Advertisement

ಕೋಟ ಅಮೃತೇಶ್ವರೀ ಮೇಳ ಪ್ರಥಮ ದೇವರ ಸೇವೆ: ಪ್ರಶಸ್ತಿ ಪ್ರದಾನ

11:23 PM Nov 20, 2019 | Sriram |

ಕೋಟ: ಶ್ರೀಅಮೃತೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಕೋಟ ಇದರ ಪ್ರಥಮ ದೇವರ ಸೇವೆ ಹಾಗೂ ಯಕ್ಷ ಕಿನ್ನರ ಕೋಟ ವೈಕುಂಠ ಪ್ರಶಸ್ತಿ ಮತ್ತು ಪ್ರಾಚಾರ್ಯ ದಿ|ನಾರಾಯಣಪ್ಪ ಉಪ್ಪೂರು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನ.18ರಂದು ದೇಗುಲದ ವಠಾರದಲ್ಲಿ ನಡೆಯಿತು.

Advertisement

ಸಾಲಿಗ್ರಾಮ ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಮಾತನಾಡಿ, ಅಮೃತೇಶ್ವರೀ ಮೇಳ ಸಾವಿರಾರು ಕಲಾವಿದರಿಗೆ ತವರುಮನೆ ಇದ್ದಂತೆ. ಇಲ್ಲಿ ಅಭ್ಯಾಸ ಮಾಡಿದವರು ಎತ್ತರದ ಸ್ಥಾನಕ್ಕೇರಿದ್ದಾರೆ ಎಂದರು ಹಾಗೂ ಇಂದು ಪ್ರಶಸ್ತಿಗೆ ಭಾಜನರಾಗುತ್ತಿರುವ ಸುಬ್ರಹ್ಮಣ್ಯ ಧಾರೇಶ್ವರ ಮತ್ತು ಮುರೂರು ವಿಷ್ಣು ಭಟ್‌ ಶ್ರೇಷ್ಠ ಕಲಾವಿದರು ಎಂದರು.

ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಅಮೃತೇಶ್ವರೀ ದೇವಿ ಕೇವಲ ಹಲವು ಮಕ್ಕಳ ತಾಯಿಯಲ್ಲ; ಹಲವು ಕಲಾವಿದರಿಗೂ ಆಕೆ ತಾಯಿಯಾಗಿದ್ದಾಳೆ. ಬಡಗುತಿಟ್ಟಿನ ಗಜಗಟ್ಟಿ ಮೇಳದಲ್ಲಿ ಅಮೃತೇಶ್ವರೀ ಅಗ್ರಪಂಕ್ತಿಯಲ್ಲಿದೆ ಎಂದರು.

ಈ ಸಂದರ್ಭ ಪ್ರಸಿದ್ಧ ಸ್ತ್ರೀವೇಷಧಾರಿ ದಿ| ಕೋಟ ವೈಕುಂಠ ಸ್ಮರಣಾರ್ಥ ಅವರ ಪುತ್ರ ಉಮೇಶರಾಜ್‌ ಬೆಂಗಳೂರು ಸ್ಥಾಪಿಸಿದ ಯಕ್ಷನಿಧಿಯಿಂದ ಕೊಡಮಾಡುವ ಯಕ್ಷಕಿನ್ನರ ಪ್ರಶಸ್ತಿಯನ್ನು ಮುರೂರು ವಿಷ್ಣು ಭಟ್‌ಗೂ ಹಾಗೂ ದೇಗುಲದ ವತಿಯಿಂದ ಕೊಡಮಾಡುವ ಯಕ್ಷ ಪ್ರಾಚಾರ್ಯ ದಿ|ನಾರಾಯಣಪ್ಪ ಉಪ್ಪೂರ ಪ್ರಶಸ್ತಿಯನ್ನು ಸುಬ್ರಹ್ಮಣ್ಯ ಧಾರೇಶ್ವರ ಅವರಿಗೂ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪುರಸ್ಕೃತರು ಮೇಳದೊಂದಿಗೆ ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿ ಗೌರವಕ್ಕಾಗಿ ಧನ್ಯವಾದ ಸಲ್ಲಿಸಿದರು.

Advertisement

ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ್‌ ಸಿ.ಕುಂದರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಾಹಿತಿ ಎ.ಎಸ್‌.ಎನ್‌. ಹೆಬ್ಟಾರ್‌, ಕೋಟ ವೈಕುಂಠರ ಪುತ್ರ ಉಮೇಶ್‌ರಾಜ್‌ ಹಾಗೂ ದೇಗುಲದ ವ್ಯವಸ್ಥಾಪನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ವ್ಯವಸ್ಥಾಪನ ಸಮಿತಿಯ ಸದಸ್ಯ ಚಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಗುರುಮಾತು ನೆನೆದು ರಂಗವೇರದ ಧಾರೇಶ್ವರ
ಕಲಾವಿದರಿಗೆ ಸೂತಕಾದಿಗಳು ಇರುವಾಗ ರಂಗಸ್ಥಳವೇರಬಾರದು ಎಂದು ಗುರುಗಳಾದ ಉಪ್ಪೂರರು ಯಾವಾಗಲೂ ಹೇಳುತ್ತಿದ್ದರು. ಆದರೆ ಅವರ ಹೆಸರನಲ್ಲಿ ಇಂದು ಪ್ರಶಸ್ತಿ ಸ್ವೀಕರಿಸಬೇಕಾದ ನಾನು ಕೂಡ ಇಂದು ಸೂತಕದಲ್ಲಿದ್ದೇನೆ. ಆದ್ದರಿಂದ ಗುರುಮಾತಿಗೆ ಕಟ್ಟುಬಿದ್ದು ರಂಗಸ್ಥಳವೇರುವುದಿಲ್ಲ ಎಂದು ಸುಬ್ರಹ್ಮಣ್ಯ ಧಾರೇಶ್ವರ ಕೆಳಗಡೆಯೇ ಕುಳಿತು ಪ್ರಶಸ್ತಿ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next