Advertisement

ಕೋಟ ಗ್ರಾ.ಪಂ.: ಬಿಗಡಾಯಿಸಿದ ನೀರಿನ ಸಮಸ್ಯೆ

09:52 PM Mar 26, 2019 | Team Udayavani |

ಕೋಟ: ಕೋಟ ಗ್ರಾ.ಪಂ. ವ್ಯಾಪ್ತಿಯ ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ನೂರಾರು ಕುಟುಂಬಗಳಿಗೆ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಟ್ಯಾಂಕರ್‌ ನೀರು ಸರಬರಾಜಿನ ಸಲುವಾಗಿ ಗ್ರಾ.ಪಂ. ಟೆಂಡರ್‌ ಕರೆದಿದೆ. ಆದರೆ ಯಾವುದೇ ಗುತ್ತಿಗೆದಾರರು ಟೆಂಡರ್‌ಗೆ ಉಮೇದುವಾರಿಕೆ ಸಲ್ಲಿಸಿಲ್ಲ. ಹೀಗಾಗಿ ನೀರು ಸರಬರಾಜು ಇನ್ನಷ್ಟು ವಿಳಂಬವಾಗುತ್ತಿದೆ.

Advertisement

ಎಲ್ಲೆಲ್ಲಿ ಸಮಸ್ಯೆ
ಗಿಳಿಯಾರು ಗ್ರಾಮದ ಹೊನ್ನಾರಿ, ಮೂಡು ಗಿಳಿಯಾರು ಕಾಲನಿ ಹಾಗೂ ಮಣೂರು ಗ್ರಾಮದ ಪಡುಕರೆ, ಕದ್ರಿಕಟ್ಟು ಮುಂತಾದ ಭಾಗದ 100ಕ್ಕೂ ಹೆಚ್ಚು ಮನೆಗಳಿಗೆ ನೀರಿನ ಸಮಸ್ಯೆ ಇದೆ.

ಬಾವಿ, ಬೋರ್‌ವೆಲ್‌ನಲ್ಲಿ ನೀರು ಖಾಲಿ
ಗ್ರಾ.ಪಂ. ವ್ಯಾಪ್ತಿಯಲ್ಲಿ ಹಿಂದಿನ ವರ್ಷಗಳಲ್ಲಿ ದೊಡ್ಡ ಪ್ರಮಾಣದ ನೀರಿನ ಸಮಸ್ಯೆ ಇರಲಿಲ್ಲ. ಆದರೆ ಈ ಬಾರಿ ಮಾರ್ಚ್‌ ತಿಂಗಳಿನಲ್ಲೇ ಅಂತರ್‌ಜಲದ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಬಾವಿ, ಬೋರ್‌ವೆಲ್‌ನಲ್ಲಿ ನೀರು ಬತ್ತಿ ಹೋಗಿದೆ. ಇಲ್ಲಿ ಒಟ್ಟು 8ಸರಕಾರಿ ಬಾವಿಗಳಿದ್ದು, ಇದೀಗ ಕೇವಲ 1ಬಾವಿಯಲ್ಲಿ ಮಾತ್ರ ಸ್ವಲ್ಪ ಪ್ರಮಾಣದ ನೀರಿದೆ.

ಗ್ರಾಮಸ್ಥರಿಂದ ನೀರಿಗಾಗಿ ಬೇಡಿಕೆ
ಗ್ರಾ.ಪಂ. ವ್ಯಾಪ್ತಿಯ ಬಹುತೇಕ ಕಾಲನಿಗಳಿಗೆ ಪಂಚಾಯತ್‌ ನೀರು ಆಧಾರವಾಗಿದೆ. ಆದ್ದರಿಂದ ಆದಷ್ಟು ಶೀಘ್ರ ಟ್ಯಾಂಕರ್‌ ಮೂಲಕ ನೀರಿನ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಹಾಗೂ ಗ್ರಾ.ಪಂ.ಗೆ ಮನವಿ ಮಾಡುತ್ತಿದ್ದಾರೆ.

ಜಿ.ಪಿ..ಎಸ್‌. ಕಡ್ಡಾಯ: ಟೆಂಡರ್‌ಗೆ ನಿರಾಸಕ್ತಿ
ಕೋಟದಲ್ಲಿ ಟ್ಯಾಂಕರ್‌ ನೀರು ಪೂರೈಕೆಗೆ ಇತ್ತೀಚೆಗೆ ಟೆಂಡರ್‌ ಕರೆಯಲಾಗಿತ್ತು ಹಾಗೂ ಟೆಂಡರ್‌ಗೆ ಉಮೇದುವಾರಿಕೆ ಸಲ್ಲಿಸಲು ಮಾ. 25 ಕೊನೆಯ ದಿನವಾಗಿತ್ತು. ಆದರೆ ಇದುವರೆಗೆ ಒಂದೇ-ಒಂದು ಉಮೇದುವಾರಿಕೆ ಸಲ್ಲಿಕೆಯಾಗಿಲ್ಲ. ಹೀಗಾಗಿ ನೀರು ಪೂರೈಕೆ ಗ್ರಾ.ಪಂ.ಗೆ ತಲೆನೋವಾಗಿದೆ.

Advertisement

ಕನಿಷ್ಠ ಮೊತ್ತ ನಿಗದಿಪಡಿಸಲಾಗಿದೆ ಮತ್ತು ಜಿ.ಪಿ.ಎಸ್‌. ಕಡ್ಡಾಯವಾಗಿ ಅಳವಡಿಸಬೇಕು ಎನ್ನುವ ನಿಯಮ ಮಾಡಿರುವುದರಿಂದ ಈ ಸಾಧನಕ್ಕೆ 15 ಸಾವಿರ ರೂ. ವರೆಗೆ ಖರ್ಚು ತಗಲುತ್ತದೆ. ಆದ್ದರಿಂದ ಇಲಾಖೆಯ ನಿಯಮಗಳನ್ನು ಪಾಲಿಸಿ ಇಷ್ಟು ಕನಿಷ್ಠ ಮೊತ್ತಕ್ಕೆ ನೀರು ಸರಬರಾಜು ಮಾಡಲು ಸಾಧ್ಯವಿಲ್ಲವೆಂದು ಗುತ್ತಿಗೆದಾರರು ಅಭಿಪ್ರಾಯಪಡುತ್ತಿದ್ದು ಟೆಂಡರ್‌ಗೆ ಉಮೇದ್ವಾರಿಕೆ ಸಲ್ಲಿಸುತ್ತಿಲ್ಲ ಎನ್ನಲಾಗಿದೆ. ಇದೇ ರೀತಿಯ ಸಮಸ್ಯೆ ಹಲವು ಗ್ರಾ.ಪಂ. ಗಳಲ್ಲಿದೆ. ಕೆಲವು ಕಡೆ ಟೆಂಡರ್‌ಗೆ ಉಮೇದುವಾರಿಕೆ ಸಲ್ಲಿಕೆಯಾಗಿಲ್ಲ, ಮತ್ತೆ ಹಲವು ಕಡೆ ಟೆಂಡರ್‌ ಕರೆದು ಒಪ್ಪಂದ ನಡೆದಿದ್ದರು ನೀರು ಪೂರೈಸಲು ಯಾರೂ ಮುಂದೆ ಬರುತ್ತಿಲ್ಲ.

ಶಾಶ್ವತ ಯೋಜನೆಗಳತ್ತ ಗಮನಹರಿಸಬೇಕಿದೆ
ಪ್ರತಿವರ್ಷ ಅಂತರ್‌ಜಲ ಮಟ್ಟ ಕುಸಿಯುತ್ತಿದೆ. ಹೀಗಾಗಿ ಮುಂದೆ ಕೇವಲ ಬಾವಿ, ಬೋರ್‌ವೆಲ್‌ಗ‌ಳ ನೀರು ಮೆಚ್ಚಿಕೊಂಡಿರೆ ಪ್ರತಿವರ್ಷ ಸಮಸ್ಯೆ ಇನ್ನಷ್ಟು ಹೆಚ್ಚಳಿದೆ. ಹೀಗಾಗಿ ಗಿಳಿಯಾರು ಭಾಗದಲ್ಲಿ ಹರಿಯುವ ಹೊಳೆಗೆ ಅಣೆಕಟ್ಟು ನಿರ್ಮಿಸಿ ನೀರನ್ನು ಶುದ್ಧಿಗೊಳಿಸಿ ಕುಡಿಯಲು ವಿತರಿಸಿದರೆ ಇಡೀ ಗ್ರಾ.ಪಂ. ವ್ಯಾಪ್ತಿಯ ಸಮಸ್ಯೆ ಪರಿಹಾರವಾಗಲಿದೆ. ಆದ್ದರಿಂದ ಇಂತಹ ದೂರದೃಷ್ಟಿಯ ಶಾಶ್ವತ ಯೋಜನೆಗಳತ್ತ ಗ್ರಾ.ಪಂ. ಗಮನಹರಿಸಬೇಕಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಜಿಲ್ಲಾಧಿಕಾರಿಗೆ ಮನವಿ
ನಮ್ಮ ಪಂಚಾಯತ್‌ ವ್ಯಾಪ್ತಿಯ ನಾಲ್ಕೈದು ಕಡೆಗಳಲ್ಲಿ ವಿಫರೀತ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಟೆಂಡರ್‌ ಕರೆಯಲಾಗಿತ್ತು. ಆದರೆ ಯಾರು ಕೂಡ ಉಮೇದುವಾರಿಕೆ ಸಲ್ಲಿಸಿಲ್ಲ. ಜನರಿಗೆ ತುರ್ತಾಗಿ ನೀರು ಸರಬರಾಜು ಮಾಬೇಕಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮುಂದಿನ ಕ್ರಮಕೈಗೊಳ್ಳಲಿದ್ದೇವೆ.
-ಸುರೇಶ್‌, ಪಿ.ಡಿ.ಒ. ಕೋಟ

ರಾಜೇಶ ಗಾಣಿಗ ಅಚ್ಲ್ಯಾಡಿ

Advertisement

Udayavani is now on Telegram. Click here to join our channel and stay updated with the latest news.

Next