ಕೋಟ: ಶಿರಿಯಾರ ಗ್ರಾ.ಪಂ. ವ್ಯಾಪ್ತಿಯ ಕಲ್ಮರ್ಗಿಯಲ್ಲಿರುವ ರೈಸ್ ಮಿಲ್ ಮೇಲೆ ಸೋಮವಾರ ಅಪರಾಹ್ನ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಅಧಿಕಾರಿಗಳೊಂದಿಗೆ ದಿಢೀರ್ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಸಾಗಾಟ ನಡೆಸಲು ಯತ್ನಿಸುತ್ತಿದ್ದ ಅನ್ನಬಾಗ್ಯ ಯೋಜನೆಯ ಸುಮಾರು 600 ಕ್ವಿಂಟಾಲ್ ಗೂ ಅಧಿಕ ತೂಕದ ಅಕ್ಕಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಅಕ್ರಮದ ಕರಿತು ಕಳೆದ ಒಂದು ತಿಂಗಳಿಂದ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಽಕಾರಿಗಳೊಂದಿಗೆ ಖಚಿತ ಮಾಹಿತಿ ಸಂಗ್ರಹಿಸಿದ್ದರು. ವಶಪಡಿಸಿಕೊಂಡ ಅಕ್ಕಿಯ ಮೌಲ್ಯ ಸುಮಾರು 16.5 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಈ ಸಂದರ್ಭ 6 ಲಾರಿ, ಎರಡು 407 ವಾಹನ, ಒಂದು ಟಾಟಾ 909 ಹಾಗೂ ಮಾರುತಿ ಇಕೋ ವಾಹನ ಮತ್ತು 3 ಲಾರಿ ಚಾಲಕರು ಮತ್ತು ಕ್ಲೀನರ್ ಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಫಲಾನುಭವಿಗಳಿಂದ ಖರೀದಿಸಿ ಅದಕ್ಕೆ ಪಾಲೀಶ್ ಮಾಡಿ ಹೊರ ರಾಜ್ಯ, ಹೊರ ಜಿಲ್ಲೆಗಳಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತಿತ್ತು. ಇದೀಗ ಅಕ್ಕಿ ಮಿಲ್ ಸೀಜ್ ಮಾಡಲಾಗಿದ್ದು ಗಿರಿಣಿಯ ಗೋಡೌನ್ ನಲ್ಲಿ ಇನ್ನಷ್ಟು ಪ್ರಮಾಣದ ಅಕ್ರಮ ದಾಸ್ತಾನಿರುವ ಸಾಧ್ಯತೆ ಇದ್ದು ಮಂಗಳವಾರ ಈ ಕುರಿತು ಹೆಚ್ಚಿನ ತನಿಖೆ ನಡೆಯಲಿದೆ.
ಅಕ್ರಮದ ಕುರಿತು ಮಾಹಿತಿ ನೀಡಿ :- ಬಡವರಿಗೆ ನೀಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನಿರಿಸುವುದು, ಮಾರಾಟ ಮಾಡುವ ಜಾಲ ಜಿಲ್ಲೆಯಲ್ಲಿ ಸಕ್ರಿಯವಾಗಿದ್ದು, ಕಳೆದ ತಿಂಗಳು ಕುಂದಾಪುರ ತಾಲೂಕಿನಲ್ಲಿ ಈ ರೀತಿಯ ಜಾಲವನ್ನು ಪತ್ತೆ ಮಾಡಲಾಗಿದೆ. ಜಿಲ್ಲೆಯಲ್ಲಿರುವ ಇಂತಹ ಜಾಲಗಳನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಸಕಲ ಪ್ರಯತ್ನ ಮಾಡುತ್ತಿದ್ದು, ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ಇದ್ದಲ್ಲಿ ಜಿಲ್ಲಾಡಳಿತಕ್ಕೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ದಾಳಿಯಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕ ಗಜೇಂದ್ರ, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೌರಯ್ಯ, ಬ್ರಹ್ಮಾವರ ವೃತ್ತನಿರೀಕ್ಷಕ ಆನಂತಪದ್ಮನಾಭ, ಕೋಟ ಠಾಣೆ ಕೈಂ ವಿಭಾಗದ ಉಪನಿರೀಕ್ಷಕಿ ಪುಷ್ಪಾ, ಆಹಾರ ನಿರೀಕ್ಷಕರಾದ ಪಾರ್ವತಿ, ಕುಂದಾಪುರ ವಿಭಾಗದ ಸುರೇಶ್, ಶಿರಿಯಾರ ಗ್ರಾಮಲೆಕ್ಕಾಧಿಕಾರಿ ಶರತ್ ಶೆಟ್ಟಿ, ಕೃಷ್ಣ ಮರಕಾಲ ಮುಂತಾದವರು ಉಪಸ್ಥಿತರಿದ್ದರು. ಮುಂತಾದವರು ಉಪಸ್ಥಿತರಿದ್ದರು.