ಭಟ್ಕಳ: ಪ್ರಜಾಪ್ರಭುತ್ವದಲ್ಲಿ ಠೀಕೆಯನ್ನು ಎದುರಿಸದೇ ಇರುವುದು ಕೂಡಾ ಅಪಾಯಕಾರಿಯಾಗಿದ್ದು ಕಾಂಗ್ರೆಸ್ ಪಕ್ಷದವರು ಠೀಕೆ ಮಾಡುವುದಕ್ಕೋಸ್ಕರವೇ ಮಾತನಾಡುತ್ತಿದ್ದಾರೆ ಎಂದು ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಸಚಿವ ಹಾಗೂ ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಭಟ್ಕಳದ ಬಿ.ಜೆ.ಪಿ. ಕಚೇರಿಯಲ್ಲಿ ಕಾರ್ಯಕರ್ತರ ಅಹವಾಲುಗಳ ಸ್ವೀಕರಾರಕ್ಕೂ ಮುನ್ನ ಮಾತನಾಡುತ್ತಿದ್ದರು.
ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪ್ರತಿಪಕ್ಷಗಳ ಠೀಕೆಗಳ ನಡುವೆಯೇ ಉತ್ತಮವಾಗಿ ಕೆಲಸಗಳನ್ನು ಮಾಡುತ್ತಿವೆ. ರಾಜ್ಯ ಸರಕಾರ ತಂದಿರುವ ಮತಾಂತರ ಕಾಯಿದೆಯನ್ನು ವಿರೋಧಿಸಿ ಸಿದ್ಧರಾಮಯ್ಯ, ಬಿ.ಕೆ.ಹರಿಪ್ರಸಾದ್ ಠೀಕಿಸುತ್ತಿರುವುದಕ್ಕೆ ಆರ್ಥವೇ ಇಲ್ಲ. ಹಾಗಾದರೆ ಮತಾಂತರ ಕಾಯಿದೆಯಿಂದ ಇವರಿಗೇನು ತೊಂದರೆ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಹೇಳಿದ ಅವರು ಮತಾಂತರ ಕಾಯಿದೆಯಲ್ಲಿ ಬಲವಂತದ, ಮೋಸದ, ಆಮಿಷದ, ಅಪ್ರಾಪ್ತರನ್ನು ಮದುವೆಯಾಗುವ ಆಸೆ ತೋರಿಸಿದರೆ, ತಮ್ಮ ದೇವರು ಶ್ರೇಷ್ಠ ಕಾಯಿಲೆ ಗುಣಪಡಿಸುತ್ತಾನೆ ಎನ್ನುವ ಆಮಿಷದಿಂದ ಮತಾಂತರ ಇವೆಲ್ಲವೂ ಅದರಲ್ಲಿದೆ. ಇವುಗಳಲ್ಲಿ ಕಾಂಗ್ರೆಸ್‌ನವರು ಯಾವುದನ್ನು ವಿರೋಧಿಸುತ್ತಾರೆ ಯಾವುದು ಇವರಿಗೆ ತೊಂದರೆಯಾಗಿರುವುದು ಎನ್ನುವುದನ್ನು ಸಾರ್ವಜನಿಕರಿಗೆ ತಿಳಿಯಪಡಿಸಲಿ ಎಂದು ಸವಾಲು ಹಾಕಿದ ಪೂಜಾರಿ ಇದು ಕೇವಲ ವಿರೋಧ ಮಾಡುವುದಕ್ಕೆ ಮಾತ್ರ ಎಂದರು.
ನಾರಾಯಣ ಗುರುಗಳ ಹೆಸರನ್ನು ಪಠ್ಯದಿಂದ ಕೈಬಿಡಲಾಗಿದೆ ಎನ್ನುವ ಕುರಿತು ಹೇಳಿಕೆ ನೀಡುವ ಈ ನಾಯಕರುಗಳಿಗೆ ಹೆಸರು ಕೈಬಿಟ್ಟಿರುವ ಕುರಿತು ಯಾರು ಹೇಳಿದರು ಎನ್ನುವುದನ್ನು ಸ್ಪಷ್ಟಪಡಿಸಬೇಕು. ನಾರಾಯಣಗುರುಗಳ ಮೂಲ ಸ್ಥಾನಕ್ಕೆ ಇಲ್ಲಿಯ ತನಕ ಯಾರೂ ಭೇಟಿ ಕೊಟ್ಟಿರಲಿಲ್ಲ. ಕೇಂದ್ರದ ಪ್ರಧಾನಿ ಮೋದಿ ಅವರು ಬೇಟಿ ನೀಡಿ 70 ಕೋಟಿ ರೂಪಾಯಿ ಅಭಿವೃದ್ಧಿಗೆ ಮಂಜೂರಿಸಿದ್ದಾರೆ. ರಾಜ್ಯ ಸರಕಾರ ನಾರಾಯಣ ಗುರುಗಳ ಹೆಸರಿನಲ್ಲಿ ನಾಲ್ಕು ವಸತಿ ಶಾಲೆಗಳನ್ನು ಮಂಜೂರು ಮಾಡಿದೆ. ಅವುಗಳಲ್ಲಿ ಒಂದನ್ನು ಭಟ್ಕಳಕ್ಕೆ ಕೊಟ್ಟಿದ್ದೇನೆ ಎಂದ ಅವರು ಉಡುಪಿಗೆ, ಮಂಗಳೂರಿಗೆ, ಶಿವಮೊಗ್ಗಕ್ಕೆ ಒಂದೋದು ವಸತಿ ಶಾಲೆ ನೀಡಲಾಗಿದೆ. ಇಲ್ಲಿ ಬಡ ಹಿಂದುಳಿದ ವರ್ಗಗಳ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ, ವಸತಿ ದೊರೆಯಲಿದೆ ಎಂದರು.
ಇದನ್ನೂ ಓದಿ : ಶಿವಮೊಗ್ಗ: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ಅಪಾರ ಹಾನಿಯಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ನೀತಿ ಸಂಹಿತೆ ಜ್ಯಾರಿಯಲ್ಲಿರುವುದರಿಂದ ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಹಾಗೂ ಆಯಾಯ ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಎಂತಹ ಪರಿಸ್ಥಿತಿಯನ್ನು ಕೂಡಾ ಎದುರಿಸುವ ಸಿದ್ಧತೆ ಮಾಡಿಕೊಂಡಿದ್ದೇವೆ. ಜಿಲ್ಲೆಯಲ್ಲಿ ಭಟ್ಕಳ ಹಾಗೂ ಸಿದ್ದಾಪುರದಲ್ಲಿ ತಲಾ ಒಂದು ಸಾವಾಗಿದೆ. ೩ ಜಾನುವಾರುಗಳಿಗೆ ಹಾನಿಯಾಗಿದೆ, ಹೊನ್ನಾವರ, ಮುಂಡಗೋಡದಲ್ಲಿ ತಲಾ ಒಂದು ಮನೆ ಸಂಪೂರ್ಣ ಕುಸಿದಿದೆ. ಜಿಲ್ಲೆಯಲ್ಲಿ 21 ಮನೆಗಳು ಭಾಗಶ: ಕುಸಿದಿವೆ. ಬೆಳೆಹಾನಿ, ವಿದ್ಯುತ್ ಪರಿಕರಗಳ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಕೂಡಾ ಸಂಭವಿಸಿದ್ದು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು.