ಬೆಂಗಳೂರು: ಕರಾವಳಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಐತಿಹಾಸಿಕ ಕಂಬಳವನ್ನು ರಾಜ್ಯಮಟ್ಟದ ಕರಾವಳಿಯ ನಾಡ ಕ್ರೀಡೆಯಾಗಿ ಘೋಷಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್‌ನಲ್ಲಿ ತಿಳಿಸಿದರು.
ಮಂಗಳವಾರ ನಿಯಮ 330ರ ಅಡಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಮಂಜುನಾಥ್ ಭಂಡಾರಿ, ಕಂಬಳವು ಕರಾವಳಿ ಭಾಗದ ಪ್ರಸಿದ್ಧ ಕ್ರೀಡೆಯಾಗಿದೆ. ದೈವಾರಾಧನೆಯೊಂದಿಗೆ ಆರಾಧಿಸುತ್ತ ಬಂದಿರುವ ಜನರೊಂದಿಗೆ ಬೆರೆತಿರುವ ಕ್ರೀಡೆ ಇದಾಗಿದೆ. ಆ ಭಾಗದ ಜನ ಅತ್ಯಂತ ಶ್ರದ್ಧೆ-ಭಕ್ತಿಯಿಂದ ದೇವರ ಸೇವೆಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ, ಇದಕ್ಕೆ ಸೂಕ್ತ ಸೌಲಭ್ಯಗಳಿಲ್ಲದೆ ಕಣ್ಮರೆಯಾಗುವ ಎಂಬ ಆತಂಕ ಇದೆ. ಆದ್ದರಿಂದ ನಾಡ ಕ್ರೀಡೆಯಾಗಿ ಘೋಷಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಭಾ ನಾಯಕರು, ಈಗಾಗಲೇ ಕಂಬಳವನ್ನು ಪ್ರೋತ್ಸಾಹಿಸಲು ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿ ಪ್ರದಾನ, ಕ್ರೀಡಾ ಪೋಷಕ’, ಕಂಬಳ ಕ್ರೀಡಾಂಗಣ ನಿರ್ಮಾಣ ಸೇರಿದಂತೆ ಹತ್ತುಹಲವು ಉತ್ತೇಜಕ ಕ್ರಮಗಳನ್ನು ಸರಕಾರ ಕೈಗೊಂಡಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಕಂಬಳವನ್ನು ರಾಜ್ಯಮಟ್ಟದ ನಾಡ ಕ್ರೀಡೆಯಾಗಿ ಘೋಷಿಸುವ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.
ಈ ಮಧ್ಯೆ ಕಂಬಳ ಸಂಸ್ಥೆ ರಚಿಸುವ ಸಂಬಂಧ ತಜ್ಞರ ಸಭೆ ನಡೆಸಿ, ಅನುಮೋದನೆ ಪಡೆಯಲಾಗಿದೆ. ಉದ್ದೇಶಿತ ಈ ಸಂಸ್ಥೆಯನ್ನು ಕರ್ನಾಟಕ ಸಂಘ-ಸಂಸ್ಥೆಗಳ ನೋಂದಣಿ ನಿಯಮ 1960ರ ಅಡಿ ನೋಂದಾಯಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಚಿವರೂ ಆದ ಕೋಟಾ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.