ಕುಂದಾಪುರ: ಕೇಂದ್ರದಿಂದ ಬರುವ ಅನುದಾನವನ್ನು ನನ್ನ ತೆರಿಗೆ ನನ್ನ ಹಕ್ಕು ಎಂದು ಹೇಳುವ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಬರ ಪರಿಹಾರಕ್ಕೆ ಕೇಂದ್ರದಿಂದ ಬಂದುದನ್ನು ಮಾತ್ರ ಹಂಚಲು ತಿಳಿದಿದೆ.
ರಾಜ್ಯದ ಪಾಲಿನ ಬರ ಪರಿಹಾರ ನೀಡಬೇಕಾದ್ದು ತನ್ನ ಕರ್ತವ್ಯ ಎಂದು ಅನಿಸುವುದೇ ಇಲ್ಲ. ಏಕೆಂದರೆ ಇಲ್ಲಿ ಗ್ಯಾರಂಟಿಗಳಿಂದಾಗಿ ನೀಡಲು ಹಣವೇ ಇಲ್ಲ. ರಾಜ್ಯ ಸರಕಾರ ದಿವಾಳಿ ಆಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸೋಮವಾರ ಇಲ್ಲಿ ಮಾಧ್ಯಮದ ಜತೆ ಅವರು ಮಾತನಾಡಿ, ಅನೇಕ ಜಿಲ್ಲೆಗಳಲ್ಲಿ ಜನ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಜಾನುವಾರುಗಳಿಗೆ ಮೇವು ಇಲ್ಲ. ಕೇಂದ್ರ ಸರಕಾರ 3,452 ಕೋ.ರೂ. ನೀಡಿದ್ದು ಇದನ್ನು ಹಂಚುವ ಕಾಯಕದಲ್ಲೇ ರಾಜ್ಯ ಸರಕಾರ ನಿರತವಾಗಿದೆ. ವಿನಾ ತನ್ನ ಪಾಲಿನ ಪರಿಹಾರದ ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ರಾಜ್ಯ ಸರಕಾರ 10 ಸಾವಿರ ಕೋ.ರೂ. ಬರಪರಿಹಾರ ಬಿಡುಗಡೆ ಮಾಡಬೇಕು ಎಂದರು.
ಪರಿಷತ್ ಚುನಾವಣೆಯಲ್ಲಿ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಮಂಗಳೂರು ಸೇರಿದಂತೆ ಅನೇಕ ಕಡೆಯವರು ಆಕಾಂಕ್ಷಿಗಳಾಗಿದ್ದರು. ಮಾಜಿ ಶಾಸಕ ರಘುಪತಿ ಭಟ್ ಅವರು ಬಿಜೆಪಿಯ ಸಂಘಟಕ, ಮುಖಂಡ. ಪಕ್ಷದ ಕೇಂದ್ರ, ರಾಜ್ಯ ನಾಯಕರು ಅವರ ಬಳಿ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸುವ ವಿಶ್ವಾಸವಿದೆ. ಮೈತ್ರಿ ತೀರ್ಮಾನದಂತೆ ಟಿಕೆಟ್ ಹಂಚಿಕೆಯಾಗಿದ್ದು ಕರಾವಳಿಯ 2 ಕ್ಷೇತ್ರದಲ್ಲಿ ನಿಚ್ಚಳವಾಗಿ ಗೆಲ್ಲುತ್ತೇವೆ. 6 ಸ್ಥಾನ ಗೆಲ್ಲಲು ಅವಕಾಶ ಇದೆ ಎಂದರು.
ಪಕ್ಷದ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎಸ್., ಮಾಜಿ ಅಧ್ಯಕ್ಷ ಶಂಕರ ಅಂಕದಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.