Advertisement

ಕರಾವಳಿಯಲ್ಲಿ ಸೇನಾಪೂರ್ವ ತರಬೇತಿ ಕೇಂದ್ರ: ಸಚಿವ ಕೋಟ ಶ್ರೀನಿವಾಸ ಪೂಜಾರಿ

02:33 AM Jun 08, 2022 | Team Udayavani |

ಉಡುಪಿ: ಯುವಕರಿಗೆ ಸೇನಾಪೂರ್ವ ತರಬೇತಿ ನೀಡಲು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ತರಬೇತಿ ಕೇಂದ್ರವನ್ನು ಆರಂಭಿಸಲಿದ್ದೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಉಡುಪಿಯಲ್ಲಿ ಕೋಟಿ ಚೆನ್ನಯ, ದಕ್ಷಿಣ ಕನ್ನಡ ದಲ್ಲಿ ರಾಣಿ ಅಬ್ಬಕ್ಕ ಮತ್ತು ಉತ್ತರ ಕನ್ನಡ ದಲ್ಲಿ ಹೆಂಜ ನಾಯ್ಕ ಅವರ ಹೆಸರಿನಲ್ಲಿ ಈ ಕೇಂದ್ರ ವನ್ನು ನಿರ್ಮಿಸಲಿದ್ದೇವೆ. ಪ್ರತೀ ಬ್ಯಾಚ್‌ನಲ್ಲಿ ಸುಮಾರು 100 ಅಭ್ಯರ್ಥಿಗಳಿಗೆ ತರಬೇತಿಯನ್ನು ನುರಿತ ತಂಡದ ಮೂಲಕ ನೀಡಲಾಗುವುದು. ತರಬೇತಿ 6 ತಿಂಗಳು ಇರಲಿದೆ. ಈ ಸಂಬಂಧ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಿದ್ದೇವೆ. ಸೇನಾ ಪೂರ್ವ ತರಬೇತಿಗೆ ಸೇರಲು ಯಾರು ಅರ್ಹರು ಎಂಬುದನ್ನು ಶೀಘ್ರ ತಿಳಿಸಲಾಗುವುದು. ಎಲ್ಲ ವರ್ಗದವರಿಗೂ ಅವಕಾಶ ನೀಡಲಿದ್ದೇವೆ ಎಂದು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಸಚಿವರು ಹೇಳಿದರು.

ಹೇಡಿಗಳ ಕೃತ್ಯ
ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್‌ 370 ತೆಗೆದ ಅನಂತರವೂ ಹಿಂಸಾತ್ಮಕ ಕೃತ್ಯಗಳು ನಡೆಯುತ್ತಿವೆ. ಇದು ಸರಕಾರಿ ವ್ಯವಸ್ಥೆಯ ಲೋಪ ಅಥವಾ ವೈಪಲ್ಯವಲ್ಲ. ಅಸಹಾಯಕರಾಗಿರುವ ಭಯೋತ್ಪಾದಕರು ಇಂಥ ಹೇಯ ಕೃತ್ಯ ಮಾಡುತ್ತಿದ್ದಾರೆ. ಹೇಡಿಗಳನ್ನು ಮಟ್ಟಹಾಕುವ ಕಾರ್ಯವನ್ನು ಇನ್ನಷ್ಟು ಚುರುಕಾಗಿ ಕೇಂದ್ರ ಸರಕಾರ ಮಾಡಲಿದೆ ಎಂದು ಹೇಳಿದರು.

ಸಾಮರಸ್ಯ ಯೋಜನೆ
ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮರಸ್ಯ ಬೆಳೆಸುವ ನಿಟ್ಟಿನಲ್ಲಿ ವಿನಯ್‌ ಸಾಮರಸ್ಯ ಯೋಜನೆಯನ್ನು ಈ ತಿಂಗಳ ಅಂತ್ಯ ಅಥವಾ ಮುಂದಿನ ತಿಂಗಳ ಮೊದಲ ವಾರದಿಂದ ಶುರು ಮಾಡಲಿದ್ದೇವೆ. ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಧರ್ಮಸ್ಥಳದ ಧರ್ಮಾಧಿ ಕಾರಿ ಡಾ| ಡಿ.ವಿರೇಂದ್ರ ಹೆಗ್ಗಡೆ ಸಹಿತವಾಗಿ ಧಾರ್ಮಿಕ ಮುಖಂಡರನ್ನು ಸೇರಿಸಿಕೊಂಡು ಅಸ್ಪೃಶ್ಯತೆ ನಿವಾರಿಸಲು ದೊಡ್ಡ ಅಭಿಯಾನ ನಡೆಸಲಾಗುವುದು. ಹಾಗೆಯೇ ಗ್ರಾ.ಪಂ. ಮತ್ತು ಸ್ಥಳೀಯಾಡಳಿತಗಳಲ್ಲಿ ಸಾಮಾಜಿಕ ನ್ಯಾಯ ಸಮಿತಿ ಮೂಲಕ ಈ ಅಭಿಯಾನ ನಡೆಸಿ, ಅಸ್ಪೃಶ್ಯತೆ ಮುಕ್ತ ಗ್ರಾಮ, ನಗರಾಡಳಿತಗಳಿಗೆ ಇಲಾಖೆ ಯಿಂದ ಪ್ರೋತ್ಸಾಹ ನೀಡಲಾಗುವುದು ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಪ್ರಮುಖರಾದ ನಯನಾ ಗಣೇಶ್‌, ಸದಾನಂದ ಉಪ್ಪಿನಕುದ್ರು, ಗುರುಪ್ರಸಾದ್‌ ಶೆಟ್ಟಿ ಕಟಪಾಡಿ, ದಿನಕರ ಬಾಬು, ಶಿಲ್ಪಾ ಜಿ. ಸುವರ್ಣ, ಉಮೇಶ್‌ ನಾಯ್ಕ, ಶಿವಕುಮಾರ್‌ ಅಂಬಲಪಾಡಿ, ಪ್ರತಾಪ್‌ ಶೆಟ್ಟಿ ಚೇರ್ಕಾಡಿ, ಶ್ರೀನಿಧಿ ಹೆಗ್ಡೆ, ಸತ್ಯಾನಂದ ನಾಯಕ್‌, ವೀಣಾ ಎಸ್‌. ಶೆಟ್ಟಿ, ವಿಖ್ಯಾತ್‌ ಶೆಟ್ಟಿ, ನಿತ್ಯಾನಂದ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.

Advertisement

ರಾಜ್ಯಕ್ಕೆ 1.29 ಲ.ಕೋ. ಅನುದಾನ
ಕಳೆದ 8 ವರ್ಷದಲ್ಲಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ 1,29,776 ಕೋಟಿ ರೂ. ಅನುದಾನ ಬಂದಿದೆ. 18 ಸಾವಿರಕ್ಕೂ ಅಧಿಕ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ರೈತರ ಕಲ್ಯಾಣಕ್ಕೆ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಹೆದ್ದಾರಿ ಸಹಿತವಾಗಿ ಎಲ್ಲ ರಂಗದಲ್ಲೂ ಅಭಿವೃದ್ಧಿ ಸಾಧಿಸಿದ್ದೇವೆ. ಆಯುಷ್ಮಾನ್‌ ಭಾರತ ಯೋಜನೆಯಿಂದ ಲಕ್ಷಾಂತರ ಕುಟುಂಬಕ್ಕೆ ಅನುಕೂಲವಾಗಿದೆ. ಕಾರ್ಮಿಕ ವರ್ಗಕ್ಕೆ ವಿಶೇಷ ಯೋಜನೆ ನೀಡಲಾಗಿದೆ. 6.2 ಕೋಟಿ ಹೊಸ ಮನೆಗೆ ಶುದ್ಧ ಕುಡಿಯುವ ನೀರು ನೀಡುವ ಯೋಜನೆ ಜಾರಿಯಲ್ಲಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗದ ಬಡವರಿಗೆ ಉಚಿತ ವಿದ್ಯುತ್‌ ನೀಡಲಾಗುತ್ತಿದೆ. ದೀನದಯಾಳ್‌ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡುವ ಕಾರ್ಯವೂ ಆಗುತ್ತಿದೆ. ಕೇಂದ್ರ ಸರಕಾರದ 8 ವರ್ಷದ ಸಾಧನೆಯನ್ನು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next