ಕುಂದಾಪುರ: ಚುನಾವಣೆ ಗುಂಗಿನಿಂದ ಹೊರಬಾರದೇ ಮುಖ್ಯ ಮಂತ್ರಿಗಳು ರೆಸಾರ್ಟ್ ವಾಸ್ತವ್ಯ ಮಾಡುತ್ತಿದ್ದು ರಾಜ್ಯದ 126ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದರೂ ನಿರ್ವಹಣೆ ಮಾಡುವಲ್ಲಿ ಸರಕಾರ ಪೂರ್ಣ ವಿಫಲವಾಗಿದೆ. ರಾಜ್ಯದ ಬರ ಸ್ಥಿತಿ ಕುರಿತು ಎಲ್ಲ ಬಿಜೆಪಿ ಶಾಸಕ ರಿಂದ ರಾಜ್ಯಾಧ್ಯಕ್ಷ ಬಿ.ಎಸ್. ಯುಡಿಯೂರಪ್ಪ ಅವರು ವರದಿ ಕೇಳಿದ್ದು ಬರದ ತೀವ್ರತೆಯನ್ನು ಸರಕಾರಕ್ಕೆ ಮಂಡಿಸಲಾಗುವುದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು. ಅವರು ಇಲ್ಲಿನ ಬಿಜೆಪಿ ಕಚೇರಿಗೆ ಗುರುವಾರ ಭೇಟಿ ನೀಡಿದ ಸಂದರ್ಭ ಮಾಧ್ಯಮದ ಜತೆ ಮಾತನಾಡಿದರು.
ಗೋಳು ಕೇಳುವವರಿಲ್ಲ
ಇಡೀ ಸರಕಾರ ಹಣಬಲದ ಮೇಲೆ ಚುನಾವಣೆ ಎದುರಿಸಿದೆ. ರಾಜ್ಯದಲ್ಲಿರುವ ಬಡವರ ಗೋಳು ಕೇಳುವವರಿಲ್ಲ ಎಂದಾಗಿದೆ. ಚಿತ್ರದುರ್ಗ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಜಾನುವಾರುಗಳು ಸಾಮೂಹಿಕವಾಗಿ ಸಾಯುತ್ತಿವೆ. ಜನ ಗುಳೆ ಹೋಗುವ ಸ್ಥಿತಿಯಲ್ಲಿದ್ದಾರೆ. ಮೇವು ಬ್ಯಾಂಕ್‌ಗಳನ್ನಾಗಲೀ, ಗೋ ಶಾಲೆಗಳನ್ನಾಗಲೀ ತೆರೆಯಬೇಕೆಂಬ ಉದ್ದೇಶ ಯಾವುದೇ ಜಿಲ್ಲಾಡಳಿತಕ್ಕೆ ಇದ್ದಂತಿಲ್ಲ. ಮುಖ್ಯ ಮಂತ್ರಿಗಳು ಹೋಮ, ಹವನ, ಪಂಚಕರ್ಮ ಚಿಕಿತ್ಸೆ ಯಲ್ಲಿಯೇ ತಲ್ಲೀನ ರಾಗಿ ಕಾಲ ಕಳೆಯುತ್ತಿದ್ದು ಪ್ರಭಾವಿ ಸಚಿವ ಎಚ್.ಡಿ. ರೇವಣ್ಣ ಅವರು ಬೊಗಸೆ ತುಂಬಾ ನಿಂಬೆ ಹಣ್ಣು ಹಿಡಿದು ಮೆರವಣಿಗೆ ಮಾಡುತ್ತಿದ್ದಾರೆ.
ಕಂದಾಯ ಸಚಿವರು ಬರ ಎದುರಿಸುವ ಸ್ಥಿತಿಯಲ್ಲಿ ಇಲ್ಲ. ಇಡೀ ಆಡಳಿತ ಯಂತ್ರ ಕುಸಿದಿದೆ. ಯಾವ ಅಧಿಕಾರಿಯೂ ಮುಖ್ಯಮಂತ್ರಿ ಹಾಗೂ ಸಚಿವರ ಮಾತು ಕೇಳುತ್ತಿಲ್ಲ. ಆಯ ಕಟ್ಟಿನ ಜಾಗದಲ್ಲಿ ಕುಳಿತ ಉನ್ನತ ಅಧಿಕಾರಿಗಳು ಮಂತ್ರಿಗಳನ್ನು ತೃಪ್ತಿಪಡಿಸುವ ಭರದಲ್ಲಿದ್ದಾರೆ ಎಂದರು.
ಆಡಳಿತ ಪಕ್ಷದ ಪಾಲಿಗೆ ಗುತ್ತಿಗೆದಾರರೇ ಎಟಿಎಂಗಳಾಗಿದ್ದು ಕುಡಿಯುವ ನೀರಿಲ್ಲದೇ ಜನ ರೋಸಿ ಹೋಗು ತ್ತಿದ್ದು ಸರಕಾರ ಬರದ ಸವಾಲು ಸ್ವೀಕರಿಸುವ ಸ್ಥಿತಿಯಲ್ಲಿ ಇಲ್ಲ. ಇಡೀ ರಾಜ್ಯವೇ ಬರಗಾಲಕ್ಕೆ ತುತ್ತಾಗಿ ಹಾಹಾಕಾರ ಎಬ್ಬಿಸಿದ ಮೇಲೆ ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ನಡೆಸಲು ಮುಂದಾಗುತ್ತಾರೆ. ದಿಕ್ಕೆಟ್ಟ ಆಡಳಿತದಲ್ಲಿ ಉಂಡವನೇ ಜಾಣ ಎಂಬ ಸ್ಥಿತಿಗೆ ರಾಜ್ಯದ ಆಡಳಿತ ತಲುಪಿದೆ. ವಿಫಲವಾದ ಸರಕಾರವೊಂದು ಇನ್ನೂ ಗೌರವ ಉಳಿಸಿಕೊಳ್ಳ
ಬೇಕಾದರೆ ಸಮರೋಪಾದಿಯಲ್ಲಿ ಬರ ಎದುರಿಸ ಬೇಕು. ಇಲ್ಲವಾದರೆ ಕುರ್ಚಿ ಬಿಟ್ಟು ಕೆಳಗಿಳಿಯಬೇಕು ಎಂದು ಹೇಳಿದ್ದಾರೆ.
ವಾರಾಹಿ ಹಣ ಮಾಡುವ ಯೋಜನೆ
ವಾರಾಹಿ ಯೋಜನೆ ಗುತ್ತಿಗೆದಾರರ ಸಂತೃಪ್ತಿಗೆ ಸೀಮಿತ ವಾಗಿದೆ. ಇಡೀ ಉಡುಪಿ ಜಿಲ್ಲೆಗೆ ನೀರು ಕೊಡಬಹುದಾದ ಯೋಜನೆಯೊಂದು ಕೇವಲ ಹಣ ಮಾಡುವ ಯೋಜನೆಯಾಗಿದೆ. ಟೆಂಡರ್‌ಗಿಂತ ಹೆಚ್ಚು ಹಣವನ್ನು ಸಂಪುಟ ಸಭೆ ಮೂಲಕ ಅನುಮೋದನೆ ಮಾಡುವ ಸರಕಾರ ಕಾಮಗಾರಿ ಅನುಷ್ಠಾನಕ್ಕೆ ಒತ್ತು ನೀಡಿಲ್ಲ. ಕೊಟ್ಟ ಹಣ ಸದುದ್ದೇಶಕ್ಕೆ ಬಳಕೆಯಾಗಿಲ್ಲ ಎಂದು ಹೇಳಿದರು.