ನವದೆಹಲಿ:ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರುವರಿ 14ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇದೀಗ ಪುಲ್ವಾಮಾ ಹುತಾತ್ಮ ಯೋಧರ ಕುಟುಂಬಕ್ಕೆ 110 ಕೋಟಿ ರೂಪಾಯಿ ಹಣ ಕೊಡುವುದಾಗಿ ರಾಜಸ್ಥಾನದ ಮೂಲದ ವ್ಯಕ್ತಿಯೊಬ್ಬರು ನಿರ್ಧರಿಸಿದ್ದಾರೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಪ್ರಧಾನಮಂತ್ರಿ ರಾಷ್ಟ್ರೀಯ ವಿಪತ್ತು ನಿಧಿಗೆ ಹುತಾತ್ಮರ ಯೋಧರ ಹೆಸರಿನಲ್ಲಿ 110 ಕೋಟಿ ರೂಪಾಯಿ ಹಣ ನೀಡುವುದಾಗಿ 44 ವರ್ಷದ ಮುರ್ತಾಜಾ ಎ ಹಮೀದ್ ತಿಳಿಸಿದ್ದಾರೆ. ಆದಾಯ ತೆರಿಗೆ ಕಟ್ಟಿದ ಹಣ ಇದಾಗಿದೆ ಎಂದು ಹೇಳಿದ್ದಾರೆ. ಮುರ್ತಾಜಾ ಮೂಲತಃ ರಾಜಸ್ಥಾನದ ಕೋಟಾದವರು, ಸದ್ಯ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಸಂಶೋಧಕರಾಗಿ, ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿರುವ ಮುರ್ತಾಜಾ ಅವರು ಹುಟ್ಟು ಕುರುಡರಾಗಿದ್ದಾರೆ, ಆದರೂ ಅಂಗವೈಕಲ್ಯವನ್ನು ಮೆಟ್ಟಿ ಸಾಧನೆ ಮಾಡಿರುವುದಾಗಿ ವರದಿ ತಿಳಿಸಿದೆ.
ಪುಲ್ವಾಮಾ ಯೋಧರ ಕುಟುಂಬಕ್ಕೆ ದೇಣಿಗೆ ನೀಡುವುದಾಗಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಇ ಮೇಲ್ ಮೂಲಕ ಮುರ್ತಾಜ್ ಹಮೀದ್ ಅವರು ಸಂದೇಶ ರವಾನಿಸಿದ್ದು, ರಿಲೀಫ್ ಫಂಡ್ ನ ಉಪಕಾರ್ಯದರ್ಶಿ ಅಗ್ನಿ ಕುಮಾರ್ ದಾಸ್ ಅವರು ಕರೆ ಮಾಡಿ ಅವರ ವಿವರವನ್ನು ಕಳುಹಿಸಿಕೊಡುವಂತೆ ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.