್‌ಗಳು ಹೆದ್ದಾರಿ ಯಲ್ಲಿಯೇ ಓಡಾಡುತ್ತಿದ್ದು, ಬೀರಿ ಜಂಕ್ಷನ್‌ ನಲ್ಲಿ ಹೆದ್ದಾರಿ ಬದಿಯಲ್ಲಿಯೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುವ ಮತ್ತು ಇಳಿಸುವ ಪ್ರಕ್ರಿಯೆ ನಡೆಯುತ್ತಿದೆ.
ಬೀರಿ ಜಂಕ್ಷನ್‌ ಇತ್ತೀಚಿನ ದಿನಗಳಲ್ಲಿ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿದ್ದು, ವಿವಿಧ ವ್ಯಾಪಾರ, ವ್ಯವಹಾರಕ್ಕೆ ಅನುಕೂಲವಾಗುವಂತೆ ಅನೇಕ ಕಟ್ಟಡಗಳು ತಲೆ ಎತ್ತುತ್ತಿವೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಕೋಟೆಕಾರ್‌ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಶಾಖೆ, ಎಸ್‌ಸಿಡಿಸಿಸಿ ಬ್ಯಾಂಕ್‌ ಶಾಖೆ, ಸ್ಟೆಲ್ಲಾ ಮಾರಿಸ್‌ ಕಾನ್ವೆಂಟ್‌ ಮತ್ತು ಶಾಲೆ, ಹಲವು ದೇವಸ್ಥಾನಗಳು, ದೈವ ಸ್ಥಾನ ಗಳು, ಮಸೀದಿಗಳು, ಸಂತ ಅಲೋಶಿ ಯಸ್‌ ಮ್ಯಾನೇಜ್‌ಮೆಂಟ್‌ ಶಿಕ್ಷಣ ಸಂಸ್ಥೆ ಮತ್ತು ಇತರ ಹತ್ತು ಹಲವು ಸಂಘ ಸಂಸ್ಥೆಗಳಿವೆ. ಹೊಟೇಲ್‌ ಮತ್ತು ಇತರ ವ್ಯಾಪಾರ ಮಳಿಗೆಗಳಿವೆ.

Advertisement

ಮದುವೆ ಹಾಲ್‌ ಇದೆ. ದೇರಳಕಟ್ಟೆ, ಕೊಣಾಜೆ, ಮುಡಿಪು ಕಡೆ ಹೋಗುವ ರಸ್ತೆ ಸಂಪರ್ಕವಿದೆ. ಈ ಎಲ್ಲ ಕಾರಣಗಳಿಂದಾಗಿ ಸಹಜವಾಗಿಯೇ ಇಲ್ಲಿ ಜನರ ಓಡಾಟ ಹೆಚ್ಚಿರುತ್ತದೆ. ಈ ಪ್ರದೇಶ ಕೋಟೆಕಾರ್‌ ಪಟ್ಟಣ ಪಂಚಾಯತ್‌ ವ್ಯಾಪ್ತಿಗೆ ಬರುತ್ತಿದ್ದು, ಪಂಚಾಯತ್‌ ವತಿಯಿಂದ ಈಗಾಗಲೇ ಇಲ್ಲಿ ಬಸ್‌ ತಂಗುದಾಣ ನಿರ್ಮಿಸುವಂತೆ ರಾ.ಹೆ. ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಕ್ರಮ ಆಗಿಲ್ಲ. ಇದೀಗ ಪುನಃ ಈ ಬಗ್ಗೆ ಎನ್‌ಎಚ್‌ಎಐ ಗಮನಕ್ಕೆ ತರುವುದಾಗಿ ಪಂ.ನ ಉಪಾಧ್ಯಕ್ಷರಾದ ಭಾರತಿ ರಾಘವ ಅವರು ಉದಯವಾಣಿಗೆ ತಿಳಿಸಿದ್ದಾರೆ.

ಪತ್ರ ಬರೆಯಲಾಗುವುದು
ಇಲ್ಲಿ ಬಸ್‌ ತಂಗುದಾಣದ ಆವಶ್ಯಕತೆ ಬಹಳಷ್ಟು ಇದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗುವುದು.
 - ಪ್ರಭಾಕರ ಎಂ. ಪಾಟೀಲ್‌, ಕಾರ್ಯನಿರ್ವಹಣ ಅಧಿಕಾರಿ, ಕೋಟೆಕಾರ್‌ ಪ.ಪಂ.

-  ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next