Advertisement

ಸರಕಾರದ ಹಣ ದುರುಪಯೋಗವಾಗದಂತೆ ನೋಡಿಕೊಳ್ಳಿ : ಅಧಿಕಾರಿಗಳಿಗೆ ಸಚಿವ ಕೋಟ ಸೂಚನೆ

06:37 PM Jul 16, 2022 | Team Udayavani |

ಭಟ್ಕಳ: ಸರಕಾರದಿಂದ ನೆರೆಪರಿಹಾರ ನೀಡುವುದಕ್ಕೆ ಯಾವುದೇ ಕೊರತೆ ಇಲ್ಲ, ಬಡವರ ಮನೆಗೆ ಹಾನಿಯಾದರೆ ಪರಿಶೀಲಿಸಿ ತಕ್ಷಣ ಪರಿಹಾರ ವದಗಿಸಿ ಆದರೆ ಯಾವುದೇ ರೀತಿಯಿಂದ ಸರಕಾರದ ಹಣ ದುರುಪಯೋಗವಾಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಅವರು ಇಲ್ಲಿನ ತಾಲೂಕಾ ಆಡಳಿತ ಸೌಧದಲ್ಲಿ ಹೊನ್ನಾವರ, ಭಟ್ಕಳ ನೋಡಲ್ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ನೆರೆಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.

ಕೆಲವೊಮ್ಮೆ ಅಧಿಕಾರಿಗಳು ಬಹಳ ನಿರ್ಲಕ್ಷ ಮಾಡುತ್ತಾರೆ, ಸ್ಥಳಕ್ಕೆ ಹೋಗದೇ ಕುಳಿತಲ್ಲಿಂದಲೇ ಸಮೀಕ್ಷೆ ಮಾಡುತ್ತಾರೆ ಇದರಿಂದ ಬಡ ಜನತೆಗೆ ತೀವ್ರ ಅನ್ಯಾಯವಾಗುತ್ತದೆ. ಬಡಜನರಿಗೆ ಇರುವ ಸೂರು ಹಾಳಾದರೆ ಬೇರೆ ದಾರಿಯೇ ಇರುವುದಿಲ್ಲ. ಮುಖ್ಯ ಮಂತ್ರಿಗಳು ಪರಿಹಾರದ ಮೊತ್ತದಲ್ಲಿ ಬದಲಾವಣೆ ಮಾಡಿದ್ದು ಮನೆಗೆ ನೀರು ನುಗ್ಗಿದರೆ 10 ಸಾವಿರ, ಗೋಡೆ ಬಿದ್ದು ಭಾಗಶ: ಹಾನಿಯಾದರೆ 50 ಸಾವಿರ, ಮತ್ತೂ ಹೆಚ್ಚು ಹಾನಿಯಾದರೆ 95 ಸಾವಿರ ರೂಪಾಯಿ ನೀಡುವುದಕ್ಕೆ ಆದೇಶ ಮಾಡಿದ್ದು ಹಾನಿ ಸಂಭವಿಸಿ 24 ಗಂಟೆಯೊಳಗೆ ಪರಿಹಾರ ವಿತರಿಸುವಂತೆ ತಿಳಿಸಿದರು.

ಯರ‍್ಯಾರು ಅರಣ್ಯ ಅತಿಕ್ರಮಣದಲ್ಲಿ ಮನೆ ಮಾಡಿಕೊಂಡಿದ್ದಾರೆ, ಜೋಪಡಿ, ಗುಡಿಸಲು ಹಾಕಿಕೊಂಡಿದ್ದಾರೆ ಅವರ ಮನೆಗಳಿಗೆ ಹಾನಿಯಾದರೂ ಸಹ ಅವರೆಲ್ಲರಿಗೆ ಪರಿಹಾರ ನೀಡಲು ಆದೇಶ ಮಾಡಿದ್ದೇನೆ ಎಂದರು.
ನೋಡಲ್ ಅಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿ ಕೆಲಸ ಮಾಡಬೇಕು. ಯಾವುದೇ ಸಂದರ್ಭದಲ್ಲಿ ಅಗತ್ಯ ಬಿದ್ದಲ್ಲಿ ಸಭೆ ಮಾಡಿ ತುರ್ತು ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಭೂ ಕುಸಿತ ಉಂಟಾದರೆ ತಕ್ಷಣ ಜೆ.ಸಿ.ಬಿ. ಸಹಾಯದಿಂದ ಮಣ್ಣು ಸ್ಥಳಾಂತರಿಸಬೇಕು, ಮತ್ತೆ ಮಣ್ಣು ಕುಸಿಯುವ ಭೀತಿ ಇದ್ದರೆ ಮಣ್ಣು ತೆಗೆಯುವುದು ಬೇಡಾ ಎಂದು ಸಲಹೆ ನೀಡಿದ ಅವರು ಅದರ ಬಿಲ್ಲನ್ನು ತಹಸೀಲ್ದಾರ್‌ಗೆ ಸಲ್ಲಿಸಿ ಅವರು ಪಾವತಿಸುತ್ತಾರೆ ಎಂದರು.

ಇದನ್ನೂ ಓದಿ : ಆಂತರಿಕ ಕಲಹ: ಗೋವಾ ಕಾಂಗ್ರೆಸ್ ನ ಐವರು ಶಾಸಕರು ಚೆನ್ನೈಗೆ ಶಿಫ್ಟ್!

Advertisement

ಪರಿಹಾರ ವಿತರಿಸದ್ದಕ್ಕೆ ಗರಂ ಆದ ಶಾಸಕ!
ಕಾಯ್ಕಿಣಿಯಲ್ಲಿ ಮಹಿಳೆಯೊಬ್ಬರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದ್ದು ಶೇ.15ಕ್ಕಿಂತ ಕಡಿಮೆ ಎನ್ನುವ ನೆಪ ಹೇಳಿ ಪರಿಹಾರ ನೀಡಿಲ್ಲ, ಇಂಜಿನಿಯರ್ ಪರಿಹಾರ ವಿತರಿಸಲು ಬರುವುದಿಲ್ಲ ಎಂದು ಶರಾ ಬರೆದಿದ್ದಕ್ಕೆ ಸಚಿವರ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಸುನೀಲ ನಾಯ್ಕ, ಮನೆ ಮೇಲೆ ಮರ ಬಿದ್ದು ಹಾನಿಯಾದ ಮೇಲೆ ಪರಿಹಾರ ಕೊಡುವುದಿಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದರು. ಅದರಂತೆ ಸಭೆಗೆ ಬರದೇ ಕಾರವಾರದ ಕಚೇರಿಗೆ ತೆರಳಿದ್ದ ಇಂಜಿನಿಯರಿಗೆ ಸಭೆಯಲ್ಲಿ ಸಚಿವರ ಎದುರಿನಲ್ಲೇ ಕರೆ ಮಾಡಿ ಪರಿಹಾರ ವಿತರಿಸದ ಕುರಿತು ಪ್ರಶ್ನಿಸಿದರು. ಸಚಿವರು ಮನೆ ಹಾನಿಯಾದವರಿಗೆ ಪರಿಹಾರ ಕೊಡಲು ಮೀನಮೇಷ ಮಾಡಬೇಡಿ. ಮಹಿಳೆಗೆ ಸೂಕ್ತ ಪರಿಹಾರ ಒದಗಿಸಿ ಎಂದು ತಹಸೀಲ್ದಾರರಿಗೆ ಸೂಚಿಸಿದರು.

ಮಳೆ ಮುಗಿಯುವ ವರೆಗೆ ರಜೆ ಇಲ್ಲ !
ವಿಪರೀತ ಮಳೆ ಸುರಿಯುತ್ತಿರುವುದರಿಂದ ಎಲ್ಲೆಡೆ ಹಾನಿ ಸಂಭವಿಸುತ್ತಿದೆ. ಹೀಗಾಗಿ ಮಳೆ ಮುಗಿಯುವ ತನಕ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಯಾವುದೇ ರಜೆ ಇಲ್ಲ. ಸಿಬ್ಬಂದಿಗಳು ಹಾನಿಯ ಕುರಿತು ಎಲ್ಲೆಡೆ ತೀವ್ರ ನಿಗಾ ಇಡಬೇಕು. ಮಳೆ ಹಾನಿಗೆ ಸ್ಪಂದಿಸದೇ ಇರುವುದು, ಪರಿಹಾರ ವಿತರಣೆಯಲ್ಲಿ ವ್ಯತ್ಯಯ ಸೇರಿದಂತೆ ಸಾರ್ವಜನಿಕರಿಂದ ಯಾವುದೇ ರೀತಿಯ ದೂರು ಬಂದರೂ ಸಂಬAಧಪಟ್ಟ ಅಧಿಕಾರಿಗಳನ್ನೇ ಹೊಣೆಯಾಗಿ ಮಾಡಲಾಗುವುದು.

ಅಡಕೆ ಕೊಳೆರೋಗಕ್ಕೂ ಪರಿಹಾರ ಕೊಡ್ತೇವೆ
ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಡಕೆಗೆ ಕೊಳೆರೋಗ ತಗುಲಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಅಡಕೆ ಕೊಳೆರೋಗಕ್ಕೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರೂ ಬಿಡಿಗಾಸೂ ಪರಿಹಾರ ಲಭ್ಯವಾಗಿಲ್ಲ ಎಂದು ಸಚಿವರ ಗಮನಕ್ಕೆ ತಂದಾಗ, ಉತ್ತರಿಸಿದ ಸಚಿವರು ಸರ್ವೆ ಕಾರ್ಯದಲ್ಲಿ ಆದ ಗೊಂದಲದಿAದ ಪರಿಹಾರ ವಿತರಿಸಿಲ್ಲ. ಈ ಬಾರಿ ಅಡಕೆ, ಭತ್ತ ಬೆಳೆ ಹಾನಿಗೆ ಸಂಬಂಧಿಸಿದಂತೆ ಸರಕಾರದ ನಿಯಮಾವಳಿಯಂತೆ ಪರಿಹಾರ ವಿತರಿಸಲಾಗುತ್ತದೆ. ಸರಕಾರ ಪರಿಹಾರದ ಮೊತ್ತವನ್ನು ಪರಿಷ್ಕರಣೆ ಮಾಡಿದ್ದು, ಬೆಳೆ ಹಾನಿಯಾದ ರೈತರು ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದು ಎಂದರು. ಪರಿಹಾರ ವಿತರಣೆಯಾಗದ ನಿರ್ಧಿಷ್ಟ ಪ್ರಕರಣವಿದ್ದರೆ ತನಗೆ ತಿಳಿಸುವಂತೆಯೂ ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಮಳೆಗಾಲದಲ್ಲಿ ಹೊಳೆಯಾಗುತ್ತದೆ ಎಂದು ಪತ್ರಕರ್ತರು ಉಸ್ತುವಾರಿ ಸಚಿವರ ಗಮನ ಸೆಳೆದಾಗ ಹೆದ್ದಾರಿ ಕಾಮಗಾರಿಯನ್ನು ಮಾಡುತ್ತಿರುವ ಇಂಜಿನಿಯರ್ ಎಲ್ಲಿಂದಲೋ ಬಂದು ಇಲ್ಲಿ ಪ್ಲಾನ್ ಮಾಡಿದ್ದಾರೆ. ಸ್ಥಳೀಯರಾಗಿದ್ದರೆ ಅವರಿಗೆ ನೀರಿನ ಪ್ರಮಾಣ, ನೀರಿನ ಹರಿವು ಇವುಗಳ ಬಗ್ಗೆ ಮಾಹಿತಿ ಇರುತ್ತಿತ್ತು. ಸದ್ಯಕ್ಕೆ ಎಲ್ಲೆಲ್ಲಿ ನೀರು ನಿಲ್ಲುತ್ತದೆ ಅವುಗಳನ್ನು ಬಿಡಿಸಿಕೊಡುವ ಕಾರ್ಯವನ್ನು ಒಂದು ವಾರದೊಳಗೆ ಮಾಡಿ ಸಮಸ್ಯೆ ಪರಿಹರಿಸುತ್ತೇವೆ ಎಂದರು.

ಸಭೆಯಲ್ಲಿ ಶಾಸಕ ಸುನಿಲ್ ನಾಯ್ಕ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್., ತಹಸೀಲ್ದಾರ್ ಡಾ. ಸುಮಂತ್ ಬಿ.ಇ., ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಹೊನ್ನಾವರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯಕ, ನೋಡಲ್ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next