Advertisement

Kota: ಸಾಲಿಗ್ರಾಮ ಪಟ್ಟಣ ಪಂಚಾಯತ್ ಆಡಳಿತ ಯಂತ್ರಕ್ಕೆ ಸಿಗಬೇಕಿದೆ ವೇಗ

05:17 PM Sep 17, 2024 | Team Udayavani |

ಕೋಟ: ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅವಧಿ ಮುಗಿದು 17ತಿಂಗಳು ಗಳ ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಈ ಹಿಂದೆ ಚುನಾಯಿತ ಸದಸ್ಯರ ಪೂರ್ಣಪ್ರಮಾಣದ ಅಧಿಕಾರವಿಲ್ಲದ ಕಾರಣ ಜನರ ಕೆಲಸಗಳು ಪರಿಹಾರ ಆಗುತ್ತಿಲ್ಲ, ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿದೆ. ಚುನಾಯಿತ ಸದಸ್ಯರು ಹೆಸರಿಗಷ್ಟೇ ಸದಸ್ಯರು ಎನ್ನುವಂತಾ ಗಿದ್ದೇವೆ ಎನ್ನುವ ನೋವಿನ ಮಾತು ಸದಸ್ಯರಿಂದ ಕೇಳಿಬರುತ್ತಿತ್ತು. ಇದೀಗ ಆ ಸಮಸ್ಯೆ ದೂರವಾಗಿದೆ. ಇನ್ನುಳಿದ ಆಡಳಿತಾವಧಿ 13ತಿಂಗಳು ಮಾತ್ರ.
ಹೀಗಾಗಿ ಆಡಳಿತ ಯಂತ್ರಕ್ಕೆ ಚುರುಕು ನೀಡುವ ಜತೆಗೆ ಜನರ ಸಮಸ್ಯೆ ಯನ್ನುಪರಿಹರಿಸುವ ಕುರಿತು ನೂತನ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಕ್ರಮಕೈಗೊಳ್ಳಬೇಕಿದೆ.

Advertisement

ಪ್ರಮುಖ ಸಮಸ್ಯೆಗಳು: ಕಸ ವಿಲೇವಾರಿ ಸಮಸ್ಯೆ ಸಾಲಿಗ್ರಾಮ ಪ.ಪಂ. ಬೆಂಬಿಡದ ಭೂತದಂತೆ ಕಾದುತ್ತಿದೆ ಹಾಗೂ ಕಸ ವಿಂಗಡಣೆಗಾಗಿ ಉಳ್ತೂರಿನಲ್ಲಿ ಖರೀದಿಸಿದ ಜಾಗಕ್ಕೆ ಸಂಬಂಧಪಟ್ಟಂತೆ ಅಲ್ಲಿನ ಸ್ಥಳೀಯರ ಆಕ್ಷೇಪಗಳಿದೆ. ಹೀಗಾಗಿ ಈ ಬಗ್ಗೆ ಸೂಕ್ತ ಪರಿಹಾರ ಸೂತ್ರವನ್ನು ಆಡಳಿತ ಸಮಿತಿ ಕೈಗೊಳ್ಳಬೇಕಿದೆ. ಪ.ಪಂ.ನಲ್ಲಿ ಮಧ್ಯವರ್ತಿಗಳ ಹಾವಳಿ ಜಾಸ್ತಿ ಇರುವುದರಿಂದ ಜನರ ಕೆಲಸ ವೇಗವಾಗಿ ನಡೆಯುತ್ತಿಲ್ಲ. ಜನರೇ ನೇರವಾಗಿ ಕಚೇರಿಗೆ ಬಂದರೆ ತಿಂಗಳುಗಟ್ಟಲೆ ಅಲೆದಾದಬೇಕು, ಮಧ್ಯವರ್ತಿಗಳ ಮೂಲಕ ಬಂದರೆ ವಾರದಲ್ಲೇ ಕೆಲಸವಾಗುತ್ತೆ ಎನ್ನುವ ದೂರು ವಿರೋಧ ಪಕ್ಷದಿಂದ ಹಲವು ಬಾರಿ ಕೇಳಿಬಂದಿತ್ತು. ಈ ಬಗ್ಗೆ ಕೂಡ ಪರಿಶೀಲಿಸಿ ಪಾರದರ್ಶಕ ಆಡಳಿತ ನಡೆಯುವಂತೆ ನೋಡಿಕೊಳ್ಳಬೇಕಿದೆ. ಚುನಾಯಿತ ಸದಸ್ಯರ ಯಾವ ಕೆಲಸವೂ ಸರಿಯಾಗಿ ಆಗದಿರುವುದು, ಸಣ್ಣ ಸಮಸ್ಯೆ ಪರಿಹಾರಕ್ಕೆ ತಿಂಗಳುಗಟ್ಟಲೆ ತೆಗೆದುಕೊಳ್ಳುವುದು, ಎಲ್ಲ ವಿಚಾರದಲ್ಲೂ ಅಧಿಕಾರಿಗಳದ್ದೇ ಅಂತಿಮ ನಿರ್ಧಾರಗಳಿರುವುದು ಸಾಕಷ್ಟು ಬೇಸರ ತಂದಿದೆ ಎನ್ನುವುದು ಆಡಳಿತಾಧಿಕಾರಿಗಳ ಆಡಳಿತಾವಧಿಯಲ್ಲಿ ಕೆಲವು ಸದಸ್ಯರ ನೋವಿನ ಮಾತಾಗಿತ್ತು. ಮುಂದೆ ಸದಸ್ಯರು ನೀಡುವ ದೂರುಗಳಿಗೆ ತತ್‌ಕ್ಷಣ
ಸ್ಪಂದಿಸುವಂತೆ, ಅಭಿವೃದ್ಧಿ ಕಾರ್ಯಗಳು ಶೀಘ್ರವಾಗಿ ನೆರವೇರುವಂತೆ ಆಗಬೇಕಿದೆ.

ಸಾಮಾನ್ಯ ಸಭೆಗಳು ಕಾಲಕಾಲಕ್ಕೆ ನಡೆದಾಗ ಜನಸಾಮಾನ್ಯರ ಒಂದಷ್ಟು ಸಮಸ್ಯೆಗಳ ಬಗ್ಗೆ ಚರ್ಚೆ ನಡೆದು ಕೆಲವೊಂದಕ್ಕೆ ಪರಿಹಾರ ಸಿಗುತ್ತದೆ. ಆಡಳಿತಾಧಿಕಾರಿಗಳ ಆಡಳಿತವಿದ್ದಾಗ ಕಳೆದ ಒಂದೂವರೇ ವರ್ಷದಲ್ಲಿ ನಡೆದ ಸಭೆ ಕೇವಲ ಎರಡು ಮಾತ್ರ; ಅದರಲ್ಲೂ ಒಂದು ಜಾತ್ರೆಗೆ ಸಂಬಂಧಿಸಿದ್ದು. ಹೀಗಾಗಿ ಶೀಘ್ರವಾಗಿ ಸಾಮಾನ್ಯ ಸಭೆ ನಡೆಸಿ ಪ್ರತಿಯೊಬ್ಬ ಸದಸ್ಯರ ವಾರ್ಡ್‌ ವ್ಯಾಪ್ತಿಯ ಸಮಸ್ಯೆಗಳನ್ನು ತಿಳಿದು ಪರಿಹಾರ ಮಾಡಬೇಕಿದೆ.

ಸಮಸ್ಯೆಗೆ ಪರಿಹಾರ ಅಗತ್ಯ
ಕೆಲವೊಂದು ಸಮಸ್ಯೆಗಳಿಗೆ ಪ.ಪಂ. ಆಡಳಿತ ಮಂಡಳಿ ಮಟ್ಟದಲ್ಲಿ ಪರಿಹಾರ ಅಸಾಧ್ಯ. ಹೀಗಾಗಿ ಶಾಸಕರು, ವಿಧಾನಪರಿಷತ್‌ ಸದಸ್ಯರು, ಸಂಸದರು ಒಂದಷ್ಟು ಸಭೆಗಳಲ್ಲಿ ಭಾಗವಹಿಸಿದರೆ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆ ಇರುತ್ತದೆ. ಪ್ರಸ್ತುತ ಹೇರಳವಾದ ಸಮಸ್ಯೆಗಳು ಪ.ಪಂ.ನಲ್ಲಿದೆ. ಹೀಗಾಗಿ ಸಂಸದರು ಮುಂದಿನ ಕೆಲವು ಸಭೆಗಳಲ್ಲಿ ಇವರೆಲ್ಲ ಭಾಗವಹಿಸಿ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬೇಕಿದೆ.

ದೂರು ಕೇಂದ್ರ ತೆರೆಯಲಿ
ಜನಸಾಮಾನ್ಯರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ ಎನ್ನುವ ಅಭಿಪ್ರಾಯವಿದೆ. ಆದ್ದರಿಂದ ದೂರವಾಣಿ ಮೂಲಕ ಜನರ ದೂರುಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಸಿಬಂದಿಗಳ ಗಮನಕ್ಕೆ ತಂದು ಪರಿಹರಿಸುವ ನಿಟ್ಟಿನಲ್ಲಿ ದೂರು ಕೇಂದ್ರ ಸ್ಥಾಪನೆಯಾಗಲಿ ಎನ್ನುವ ಬೇಡಿಕೆ ಇದೆ.

Advertisement

ಪರಿಹಾರಕ್ಕೆ ಒತ್ತು
ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳಿರುವುದು ಗಮನದಲ್ಲಿದೆ. ಇದರ ಪರಿಹಾರಕ್ಕಾಗಿ ಪ್ರಥಮವಾಗಿ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ಟೆಂಡರ್‌ ಮೂಲಕ ನಿರ್ವಹಣೆಯಾಗುವ ಕೆಲಸಗಳ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ವಾರ್ಡ್‌ವಾರು ಸಮಸ್ಯೆಗಳನ್ನು ಪಟ್ಟಿ ಮಾಡಿ ಪರಿಹರಿಸಲು ಪ್ರಯತ್ನಿಸಲಾಗುವುದು.
– ಸುಕನ್ಯಾ ಶೆಟ್ಟಿ, ಅಧ್ಯಕ್ಷರು ಸಾಲಿಗ್ರಾಮ ಪ.ಪಂ.

ಗುತ್ತಿಗೆ ವಹಿಸಿಕೊಂಡವರ ಕೆಲಸ ಹೇಗಿದೆ: ಬೀದಿ ದೀಪ ಸೇರಿದಂತೆ ಕೆಲವೊಂದು ಗುತ್ತಿಗೆದಾರರಿಗೆ ಟೆಂಡರ್‌ ನೀಡಲಾದ ಕೆಲಸಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಬೀದಿ ದೀಪಗಳು ಹಗಲೆಲ್ಲ ಉರಿಯುತ್ತದೆ ಎನ್ನುವ ದೂರುಗಳಿದ್ದುದೇ ಬಗ್ಗೆ ಪರಿಶೀಲಿಸಬೇಕಿದೆ.

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next