Advertisement

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

01:16 AM Dec 23, 2024 | Team Udayavani |

ಕೋಟ: ಸಾಸ್ತಾನ ಟೋಲ್‌ನಲ್ಲಿ ಸ್ಥಳೀಯ ವಾಣಿಜ್ಯ ವಾಹನಕ್ಕೆ ಟೋಲ್‌ ವಿಧಿಸುವುದನ್ನು ಖಂಡಿಸಿ ರವಿವಾರ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಸಂಸದರ ಉಪಸ್ಥಿತಿಯಲ್ಲಿ ಮತ್ತೊಮ್ಮೆ ಪ್ರತಿಭಟನೆ ನಡೆದಿದ್ದು, ಡಿ. 30ರ ವರೆಗೆ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ ನೀಡಲಾಯಿತು.

Advertisement

ಸ್ಥಳೀಯ ವಾಣಿಜ್ಯ ವಾಹನಗಳಿಗೆ ಶುಲ್ಕ ವಿಧಿಸುವುದರಿಂದ ಸ್ಥಳೀಯರಿಗೆ ಸಾಕಷ್ಟು ಸಮಸ್ಯೆಯಾಗುತ್ತದ್ದು ನಿರ್ಣಯವನ್ನು ವಾಪಸ್‌ ಪಡೆದು ಹಿಂದಿನಂತೆ ಕೋಟ ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಎಲ್ಲ ವಾಹನಗಳಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿ ಟೋಲ್‌ನ ಎರಡು ಸ್ಥಳೀಯ ಗೇಟ್‌ಗಳನ್ನು ತಡೆದು ಪ್ರತಿಭಟಿಸಲಾಯಿತು.

ಎ.ಸಿ. ನೇತೃತ್ವದಲ್ಲಿ ಮಾತುಕತೆ
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಕುಂದಾಪುರ ಸಹಾಯಕ ಕಮಿಷನರ್‌ ಮಹೇಶ್ಚಂದ್ರ ಆಗಮಿಸಿ ಪ್ರತಿಭಟನಾ ನಿರತರು ಹಾಗೂ ಸಂಸದರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಡಿ. 30ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲು ಹಾಗೂ ಅಲ್ಲಿಯವರೆಗೆ ಯಥಾಸ್ಥಿತಿ ಮುಂದುವರಿಸಲು ತೀರ್ಮಾನಿಸಲಾಯಿತು. ಟೋಲ್‌ನ ಎರಡೂ ಕಡೆ ಸ್ಥಳೀಯ ವಾಹನಗಳಿಗೆ ಸರ್ವಿಸ್‌ ರಸ್ತೆ ನಿರ್ಮಿಸಿ ಕೊಡಬೇಕೆಂಬ ನಿಯಮವಿದೆ. ಆದರೆ ಕಂಪೆನಿ ಈ ನಿಯಮವನ್ನು ಪಾಲಿಸಿಲ್ಲ. ಸ್ಥಳೀಯ ರಿಗೆ ವಿನಾಯಿತಿ ನೀಡದಿದ್ದರೆ ಸರ್ವಿಸ್‌ ರಸ್ತೆ ನಿರ್ಮಿಸಿಕೊಡುವಂತೆ ಬೇಡಿಕೆ ಸಲ್ಲಿಸಲಾಗುವುದು ಎಂದು ಸಂಸದರು ತಿಳಿಸಿದರು.

ಹೆದ್ದಾರಿ ಜಾಗೃತಿ ಸಮಿತಿ ಪ್ರಮುಖರಾದ ಶ್ಯಾಮ್‌ ಸುಂದರ್‌ ನಾಯರಿ, ಪ್ರತಾಪ್‌ ಶೆಟ್ಟಿ, ವಿಟ್ಠಲ ಪೂಜಾರಿ, ನಾಗರಾಜ್‌ ಗಾಣಿಗ, ಪೂಜಾರಿ, ಗಣೇಶ್‌ ಪೂಜಾರಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಂಕರ ಕುಂದರ್‌, ಯಶಪಾಲ್‌ ಸುವರ್ಣ ಮೊದಲಾದವರಿದ್ದರು. ಬ್ರಹ್ಮಾವರ ಸಿಐ ದಿವಾಕರ್‌, ಕೋಟ ಎಸ್‌ಐ ರಾಘವೇಂದ್ರ ಬಂದೋಬಸ್ತ್ ಮಾಡಿದ್ದರು.

ಸಂಸದರು ಭಾಗಿ
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರತಿಭಟನ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಿರತರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರಲ್ಲದೆ, ಜಿಲ್ಲಾಧಿಕಾರಿಗಳು ಹಾಗೂ ಎಸ್‌ಪಿ ಜತೆಗೆ ಮಾತುಕತೆ ನಡೆಸಿದರು. ಆದರೆ ಯಥಾಸ್ಥಿತಿ ಮುಂದುವರಿಸಲು ನಿರಾಕರಿಸಿದಾಗ ಹೋರಾಟ ತೀವ್ರಗೊಳಿಸಿ ಎಲ್ಲ ಗೇಟ್‌ಗಳನ್ನು ತಡೆಯಲು ಪ್ರಯತ್ನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next