Advertisement

ನಿಗಮದಿಂದ ಬಿಲ್ಲವ ಸಮುದಾಯಕ್ಕೆ ಅನುಕೂಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ

11:33 PM Jan 05, 2023 | Team Udayavani |

ಉಡುಪಿ : ಬಿಲ್ಲವ ಸಮುದಾಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ಸಮುದಾಯದ ಬೇಡಿಕೆಗೆ ಅನುಗುಣವಾಗಿ ಕೋಶವನ್ನು ಪರಿವರ್ತಿಸಿ, ನಿಗಮ ರಚನೆಗೆ ಮುಖ್ಯಮಂತ್ರಿಯವರು ಆದೇಶಿಸಿದ್ದಾರೆ. ಇದರಿಂದ ಸಮುದಾಯದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಗುರುವಾರ ಉಡುಪಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯೊಳಗೆ ಸುಮಾರು 208 ಜಾತಿಗಳು ಬರುತ್ತವೆ. ಪ್ರತೀ ಜಾತಿಯು ನಿಗಮಕ್ಕೆ ಬೇಡಿಕೆ ಇಡುವುದು ಸಹಜ. ಎಲ್ಲವನ್ನು ಕ್ರೋಡೀಕರಿಸಿ ಪರಿಶೀಲಿಸಿದ ಬಳಿಕ ನಿಗಮದ ಘೋಷಣೆ ಅಥವಾ ಕೋಶ ರಚನೆ ಬಗ್ಗೆ ಕ್ರಮ ಕೈಗೊಳ್ಳ ಲಾಗುತ್ತದೆ. ಬಿಲ್ಲವ ಸಮಾಜದ ನಿಗಮಕ್ಕೆ ಸಿಎಂ ನಿರ್ದಿಷ್ಟ ಪ್ರಮಾಣದ ಅನುದಾನ ಹಂಚಿಕೆ ಮಾಡುವರು ಎಂದರು.

ಪ್ರಜಾಪ್ರಭುತ್ವದಲ್ಲಿ ಪಾದಯಾತ್ರೆ ಮಾಡಲು ಎಲ್ಲರಿಗೂ ಅವಕಾಶವಿದೆ. ಅದರಂತೆ ಸ್ವಾಮೀಜಿಯವರು ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಸಮುದಾಯದ ಬಹುಮುಖ್ಯ ಬೇಡಿಕೆ ಈಡೇರಿದೆ. ಅನುದಾನದ ಹಂಚಿಕೆ ಹೇಗಾಗಲಿದೆ ಎಂಬುದು ಈ ಹಿಂದೆ ಸಚಿವರಾಗಿದ್ದ ವಿನಯ ಕುಮಾರ್‌ ಸೊರಕೆಯವರಿಗೆ ಗೊತ್ತಿಲ್ಲದೇ ಇರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಅನೇಕ ಸಂದರ್ಭದಲ್ಲಿ ಸಮಾಜವನ್ನು ಕಾಡುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಸಾಂದರ್ಭಿಕವಾಗಿ ರಾಜ್ಯಾಧ್ಯಕ್ಷರು ಲವ್‌ ಜೆಹಾದ್‌ ಬಗ್ಗೆ ಮಾತನಾಡಿದ್ದಾರೆ. ಲವ್‌ ಜೆಹಾದ್‌ ವಂಚನೆ, ಸಂಚಿನ ಬಗ್ಗೆ ಹೇಳಿದ್ದಾರೆ ಎಂದು ತಿಳಿಸಿದ ಸಚಿವರು, ಜತೆಗೆ ರಸ್ತೆ, ಮೂಲಸೌಕರ್ಯ ಕುರಿತಾಗಿಯೂ ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಹೇಳಿದರು.
ಮೇಲ್ಮನೆಯಲ್ಲೇ ಮುಂದುವರಿಯಲು ಬಯಸುವೆ ಎಂದ ಅವರು, ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಪಕ್ಷದೊಳಗೆ ಗೊಂದಲ ಇಲ್ಲ. ಕೇಂದ್ರ ಹಾಗೂ ರಾಜ್ಯದ ನಾಯಕರು ಸೂಕ್ತ ನಿರ್ಧಾರ ಕೈಗೊಳ್ಳುವರು. ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ ಎಂದರು.

ಬಿಲ್ಲವ ಮುಖಂಡರ ಹರ್ಷ
ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿಯವರು ಒಪ್ಪಿಗೆ ಸೂಚಿಸಿದ್ದು, ಸಮಾಜದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಅಖೀಲ ಭಾರತ ಬಿಲ್ಲವರ ಯೂನಿಯನ್‌ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ ತಿಳಿಸಿದ್ದಾರೆ.

ಜಿಲ್ಲಾ ಬಿಜೆಪಿ ಸ್ವಾಗತ
ಬಿಲ್ಲವ ನಿಗಮ ಸ್ಥಾಪನೆ ನಿರ್ಧಾರವನ್ನು ಜಿಲ್ಲಾ ಬಿಜೆಪಿ ಸ್ವಾಗತಿಸುತ್ತದೆ ಎಂದು ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್‌ ಮೂಡುಬಿದಿರೆ ಮತ್ತು ಕುಯಿಲಾಡಿ ಸುರೇಶ್‌ ನಾಯಕ್‌ ಹೇಳಿದ್ದಾರೆ. ಶಾಸಕರಾದ ರಾಜೇಶ ನಾೖಕ್‌, ಕೆ. ರಘುಪತಿ ಭಟ್‌, ಹರ್ಷ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next