Advertisement

ಹಲವು ದಶಕಗಳ ಸಮಸ್ಯೆಗೆ ಪರಿಹಾರ ಮರೀಚಿಕೆ

08:46 PM Jul 15, 2021 | Team Udayavani |

ಕೋಟ: ಕೋಟ ಹೋಬಳಿಯ ಗಿಳಿಯಾರು, ಹರ್ತಟ್ಟು, ಮೂಡುಗಿಳಿಯಾರು ಮತ್ತು ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯ  ಕಾವಡಿ, ವಡ್ಡರ್ಸೆ, ಮಾನಂಬಳ್ಳಿ ಮುಂತಾದ ಕಡೆ ಹೊಳೆಯಲ್ಲಿ ಹೂಳು ತುಂಬಿರುವುದರಿಂದ  ಪ್ರತೀ ವರ್ಷ ಮಳೆಗಾಲದಲ್ಲಿ ನೀರಿನ ಹರಿವಿಗೆ ಸಮಸ್ಯೆಯಾಗಿ, ನೆರೆ ನೀರು ಕೃಷಿ ಭೂಮಿಗೆ ಲಗ್ಗೆ ಇಟ್ಟು ಅಪಾರ ಬೆಳೆ ಹಾನಿಯಾಗುತ್ತಿದೆ.

Advertisement

ಹೊಳೆಯಲ್ಲಿ ಹೂಳು, ಪೊದೆಗಳು ಆವರಿಸುವುದರಿಂದ ನೀರಿನ ಹರಿವಿಗೆ ಅಡ್ಡಿಯಾಗಿ ಈ ಸಮಸ್ಯೆ ಉಂಟಾಗುತ್ತಿದ್ದು  ನೂರಾರು ಎಕ್ರೆ ಜಮೀನಿನ ಭತ್ತದ ಬೆಳೆ ನಾಶವಾಗುತ್ತಿದೆ.

ಹಲವು ಬಾರಿ ಮನವಿ :

ಸ್ಥಳೀಯ ರೈತರು ಹೊಳೆಯ ಹೂಳೆತ್ತುವ ಸಲುವಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಗ್ರಾಮಸಭೆ, ವಾರ್ಡ್‌ ಸಭೆಗಳಲ್ಲೂ ಗಮನಸೆಳೆದಿದ್ದಾರೆ. ಆದರೆ ಇದುವರೆಗೆ ಯಾವುದೇ ಪ್ರಯೋ ಜನವಾಗಿಲ್ಲ. ಈ ಬಾರಿ ಕೂಡ ನೂರಾರು ಎಕ್ರೆ ಜಮೀನಿನಲ್ಲಿದ್ದ ಭತ್ತದ ಬೆಳೆ ನೀರಿನಿಂದ ಆವೃತವಾಗಿ ನಾಶವಾಗುತ್ತಿದೆ.

ಶಾಶ್ವತ ಪರಿಹಾರ ನೀಡಿ:

Advertisement

ಬೆಳೆ ಹಾನಿಯಾದಾಗ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರೆ ಎಕ್ರೆಗೆ ಒಂದೆರಡು ಸಾವಿರ ರೂ. ಪರಿಹಾರಧನ ಸಿಗುತ್ತದೆ. ಆದರೆ ಇದನ್ನು ಪಡೆಯಬೇಕಾದರೆ ಸಾಕಷ್ಟು ಹೋರಾಟ ನಡೆಸಬೇಕಿದೆ. ಆದ್ದರಿಂದ ಪರಿಹಾರ ಮೊತ್ತ ಬೇಡ. ಶಾಶ್ವತ ಪರಿಹಾರವನ್ನು ನೀಡಿ ಎನ್ನುವುದು ಸ್ಥಳೀಯ ರೈತರ ಮನವಿಯಾಗಿದೆ.  ಇದೇ ಕಾರಣಕ್ಕೆ ಬೆಳೆಹಾನಿಗೊಳಗಾದ ಇಲ್ಲಿನ ಬಹುತೇಕ ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವುದನ್ನೇ ಬಿಟ್ಟಿದ್ದಾರೆ.

ಇನ್ನಾದರೂ ಎಚ್ಚೆತ್ತುಕೊಳ್ಳಿ ;

ಹೊಳೆಯ ಹೂಳೆತ್ತಲು ಪ್ರತ್ಯೇಕವಾದ ಅನುದಾನ ಲಭ್ಯವಿಲ್ಲ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಪ್ರತಿವರ್ಷ ರೈತರ ಬೇಡಿಕೆಯನ್ನು ತಿರಸ್ಕರಿಸಲಾಗುತ್ತಿದೆ. ಆದರೆ ಈ ಬಾರಿ ಜಿಲ್ಲೆಗೆ ಭೇಟಿ ನೀಡಿದ ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಾಮಿ ಅವರು ನಬಾರ್ಡ್‌ ಮೂಲಕ ಹೊಳೆಗಳ ಅಭಿವೃದ್ಧಿಗೆ ಅನುದಾನ ಮೀಸಲಿಡುವುದಾಗಿ ತಿಳಿಸಿದ್ದಾರೆ.

ಆದ್ದರಿಂದ ಸಂಬಂಧಪಟ್ಟ  ಜನಪ್ರತಿನಿಧಿಗಳು ಎಚ್ಚೆತ್ತು ನಬಾರ್ಡ್‌ ಅನುದಾನದಲ್ಲಿ ಹೊಳೆ ಅಭಿವೃದ್ಧಿಗೊಳಿಸುವ ಕುರಿತು ಯೋಚಿಸಬೇಕಿದೆ.

ಗ್ರಾ.ಪಂ. ಮಟ್ಟದಿಂದ ಹಿಡಿದು ಸಚಿವರ ತನಕ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಇದುವರೆಗೂ ಏನೂ ಪ್ರಯೋಜನವಾಗಿಲ್ಲ. ರೈತ ಈ ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ ನಿಜವಾಗಿಯೂ ರೈತರ ಕಷ್ಟ, ಬವಣೆ ಕೇಳುವವರಿಲ್ಲ.  ನಮ್ಮ ಜನಪ್ರತಿನಿಧಿಗಳು ಯಾವಾಗ ಕಷ್ಟಕ್ಕೆ ಸ್ಪಂದಿಸುತ್ತಾರೆ ಕಾದು  ನೋಡುತ್ತಿದ್ದೇವೆ. ಸುಧಾಕರ್‌ ಪೂಜಾರಿ,   ಸ್ಥಳೀಯ ರೈತ

ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಹೊಳೆಯ ಹೂಳೆತ್ತುವ ಕುರಿತು ರೈತರ ಮನವಿಯನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗುವುದು. ರಾಜು, ಕಂದಾಯ ಅಧಿಕಾರಿಗಳು, ಕೋಟ

Advertisement

Udayavani is now on Telegram. Click here to join our channel and stay updated with the latest news.

Next