ಕೋಟ: ಹೋಬಳಿಯ ವಿವಿಧ ಕಡೆಗಳಲ್ಲಿ ಸೋಮವಾರ ಮತ್ತು ಮಂಗಳವಾರ ಸುರಿದ ಭಾರೀ ಮಳೆಗೆ ವ್ಯಾಪಕ ಮಳೆ ಹಾನಿ ಸಂಭವಿಸಿದೆ.
ಕಾವಡಿಯ ಸಂಕಾಡಿ ರತ್ನಾ ರಾಜೀವ ಮರಕಾಲ ಅವರ ಮನೆಗೆ ಬೃಹತ್ ಗಾತ್ರದ ಮರ ಬಿದ್ದು ಸಂಪೂರ್ಣ ಹಾನಿಗೊಳಗಾಗಿದ್ದು, ಅದೃಷ್ಟವಶಾತ್ ಮನೆಯಲ್ಲಿ ವಾಸವಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆಯ ಯಜಮಾನ ರಾಜೀವ ಮರಕಾಲ ಹಾಗೂ ಅವರ ಪುತ್ರಿಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕುಂದಾಪುರ ಸಹಾಯಕ ಕಮಿಷನರ್ ಅವರು ಸ್ಥಳಪರಿಶೀಲನೆ ನಡೆಸಿದ್ದಾರೆ.
ಸಾಲಿಗ್ರಾಮ ಬೆಟ್ಲಕ್ಕಿ ಲಚ್ಚು ಗಾಣಿಗ ಎಂಬವರ ಮನೆ ಗೋಡೆ ಕುಸಿದು ಅಪಾರ ಹಾನಿಯುಂಟಾಗಿದೆ. ಯಡ್ತಾಡಿ ಶಂಕರ ಮರಕಾಲ ಅವರ ಮನೆಯ ಗೋಡೆ ಸಂಪೂರ್ಣ ಕುಸಿದು ಲಕ್ಷಾಂತರ ಹಾನಿ ಸಂಭವಿಸಿದೆ.
ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಬೆಟ್ಲಕ್ಕಿ, ಹೊಳೆಕೆರೆ, ಚಿತ್ರಪಾಡಿ ಭಾಗದಲ್ಲಿ ನೆರೆಯಿಂದಾಗಿ ಸುಮಾರು ನೂರಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ಕೋಟ ಗೋಳಿಯಂಗಡಿ ಜಿಲ್ಲಾ ಮುಖ್ಯ ರಸ್ತೆ ಬೆಳಗ್ಗೆ 9 ಗಂಟೆಯಿಂದ ಸಂಜೆ ತನಕ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಈ ಸಂದರ್ಭ ಕಾವಡಿ ರಸ್ತೆ ಮೂಲಕ ಬಸ್ ಬದಲಿ ಮಾರ್ಗ ವ್ಯವಸ್ಥೆ ಮಾಡಲಾಯಿತು. ಕೋಟ- ಗಿಳಿಯಾರು ರಸ್ತೆ, ಮಣೂರು ಕೊಕೂರು- ಬೇಳೂರು ರಸ್ತೆಯಲ್ಲೂ ನೀರು ಆವರಿಸಿ ರಸ್ತೆ ಸಂಪರ್ಕ ಕಡಿತಗೊಂಡಿತು.
ಕಾರ್ಕಡದಲ್ಲಿ 8 ಮನೆಗಳಿಗೆ ನೀರು ನುಗ್ಗಿದ್ದು ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯ ಕುದ್ರುಮನೆ, ಉಪ್ಲಾಡಿ ತೆಂಕಬೆಟ್ಟು, ಬನ್ನಾಡಿ, ಅಚ್ಲಾಡಿಯ ಬಲ್ಮನೆ ಪ್ರದೇಶ, ಕಾವಡಿ ಗ್ರಾಮದ ಹೊಳೆಬದಿ ಪ್ರದೇಶ ಸಂಪೂರ್ಣ ಮುಳುಗಡೆಯಾಗಿದ್ದು ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ಸಂಕಾದಿ ರತ್ನಾ ರಾಜೀವ ಮರಕಾಲ ಅವರ ಮನೆ ಮೇಲೆ ಮರಬಿದ್ದು ಸಂಪೂರ್ಣ ಮನೆ ಜಖಂ ಆಗಿದೆ.
ಗಿಳಿಯಾರು ಗ್ರಾಮದಲ್ಲೂ ಮನೆಗಳು ಜಲಾವೃತಗೊಂಡಿತು. ಶಿರಿಯಾರ ಗ್ರಾ.ಪಂ. ವ್ಯಾಪ್ತಿಯ ಹಲವು ಪ್ರದೇಶ ಜಲಾವೃತವಾಯಿತು.
ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಸಹಾಯಕ ಕಮಿಷನರ್ ರಶ್ಮಿ, ಜಿ.ಪಂ. ಸಿ.ಇ.ಒ. ಪ್ರಥಿಕ್ ಬಾಯಲ್ ಹಾಗೂ ಸಂಸದ ಕೋಟ ಶ್ರೀನಿವಾಸ ಪೂಜಾರಿ ಜಂಟಿಯಾಗಿ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದರು.