Advertisement

ಅಳಿವಿನಂಚಿನಲ್ಲಿ ಶತಮಾನಗಳ ಇತಿಹಾಸದ ಕೋಟ ಹೋರಿಪೈರು

12:33 PM Nov 14, 2018 | Team Udayavani |

ಕೋಟ: ಕೋಣಗಳ ವ್ಯಾಪಾರದ ಪ್ರಮುಖ ತಾಣವಾದ ಕೋಟ ಹೋರಿಪೈರಿಗೆ ಸಾಕಷ್ಟು ಇತಿಹಾಸವಿದ್ದು ಜಿಲ್ಲೆಯ ಅತಿದೊಡ್ಡ ಕೋಣಗಳ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಆಧುನಿಕತೆಯ ಹೊಡೆತ, ಮೂಲಸೌಕರ್ಯದ ಕೊರತೆ ಮುಂತಾದ ಕಾರಣಗಳಿಂದ ಪೈರು ಇದೀಗ ಅಳಿವಿನಂಚಿಗೆ ತಲುಪಿದೆ.

Advertisement

ಮೂರು ಶತಮಾನಗಳ ಇತಿಹಾಸ
ಇಲ್ಲಿನ ಪೈರಿಗೆ ಸುಮಾರು ಎರಡು-ಮೂರು ಶತಮಾನಗಳ ಇತಿಹಾಸವಿದೆ. ಮಹಾರಾಷ್ಟ್ರದ ಪಾಂಡರಾಪುರ, ಹೊಳೆಸಾಲು, ಬೈಲುಹೊಂಗಲ, ಅಕ್ಕಿ ಆಲೂರು, ಬೆಳಗಾವಿ, ಹುಬ್ಬಳ್ಳಿ ಮುಂತಾದ ಕಡೆಗಳ ಎಳೆಂಟು ತಂಡಗಳು ಸಾವಿರಾರು ಕೋಣಗಳೊಂದಿಗೆ ಇಲ್ಲಿಗೆ ಆಗಮಿಸಿ ರಾಷ್ಟ್ರೀಯ ಹೆದ್ದಾರಿಯ ಎರಡು ಕಡೆಗಳಲ್ಲಿ ನಡೆಸುತ್ತಿದ್ದರು. ಚತುಷ್ಪಥಗೊಂಡ ಅನಂತರ ಸ್ಥಳಾವಕಾಶವಿಲ್ಲವಾಗಿದೆ. ಹೀಗಾಗಿ ಎ.ಪಿ.ಎಂ.ಸಿ.ಗೆ ಸೇರಿದ ಗಾಂಧೀ ಮೈದಾನದಲ್ಲಿ ಇದೀಗ ಪೈರು ನಡೆಯುತ್ತಿದೆ ಹಾಗೂ ಜಿಲ್ಲೆಯ ಏಕೈಕ ಅತೀ ದೊಡ್ಡ ಕೋಣಗಳ ಪೈರು ಎನ್ನುವ ಹೆಗ್ಗಳಿಕೆ ಉಳಿಸಿಕೊಂಡಿದೆ.

ಹೊರಜಿಲ್ಲೆಗಳಿಂದ ಅಧಿಕ ಬೇಡಿಕೆ
ಇಲ್ಲಿನ ಕೋಣಗಳು ಉಳುಮೆ ಹಾಗೂ ಕಂಬಳಕ್ಕೆ ಹೆಚ್ಚು ಸೂಕ್ತ ಎನ್ನುವ ಕಾರಣಕ್ಕೆ ಹೊರ ಜಿಲ್ಲೆಯಲ್ಲಿ ಅಧಿಕ ಬೇಡಿಕೆ ಇದೆ. ದ.ಕ.,ಉತ್ತರ ಕನ್ನಡ, ಶಿವಮೊಗ್ಗ ಮುಂತಾದ ಕಡೆಗಳ ಕಂಬಳ ಕೋಣಗಳ ಯಜಮಾನರು ಮತ್ತು ಕೃಷಿಕರು ಇಲ್ಲಿಗೆ ಆಗಮಿಸಿ ವ್ಯಾಪಾರ ನಡೆಸುತ್ತಾರೆ.

ಸ್ಥಗಿತಗೊಂಡ ಪೈರು ಈ ಬಾರಿ ಮತ್ತೆ ಆರಂಭ
ಮೂಲಸೌಕರ್ಯಗಳಿಲ್ಲದೆ ಕಳೆದ ವರ್ಷ ಪೈರು ನಡೆದಿರಲಿಲ್ಲ. ಹೀಗಾಗಿ ಇತಿಹಾಸದ ಪುಟ ಸೇರಿತು ಎನ್ನುವ ಭಾವನೆ ಸ್ಥಳೀಯರಲ್ಲಿತ್ತು. ಆದರೆ ಈ ಬಾರಿ ಕೋಣಗಳ ಮಾಲಕರ ಬೇಡಿಕೆಯ ಮೇರೆಗೆ ಪುನರಾರಂಭಿಸಲಾಗಿದೆ.

ಬೇಡಿಕೆ ಉಳಿದಿದೆ
ಪೈರಿಗೆ ಬೇಡಿಕೆ ಇದೆ ಎನ್ನುವುದಕ್ಕೆ ಇಲ್ಲಿ ಪ್ರತಿ ವರ್ಷ ಇಲ್ಲಿ 300ಕ್ಕೂ ಹೆಚ್ಚು ಕೋಣಗಳು ಮಾರಾಟವಾಗುತ್ತಿರುವುದು ಸಾಕ್ಷಿಯಾಗಿದೆ. ಶೇಂಗಾ ಬಿತ್ತನೆ, ಉಳುಮೆ, ಕಂಬಳ ಹಾಗೂ ಹಟ್ಟಿ ಗೊಬ್ಬರಕ್ಕಾಗಿ ಕೋಣಗಳನ್ನು ಬಳಸಿಕೊಳ್ಳಲಾಗುತ್ತದೆ.

Advertisement

ಮೂಲಸೌಕರ್ಯ ಅಗತ್ಯ 
ಇದೀಗ ಹೋರಿಪೈರು ನಡೆಯುತ್ತಿರುವ ಸ್ಥಳದಲ್ಲಿ ಸಮರ್ಪಕವಾದ ಸೂರು, ನೀರು, ವ್ಯಾಪಾರಿಗಳಿಗೆ ಉಳಿಯುವುದಕ್ಕೆ ವ್ಯವಸ್ಥೆ ಇಲ್ಲ. ಹೀಗಾಗಿ ಎ.ಪಿ.ಎಂ.ಸಿ.ಗೆ ಸೇರಿದ ಈ ಜಾಗದಲ್ಲಿ ಇಲಾಖೆಯವರು ಸೂಕ್ತ ಮಾರುಕಟ್ಟೆ ನಿರ್ಮಿಸಿ, ಮೂಲಸೌಕರ್ಯ ಕಲ್ಪಿಸಿದಲ್ಲಿ ಪೈರಿನ ಉಳಿವು ಸಾಧ್ಯವಿದೆ. ಆದರೆ ಈ ಸ್ಥಳವನ್ನು ಸ್ಥಳೀಯರು ಸಾಂಸ್ಕೃತಿಕ ಹಾಗೂ ಕ್ರೀಡಾಚಟುವಟಿಕೆಗೆ ಬಳಸಿಕೊಳ್ಳುತ್ತಿರುವುದರಿಂದ ವಿರೋಧ ವ್ಯಕ್ತವಾಗಬಹುದು ಎನ್ನುವ ಅನುಮಾನವಿದೆ. ಆದರೆ ಮಾರುಕಟ್ಟೆಗೆ ಅಗತ್ಯವಿರುವಷ್ಟೇ ಸ್ಥಳವನ್ನು ಬಳಸಿಕೊಂಡು ಬಾಕಿ ಉಳಿದ ಜಾಗದಲ್ಲಿ ಸಾಮಾಜಿಕ ಚಟುವಟಿಕೆಗೆ ಮೀಸಲಿರಿಸಲು ಅವಕಾಶ ಕೂಡ ಇದೆ.

ಗ್ರಾಹಕರ ಒತ್ತಾಯಕ್ಕಾಗಿ ಪೈರು ಆರಂಭಿಸಿದ್ದೇವೆ
ಸರಿಯಾದ ಮೂಲಸೌಕರ್ಯ ಇಲ್ಲದಿರುವುದರಿಂದ ಪೈರು ನಡೆಸುವುದು ಕಷ್ಟವಾಗುತ್ತಿದೆ. ಹೀಗಾಗಿ ಕಳೆದ ಬಾರಿ ಕೋಣ ತಂದಿಲ್ಲ. ಈ ಬಾರಿ ಗ್ರಾಹಕರ ಬೇಡಿಕೆ ಮೇರೆಗೆ ಪೈರು ಆರಂಭಿಸಿದ್ದೇವೆ ಹಾಗೂ 70ಕ್ಕೂ ಹೆಚ್ಚು ಕೋಣಗಳು ಈಗಾಗಲೇ ಮಾರಾಟವಾಗಿದೆ. ಮೂಲಸೌಕರ್ಯ ಕಲ್ಪಿಸಿದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಪೈರು ಮುಂದುವರಿಸಬಹುದು.
ಬುಡಾನ್‌ ಸಾಹೇಬ್‌, ಅಕ್ಕಿಅಲೂರು, ಪೈರಿನ ಮಾಲಕ

ಸರಕಾರದ ಮಟ್ಟದಲ್ಲಿ ಅಭಿವೃದ್ಧಿ ಸಾಧ್ಯ
ಕೋಟದಲ್ಲಿ ಎ.ಪಿ.ಎಂ.ಸಿ.ಗೆ ಸೇರಿದ ಜಾಗವನ್ನು ಅಭಿವೃದ್ಧಿಗೊಳಿಸುವ ಯೋಜನೆ ಈ ಹಿಂದೆ ಹಾಕಿಕೊಳ್ಳಲಾಗಿತ್ತು. ಆದರೆ ಸರಿಯಾದ ಸಹಕಾರ ಸಿಗಲಿಲ್ಲ. ಸ್ಥಳೀಯ ಕೃಷಿಕರು ಹಾಗೂ ಜನಪ್ರತಿನಿಧಿಗಳು ಪೈರು ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ಮಾರುಕಟ್ಟೆಗಾಗಿ ಬೇಡಿಕೆ ಸಲ್ಲಿಸಿ ಹೋರಾಟ ನಡೆಸಿದಲ್ಲಿ ಸರಕಾರದ ಮಟ್ಟದಲ್ಲಿ ಈಡೇರುವ ಸಾಧ್ಯತೆ ಇದೆ.
– ರಾಮಕೃಷ್ಣ ನಾಯಕ್‌, ಸಹಾಯಕ
ನಿರ್ದೇಶಕರು ಎ.ಪಿ.ಎಂ.ಸಿ. ಉಡುಪಿ

ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next