Advertisement
ಸಮಾಜ ಕಲ್ಯಾಣ ಇಲಾಖೆಯ ಮಹತ್ತರ ಜವಾಬ್ದಾರಿ ಬಗ್ಗೆ ಏನನಿಸುತ್ತಿದೆ?
Related Articles
Advertisement
ಸಮಾಜ ಕಲ್ಯಾಣ ಇಲಾಖೆಯಲ್ಲಿ ನಿಮ್ಮ ಆದ್ಯತೆಗಳೇನು?
ಪರಿಶಿಷ್ಟ ಜಾತಿಯವರಲ್ಲಿ 5-6 ಲಕ್ಷ ಮಂದಿಗೆ ಇಂದಿಗೂ ಮನೆ, ಶೌಚಾಲಯ, ಹಕ್ಕುಪತ್ರವಿಲ್ಲ. ಹೀಗಾಗಿ ಇವುಗಳನ್ನು ಕಲ್ಪಿಸುವುದು ಮೊದಲ ಆದ್ಯತೆ. ಪಕ್ಷ ಹಾಗೂ ಸಂಘಟನೆ ಹೇಳಿಕೊಟ್ಟ “ನಾವೆಲ್ಲ ಹಿಂದೂ-ನಾವೆಲ್ಲ ಒಂದು’ ಎಂಬ ಪರಿಕಲ್ಪನೆ ಜಾರಿಗೊಳಿಸುವೆ. ಡಾ| ಬಿ.ಆರ್. ಅಂಬೇಡ್ಕರ್ ಮತ್ತು ಡಾ| ವಿ.ಎಸ್. ಆಚಾರ್ಯ ಅವರು ಹಿಂದುಳಿದವರ ಅಭಿವೃದ್ಧಿಗೆ ಹೊಂದಿದ್ದ ಯೋಜನೆಗಳನ್ನು, ಪ್ರಧಾನಿ ಮೋದಿ ಅವರ ಆಶಯವನ್ನು ಅನುಷ್ಠಾನಗೊಳಿಸಲು ಶ್ರಮಿಸುತ್ತೇನೆ.
ವಿಶೇಷ ಯೋಜನೆಯ ಬಗ್ಗೆ ಕನಸುಗಳಿದೆಯೇ?
ಪರಿಶಿಷ್ಟ ಜಾತಿಯ ಮನೆ ನಿರ್ಮಾಣದ ಅನುದಾನವನ್ನು 5ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ಪ. ಪಂಗಡ, ಹಿಂದುಳಿದ ವರ್ಗಗಳ ಮನೆ ನಿರ್ಮಾಣಕ್ಕೂ ಅನುದಾನ ಹೆಚ್ಚಿಸುವ ಆಲೋಚನೆಯಿದೆ. ಆರ್ಥಿಕ ಮೂಲ ಗಳನ್ನು ಪರಿಶೀಲಿಸಿ ಸರಕಾರಕ್ಕೆ ಈ ಬಗ್ಗೆ ಸಲಹೆ ನೀಡಲಾಗುವುದು. ಸರಕಾರಿ ಜಾಗದಲ್ಲಿ ವಾಸಿಸಿರುವ ಎಸ್ ಸಿ ಕುಟುಂಬಗಳಿಗೆ ಯಾವುದೇ ಸಮಸ್ಯೆಗಳಿದ್ದರೂ ಪರಿಹರಿಸಿ ಹಕ್ಕುಪತ್ರ ನೀಡಲು ಪ್ರಯತ್ನಿಸಲಾಗುವುದು ಹಾಗೂ ಖಾಸಗಿ ಜಾಗದಲ್ಲಿ ವಾಸವಿದ್ದರೆ ಜಿಲ್ಲಾಧಿಕಾರಿಗಳ ಮೂಲಕ ಅದನ್ನು ವಶಪಡಿಸಿಕೊಂಡು ಪರಿಹಾರ ನೀಡಿ ಹಕ್ಕುಪತ್ರ ಕೊಡಿಸಲಾಗುವುದು.
ಆಡಳಿತ ಯಂತ್ರಕ್ಕೆ ಚುರುಕು ನೀಡಲು ಯಾವ ರೀತಿ ಕ್ರಮ ಕೈಗೊಳ್ಳುತ್ತೀರಿ?
ಈ ಹಿಂದೆ ಸಚಿವನಾಗಿದ್ದಾಗ ರಾಜ್ಯದ ಪ್ರತಿ ಜಿಲ್ಲೆಗೆ ಸಂಚರಿಸಿ ಸಮಸ್ಯೆಗಳನ್ನು ಕಣ್ಣಾರೆ ಪರಿಶೀಲಿಸಿ ಪರಿಹಾರ ಒದಗಿಸಿರುವೆ. ಅದೇ ರೀತಿ ಮುಂದೆಯೂ ಪ್ರತೀ ಜಿಲ್ಲೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ, ಕೆಲಸ ಮಾಡದಿರುವ ಅಧಿಕಾರಿಗಳ ಮೇಲೆ ಕ್ರಮಕೈಗೊಂಡು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುತ್ತೇನೆ.
ಈ ಅವಧಿಯಲ್ಲಿ ಎಲ್ಲ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವೇ?
ಇಲಾಖೆಯಲ್ಲಿನ ದುಂದುವೆಚ್ಚ ಹಾಗೂ ಅನಗತ್ಯ ಯೋಜನೆಗಳನ್ನು ಕೈಬಿಟ್ಟು ಅಗತ್ಯ ಕೆಲಸಗಳಿಗೆ ಮಾತ್ರ ಆದ್ಯತೆ ನೀಡಲಾಗುವುದು. ಕೇಂದ್ರ ಸಮಾಜ ಕಲ್ಯಾಣ ಸಚಿವ ನಾರಾಯಣ ಸ್ವಾಮಿ ಅವರನ್ನೂ ಹೆಚ್ಚಿನ ಅನುದಾನಕ್ಕಾಗಿ ಕೋರಿರುವೆ. ಅವಧಿ ಪೂರ್ಣವಾಗುವುದರೊಳಗೆ ಎಲ್ಲ ಯೋಜನೆ ಪೂರ್ಣಗೊಳಿಸಲು ಪ್ರಯತ್ನಿಸುವೆ.
ಅಭಿವೃದ್ಧಿ ಯೋಜನೆಗಳಿಗೆ ಮೊದಲ ಆದ್ಯತೆ :
ಭ್ರಷ್ಟಾಚಾರ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗದು. ಹೀಗಾಗಿ ಅಧಿಕಾರಿಗಳ ಸಭೆ ಕರೆದು “ಸರಕಾರ ನೀಡಿದ ಸವಲತ್ತು ಹೊರತುಪಡಿಸಿ ಇಲಾಖೆಯಿಂದ ಒಂದೇ ಒಂದು ಕಪ್ ಟೀ ಕೂಡ ನಾನು ಆಪೇಕ್ಷೆ ಪಡುವುದಿಲ್ಲ; ಆದರೆ ಇಲಾಖೆಯ ಬಗ್ಗೆ ಎಲ್ಲಿಯಾದರೂ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ’ ಎಂದು ತಿಳಿಸಿದ್ದೇನೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಹೊಣೆ ನನ್ನ ಮೇಲಿದೆ. ಇಲಾಖೆಯಲ್ಲಿನ ಭ್ರಷ್ಟಾಚಾರ ವ್ಯವಸ್ಥೆ ಕೊನೆಗಾಣಿಸಿ ಅಭಿವೃದ್ಧಿಪರ ಯೋಜನೆಗಳನ್ನು ರೂಪಿಸುವುದು ನನ್ನ ಗುರಿ.
ವಿದ್ಯಾರ್ಥಿ ವೇತನ ಸಕಾಲದಲ್ಲಿ ನೀಡಲು ಕ್ರಮ :
ಶಿಕ್ಷಣದಿಂದ ಮಾತ್ರ ವ್ಯಕ್ತಿಯ ಬದುಕು ಬದಲಾಗಲು ಸಾಧ್ಯವಿದ್ದು, ಹಿಂದುಳಿದವರನ್ನು ಮುಖ್ಯ ವಾಹಿನಿಗೆ ತರಲು ಶಿಕ್ಷಣ ಅತ್ಯಗತ್ಯ. ಆದರೆ ಹಿಂದುಳಿದ ವರ್ಗ ಹಾಗೂ ಎಸ್.ಸಿ. ಸಮಾಜದ ಅನೇಕ ಮಕ್ಕಳು ಇಂದಿಗೂ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ಅನುದಾನ ನೀಡುವುದು ಹಾಗೂ ವಿದ್ಯಾರ್ಥಿ ವೇತನವನ್ನು ಹೆಚ್ಚಿನ ಮೊತ್ತದೊಂದಿಗೆ ಸಕಾಲಕ್ಕೆ ಸಿಗುವಂತೆ ಮಾಡಲಾಗುವುದು. ಈ ಮೂಲಕ ಕೂಲಿಕಾರರ ಮಕ್ಕಳು ಕೂಲಿಕಾರರಾಗದೆ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಬೇಕು. ಪೌರ ಕಾರ್ಮಿಕರ ಮಕ್ಕಳು ಪೌರ ಕಾರ್ಮಿಕರಾಗದೆ ಎಂಜಿನಿಯರ್, ವೈದ್ಯರಾಗುವಂತೆ ಮಾಡಬೇಕೆಂಬ ಚಿಂತನೆ ನನ್ನದಾಗಿದೆ.