Advertisement

ವಾರಾಹಿ ಎಲ್ಲರ ಅಂಗಳಕ್ಕೂ ಹರಿದು ಬರಲಿ

01:10 PM Jul 26, 2022 | Team Udayavani |

ಕೋಟ: ಸಾೖಬ್ರಕಟ್ಟೆಯಿಂದ ಕೋಟ ಮಾರ್ಗವಾಗಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಎರಡು ಕಿ.ಮೀ. ಮುಂದೆ ಸಾಗಿದರೆ ಉತ್ತರಕ್ಕೆ ಕಾಣ ಸಿಗುವ ಪುಟ್ಟ ಗ್ರಾಮ ಅಚ್ಲಾಡಿ. ಭತ್ತದ ಕೃಷಿ ಈ ಗ್ರಾಮಸ್ಥರ ಮುಖ್ಯ ಕಸುಬು. ಹೈನುಗಾರಿಕೆ ಉಪ ಕಸುಬು. ತರಕಾರಿಗಳನ್ನು ಬೆಳೆದು ಮಾರುವವರೂ ಇದ್ದಾರೆ.

Advertisement

ಈ ಗ್ರಾಮ ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಗೆ ಸೇರಿದೆ. 300.4 ಹೆಕ್ಟೇರ್‌ ವಿಸ್ತೀರ್ಣವನ್ನು ಹೊಂದಿದೆ. ಒಟ್ಟು 1,133 ಜನಸಂಖ್ಯೆ. 252 ಕುಟುಂಬಗಳು ಇಲ್ಲಿವೆ. ಗ್ರಾಮದ ಮುಖ್ಯ ಪೇಟೆ ಮಧುವನ. ಮಿಕ್ಕುಳಿದಂತೆ ಕೊಮೆ, ಸೂರಿಬೆಟ್ಟು, ಗಾಣಿಗರಬೆಟ್ಟು, ಆರ್‌ಬೆಟ್ಟು, ಅಡಾರ್‌ಬೆಟ್ಟು, ಆಚಾರ್‌ಬೆಟ್ಟು, ಅಚ್ಲಾಡಿ ಗುಡ್ಡಿ, ಕೊಳಗೇರಿ, ಮಕ್ಕಿಮನೆ, ಬೈಲ್‌ವುನೆ, ಕಲ್ಲುತೊಡ್ಮೆ  ಮುಂತಾದ ಪ್ರದೇಶಗಳಿವೆ. ವ್ಯಾವಸಾಯಿಕ ಸಹಕಾರಿ ಸಂಘಗಳ ಶಾಖೆ, ಖಾಸಗಿ ಬ್ಯಾಂಕ್‌, ಹಾಲು ಉತ್ಪಾದಕರ ಸಹಕಾರಿ ಸಂಘ, ಅಂಚೆ ಕಚೇರಿ ಆರ್ಥಿಕ ಚಟುವಟಿಕೆಗಳಿಗೆ ಇಂಬು ನೀಡಿದ್ದರೆ, ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆ, ಕಾಲೇಜುಗಳಿವೆ. ಅಭಿವೃದ್ಧಿಯ ದೃಷ್ಟಿಯಲ್ಲಿ ಅವಲೋಕಿಸುವುದಿದ್ದರೆ ರಸ್ತೆಗಳಿಗೆ ಡಾಮರು ಕಂಡಿದೆ. ಆದರೆ ಇದೊಂದೇ ಸಮಾಧಾನ. ದೊಡ್ಡ ಮಟ್ಟದ ಯೋಜನೆಗಳು ಜಾರಿಯಾಗಿಲ್ಲ. ಹಾಗಾಗಿ ಗ್ರಾಮ ಸೌಲಭ್ಯದ ಪಟ್ಟಿ ಪೂರ್ತಿ ಈಡೇರಿಲ್ಲ.

ಏನೆಲ್ಲ ಬೇಕು?

ವಾರಾಹಿ ಯೋಜನೆಯ ಎಡದಂಡೆ ಕಾಲುವೆ ಈ ಗ್ರಾಮದ 200 ಮೀಟರ್‌ ಭಾಗದಲ್ಲಿ ಮಾತ್ರ ನಿರ್ಮಾಣವಾಗುತ್ತಿದ್ದು, ಅದು ಎಡಕ್ಕೆ ತಿರುಗಿ ಕಾವಡಿ ಗ್ರಾಮದ ಮೂಲಕ ಸಾಗುತ್ತದೆ. ಹೀಗಾಗಿ ಗ್ರಾಮದ ಬಹುತೇಕ ಭಾಗಗಳು ಈ ಸೌಲಭ್ಯದಿಂದ ವಂಚಿತವಾಗುವ ಆತಂಕವಿದೆ. ಕಾಲುವೆ ವಿಸ್ತರಣೆಗೊಳಿಸಿ ಗ್ರಾಮದ ನಮಗೂ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೊಮೆ ಸಮೀಪವಿರುವ ಅಚ್ಲಾಡಿ -ಬೇಳೂರು ಸಂಪರ್ಕ ಸೇತುವೆ ಕುಸಿಯುವ ಹಂತದಲ್ಲಿದ್ದು ಹೊಸ ಸೇತುವೆ ಹಾಗೂ ಸಂಪರ್ಕ ರಸ್ತೆ ಅಗತ್ಯವಿದೆ. ಮಧುವನ ಹಾಗೂ ಸಿದ್ಧಿವಿನಾಯಕ ದೇವಸ್ಥಾನದ ಮಧ್ಯೆ ನೇರ ಸಂಪರ್ಕಕ್ಕಾಗಿ ರಸ್ತೆ ಅಗತ್ಯವಿದೆ. ಇದೂ ಈಡೇರಲೇ ಬೇಕಾದ ಬೇಡಿಕೆ.

Advertisement

ದೊಡ್ಡಹೊಳೆಯಲ್ಲಿ ಪ್ರತಿ ವರ್ಷ ಎದುರಾಗುವ ನೆರೆ ಹಾವಳಿಯನ್ನು ತಡೆಯಲು ಕ್ರಮ ಕೈಗೊಳ್ಳದಿದ್ದರೆ ಈ ಭಾಗದವರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗಲಿದೆ. ಬೈಲುಮನೆ ಎನ್ನುವಲ್ಲಿ ಸುಮಾರು 10 ಕುಟುಂಬಗಳು ವಾಸವಾಗಿದ್ದು ಗದ್ದೆಯ ನಡುವಿನ ಈ ಪ್ರದೇಶಕ್ಕೆ ರಸ್ತೆ ಸಂಪರ್ಕ ಇಲ್ಲ. ಐದಾರು ಮಂದಿ ವಯೋವೃದ್ಧರು, ವಿಕಲ ಚೇತನರು ಇಲ್ಲಿ ವಾಸವಾಗಿದ್ದಾರೆ. ಮಳೆಗಾಲದಲ್ಲಿ ನೆರೆ ಆವರಿಸಿದಾಗ ಇವರಿಗೆ ಅನಾರೋಗ್ಯವಾದರೆ ಆಸ್ಪತ್ರೆ ತಲುಪುವುದೇ ಹರಸಾಹಸ. ಹೀಗಾಗಿ ಈ ಭಾಗಕ್ಕೆ ಸಂಪರ್ಕ ರಸ್ತೆ ಅಗತ್ಯವಿದೆ. ಕೋಟ ಹೋಬಳಿಯ ಗ್ರಾಮೀಣ ಪ್ರದೇಶದಲ್ಲಿ ಎಲ್ಲಿಯೂ ಸರಕಾರಿ ಕ್ರೀಡಾಂಗಣಗಳಿಲ್ಲ. ಅಚ್ಲಾಡಿಗುಡ್ಡಿಯಲ್ಲಿ ಗೋಮಾಳವೊಂದನ್ನು ಹಲವು ವರ್ಷದಿಂದ ಕ್ರೀಡಾಂಗಣವಾಗಿ ಸ್ಥಳೀಯರು ಬಳಸುತ್ತಿದ್ದಾರೆ. ಸ್ಥಳೀಯರ ಒಪ್ಪಿಗೆ ಪಡೆದು ಈ ಸ್ಥಳದಲ್ಲಿ ಸುವ್ಯವಸ್ಥಿತ ಕ್ರೀಡಾಂಗಣ ಹಾಗೂ ಉದ್ಯಾನ ನಿರ್ಮಿಸಿದರೆ ಸುತ್ತಲಿನ ನಾಲ್ಕೈದು ಗ್ರಾ.ಪಂ.ಗಳಿಗೆ ಅನುಕೂಲವಾಗಲಿದೆ.

ಗ್ರಾಮದಲ್ಲಿ ಆರೋಗ್ಯ ಉಪ ಕೇಂದ್ರವೊಂದು ಇತ್ತೀಚೆಗೆ ಆರಂಭವಾಗಿದ್ದು ಇದಕ್ಕೆ ಸುವ್ಯವಸ್ಥಿತ ಸ್ವಂತ ಕಟ್ಟಡ ಒದಗಿಸಬೇಕಿದೆ. ಈ ಭಾಗದಲ್ಲಿ ಸಾಕಷ್ಟು ಹೈನುಗಾರರಿರುವುದರಿಂದ ಪಶು ಆಸ್ಪತ್ರೆ ಅಥವಾ ಉಪ ಕೇಂದ್ರ ಸೌಲಭ್ಯವನ್ನು ತುರ್ತಾಗಿ ಕಲ್ಪಿಸಬೇಕಿದೆ. ಕೃಷಿಕರಿಗೆ ಅಗತ್ಯವಿರುವ ಕೃಷಿ ಉಪಕರಣಗಳ ಮಳಿಗೆ, ಕೃಷಿ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಬೇಕಿದೆ. ಮಧುವನದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ವೊಂದರ ಶಾಖೆಯೂ ಬೇಕೆಂಬುದು ಜನರ ಬೇಡಿಕೆ. ಉದ್ಯೋಗ ಸೃಷ್ಟಿಸುವ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿದರೆ ಗ್ರಾಮೀಣ ಯುವಜನರಿಗೆ ಪ್ರಯೋಜವಾನವಾಗಲಿದೆ. ರಸ್ತೆ, ಮೂಲ ಸೌಕರ್ಯ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಹಂತ-ಹಂತವಾಗಿ ಈಡೇರಿಸಲಾಗುತ್ತಿದೆ. ಖಾಸಗಿ ಜಾಗದ ಸಮಸ್ಯೆಯಿಂದಾಗಿ ಕೆಲವು ಸಂಪರ್ಕ ರಸ್ತೆ ನಿರ್ಮಾಣಕ್ಕೆ ಹಿನ್ನಡೆಯಾಗಿದೆ. ಅವುಗಳಿಗೂ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಗ್ರಾ.ಪಂ. ಸ್ಥಳೀಯ ಸದಸ್ಯರಾದ ಚಂದ್ರಶೇಖರ್‌ ಶೆಟ್ಟಿ ಅವರು ತಿಳಿಸಿದ್ದಾರೆ.

ಅಚ್ಲಾಡಿ ಇತಿಹಾಸ

ಸಾವಿರಾರು ವರ್ಷಗಳ ಹಿಂದೆ ಘೋರ ಕಾನನ. ಮುನಿಯೋರ್ವ ಇಷ್ಟಾರ್ಥವನ್ನು ಸಿದ್ಧಿಸಿಕೊಳ್ಳಲು ಇಲ್ಲಿ ತಪಸ್ಸು ಮಾಡಿದನಂತೆ. ತಪ್ಪಸ್ಸು ಸಿದ್ಧಿಸಿದಾಗ ಸಂತೋಷದಿಂದ ತನ್ನ ಶಕ್ತಿಯನ್ನು ಧಾರೆ ಎರೆದು ಊರಿನ ಕಲ್ಯಾಣಕ್ಕಾಗಿ ಗ್ರಾಮದೇವ ಶ್ರೀ ಸಿದ್ಧಿವಿನಾಯಕನನ್ನು ಪ್ರತಿಷ್ಠಾಪಿಸಿದನಂತೆ. ವಿಜಯ ನಗರ ಕಾಲ ದಲ್ಲಿ ದೇಗುಲವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯ ಗಳಿಗೆಂದೇ ಭೂಮಿಯನ್ನು ಉಂಬಳಿ ಬಿಡಲಾಗಿತ್ತು. ಬಾರಕೂರು ಸೀಮೆಯ ರಾಜರು ಕ್ಷೇತ್ರದೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ವಡ್ಡರ್ಸೆ, ಬನ್ನಾಡಿ ಸಾಮಂತ ಅರಸರು ದೇಗುಲಕ್ಕೆ ನಿಷ್ಟರಾಗಿದ್ದರು. ಅನಂತರ ಜೈನ ವಂಶಸ್ಥರು ಇಲ್ಲಿ ನೆಲೆಸಿದ್ದರು ಎನ್ನುವುದು ದೇಗುಲದ ಜೀರ್ಣೋದ್ಧಾರ ಸಂದರ್ಭದ ಅಷ್ಟಮಂಗಳ ಪ್ರಶ್ನೆ ಹಾಗೂ ಶಾಸನದ ಆಧಾರ ದಲ್ಲಿ ತಿಳಿದು ಬಂದ ಮಾಹಿತಿ. ಹಾಗಾಗಿ ಗ್ರಾಮದಲ್ಲಿ ಶ್ರೀ ಸಿದ್ಧಿ ವಿನಾಯಕನಿಗೆ ಅಗ್ರಪೂಜೆ.

ಟೀಚರ್ಸ್ ಕಾಲನಿ !

ಅಚ್ಲಾಡಿ ಯಲ್ಲಿ ಅಡಾರ್‌ಬೆಟ್ಟು ಎನ್ನುವ ಪ್ರದೇಶವೊಂದಿದೆ. ಬಹುತೇಕ ಬಂಟ ಸಮುದಾಯದವರು ವಾಸವಾಗಿರುವ ಈ ಪ್ರದೇಶದ ಶೇ. 75ರಷ್ಟು ಪ್ರತಿ ಮನೆಯಲ್ಲಿ ಒಬ್ಬರು-ಇಬ್ಬರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರು ಮತ್ತು ಸೇವೆ ಸಲ್ಲಿಸಿದವರು.ಈ ಕಾರಣಕ್ಕೆ ಈ ಪ್ರದೇಶವನ್ನು ಟೀಚರ್ ಕಾಲೊನಿ ಎನ್ನುವುದುಂಟು.

ಗೇರು ಸಂಸರಣೆ ಪರ್ಯಾಯ ಉದ್ಯೋಗ

ಗ್ರಾಮದಲ್ಲಿ ಶೇ. 70ಕ್ಕೂ ಹೆಚ್ಚು ಮಂದಿ ಕಾರ್ಮಿಕ ವರ್ಗದವರಿದ್ದು ದಶಕಗಳ ಹಿಂದೆ ಕೃಷಿ ಕೆಲಸ, ಬೀಡಿ ಕಟ್ಟುವುದನ್ನು ನಂಬಿದ್ದರು. ಈಗ ಗೇರು ಬೀಜ ಸಂಸ್ಕರಣಾ ಘಟಕಗಳು ಹೆಚ್ಚಾಗಿ ಮಹಿಳೆಯರಿಗೆ ಉದ್ಯೋಗ ಒದಗಿಸುತ್ತಿವೆ.

ಅಭಿವೃದ್ಧಿಗೆ ಒತ್ತು ಅಗತ್ಯ:  ಅಗತ್ಯವಿದ್ದಲ್ಲಿ ಸಂಪರ್ಕ ರಸ್ತೆ, ಆರೋಗ್ಯ ಉಪಕೇಂದ್ರ, ಕ್ರೀಡಾಂಗಣ ಮುಂತಾದ ಸೌಕರ್ಯಗಳು ಲಭ್ಯವಾಗಬೇಕಿದೆ. –ಸುಶಾಂತ್‌ ಶೆಟ್ಟಿ, ಅಚ್ಲಾಡಿ, ಸ್ಥಳೀಯರು

– ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next