ಕೋಟ: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಸಾಸ್ತಾನ ಸಮೀಪ ಕೋಡಿ ಕನ್ಯಾಣ ಸೀತಾನದಿಯ ಕೋಡಿ ಕೆಳಕೇರಿಗೆ ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯ 13.55 ಕೋಟಿ ರೂ. ಅನುದಾನದಲ್ಲಿ ಸೇತುವೆ ಹಾಗೂ ರಸ್ತೆ ನಿರ್ಮಾಣ ನಡೆಯುತ್ತಿದ್ದು, ಡಿ.11ರಂದು ಶಾಸಕರು ಈ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಕುರಿತು ಮಾಹಿತಿ ಪಡೆದರು.
ಈ ಸ್ಥಳದ ಹತ್ತಾರು ಎಕ್ರೆ ಕೃಷಿ ಚಟುವಟಿಕೆಗಾಗಿ ತುಂಬಿ ಹರಿಯುವ ಹೊಳೆ ದಾಟಬೇಕಾಗಿದ್ದು, ಸೇತುವೆಗಾಗಿ ಹೋರಾಟ ತೀವ್ರಗೊಂಡಿತ್ತು. ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಶಾಸಕರು ರಾಜ್ಯ ಯೋಜನಾ ಅನುಷ್ಠಾನ ಘಟಕ ಮತ್ತು ಚಂಡಮಾರುತ ಉಪಶಮನ ಯೋಜನೆಯ ಮೂಲಕ ಸೇತುವೆಗೆ ಹಣ ಮಂಜೂರು ಮಾಡಿದ್ದರು.
ಇದೀಗ ಸೇತುವೆ, ರಸ್ತೆ ನಿರ್ಮಾಣ ವಾಗುತ್ತಿರುವುದರಿಂದ ಇಲ್ಲಿನ ಕೃಷಿ ಚಟು ವಟಿಕೆಗೆ ಸಹಾಯವಾಗಲಿದೆ ಮತ್ತು ಕೋಡಿ ಕನ್ಯಾಣ ಭಾಗದವರು ಸಾಲಿಗ್ರಾಮ ಭಗವತಿ ರಸ್ತೆಯ ಮೂಲಕ ಡಿವೈನ್ ಪಾರ್ಕ್ ಹಾಗೂ ಸಾಲಿಗ್ರಾಮವನ್ನು ಸುಮಾರು 2 ಕಿ.ಮೀ ಹತ್ತಿರದಿಂದ ಸಂಪರ್ಕಿಸಬಹುದಾಗಿದೆ.
ಇದೇ ಸಂದರ್ಭ ಮಣೂರು- ಪಡುಕರೆಯಲ್ಲೂ ಶಾಸಕರ ಶಿಫಾರಸ್ಸಿನ ಮೇರೆಗೆ ಯೋಜನಾ ಅನುಷ್ಠಾನ ಘಟಕ ಮತ್ತು ಚಂಡಮಾರುತ ಉಪಶಮನ ಯೋಜನೆಯ 10,86,73,709 ರೂ. ಅನುದಾನದಲ್ಲಿ ಸೇತುವೆ ಹಾಗೂ ರಸ್ತೆ ಕಾಮಗಾರಿ ನಡೆಯುತ್ತಿದ್ದು ಈ ಕುರಿತು ಮಾಹಿತಿ ಪಡೆದರು.
ಪಡುಕರೆ ಕಾಲೇಜು ಎದುರು ಸಮುದ್ರ ಕಿನಾರೆ ಸಂಪರ್ಕಿಸುವ 400 ಮೀ. ರಸ್ತೆಯ ದುರಸ್ತಿಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.