ಮಲ್ಪೆ/ಮಂಗಳೂರು: ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ನೂತನ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮೀನುಗಾರಿಕಾ ಮತ್ತುಬಂದರು ಖಾತೆ ಹಂಚಿಕೆಯಾಗಿರು ವುದಕ್ಕೆ ಮೀನುಗಾರರ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.
ಮೀನುಗಾರರ ಬಗ್ಗೆ ಕಾಳಜಿ ಇರುವ ವ್ಯಕ್ತಿಗೆ ಆ ಹುದ್ದೆ ದೊರಕಿರುವುದು ಸಂತಸ ತಂದಿದೆ. ಅವರು ಮೀನುಗಾರರ ಆಶಾಕಿರಣವಾಗಿ ಮೂಡಿಬರುವರೆಂಬ ವಿಶ್ವಾಸ ಸಮಸ್ತ ಮೀನುಗಾರರದ್ದು ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ
ಕೃಷ್ಣ ಸುವರ್ಣ ಹೇಳಿದ್ದಾರೆ.
ಮೀನುಗಾರಿಕೆ, ಬಂದರು ಎರಡೂ ಕ್ಷೇತ್ರಗಳು ಒಂದಕ್ಕೊಂದು ಪೂರಕ.ಈ ಹಿಂದೆ ಹಲವಾರು ಬಾರಿ ಇದನ್ನು ಪ್ರತ್ಯೇಕಿಸಿ ಬೇರೆ ಬೇರೆ ಸಚಿವರಿಗೆ ನೀಡಲಾಗಿತ್ತು. ಇದು ಮೀನುಗಾರಿಕೆ ದಕ್ಕೆಗಳ ಮೂಲ ಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಸಂಬಂಧಪಟ್ಟ ಹಲವು ವಿಚಾರಗಳಲ್ಲಿ ಸಮಸ್ಯೆ ಸೃಷ್ಟಿಸುತ್ತಿ ದ್ದವು. ಅದುದರಿಂದ ಎರಡೂ ಖಾತೆಗಳನ್ನು ಒಬ್ಬರಿಗೇ ವಹಿಸಬೇಕು ಎಂದು ಒತ್ತಾಯಿಸಿದ್ದೆವು. ಅದೀಗ ಕಾರ್ಯ ಗತವಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ದೊರೆಯಲಿದೆ ಎಂದು ಮಂಗಳೂರು ಟ್ರಾಲ್‌ಬೋಟು ಮೀನುಗಾರರ ಸಂಘದ ಅಧ್ಯಕ್ಷ ನಿತಿನ್ ಕುಮಾರ್ ತಿಳಿಸಿದ್ದಾರೆ.