Advertisement

Kota: ಬಡವರ ಪಾಲಿಗೆ ಬಾಂಧವ್ಯದ ನೆರಳು

03:08 PM Jan 01, 2025 | Team Udayavani |

ಕೋಟ: ಸರಕಾರದ ಯಾವುದೇ ನೆರವಿಲ್ಲದೆ, ಸಮಾಜದಲ್ಲಿ ಅಶಕ್ತರನ್ನು ಗುರುತಿಸಿ ಅವರಿಗೆ ಮನೆ ನಿರ್ಮಿಸಿಕೊಡುವ ಕಾಯಕವನ್ನು ಸಾಸ್ತಾನ ಮೂಲದ ಬಾಂಧವ್ಯ ಕರ್ನಾಟಕ ಎನ್ನುವ ಸಂಘಟನೆಯೊಂದು ನಡೆಸುತ್ತ ಬಂದಿದೆ. ವಿಶೇಷವೆಂದರೆ ಈ ಸಂಘಟನೆಯ ಮುಖ್ಯ ವಾಹಿನಿಯಲ್ಲಿ ಕಾರ್ಯ ನಿರ್ವಹಿಸುವವರು ಯಾರೂ ಕೂಡ ಶ್ರೀಮಂತರಲ್ಲ. ಬಹುತೇಕ ಕೂಲಿ ಕೆಲಸ ಮಾಡುವವರೇ ಸಂಘಟನೆಯನ್ನು ಕಟ್ಟಿದ್ದಾರೆ. ಸಮಾಜದ ಎಲ್ಲ ವರ್ಗದವರನ್ನು ಸೇರಿಸಿಕೊಂಡು ಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ.

Advertisement

ಸಾಸ್ತಾನ ಪಾಂಡೇಶ್ವರ ನಿವಾಸಿ ದಿನೇಶ್‌ ಬಾಂಧವ್ಯ ಎನ್ನುವವರು ಈ ಸಂಘಟನೆಯ ಮುಖ್ಯಸ್ಥರು. ಕ್ಯಾಟರಿಂಗ್‌, ಕಟ್ಟಡ ನಿರ್ಮಾಣದಲ್ಲಿ ಪರಿಣತಿ ಹೊಂದಿರುವ ಇವರ ನೇತೃತ್ವದಲ್ಲಿ ಇದುವರೆಗೆ ಕಾರ್ಕಳ, ಹಿರಿಯಡ್ಕ, ಸಾಸ್ತಾನ ಕೋಡಿ, ಪಾಂಡೇಶ್ವರ, ತೆಕ್ಕಟ್ಟೆ, ವಕ್ವಾಡಿ, ಪಡುಕರೆ, ಬೇಳೂರು, ಮೂಡಹಡು ಸೇರಿದಂತೆ 12 ಕಡೆಗಳಲ್ಲಿ ನೆರಳು ಯೋಜನೆಯಡಿ ಬಡವರಿಗೆ ಉಚಿತ ಮನೆ ಕಟ್ಟಿಕೊಂಡಿದ್ದಾರೆ. ಇವರು ನಿರ್ಮಿಸುವ ಮನೆಗಳಿಗೆ ಕೇವಲ 5ಲಕ್ಷರೂ ಆಸುಪಾಸಿನಲ್ಲಿ ಯೋಜನೆ ಸಿದ್ಧಪಡಿಸಲಾಗುತ್ತದೆ. ಬಹುತೇಕ ಕೆಲಸಗಳನ್ನು ತಂಡದ ಸದಸ್ಯರೇ ಮಾಡುವುದರಿಂದ ಆ ಮೊತ್ತದಲ್ಲಿ ಮನೆ ನಿರ್ಮಾಣಗೊಳ್ಳುತ್ತದೆ.

ವಾಟ್ಸ್ಯಾಪ್‌ ಮೂಲಕ ಕಾರ್ಯಾಚರಣೆ
ಯೋಜನೆಗಾಗಿ ಸಂಘಟನೆ ಯಾರ ಬಳಿ ಕೂಡ ನೇರವಾಗಿ ಸಹಾಯಧನ ಕೇಳುವುದಿಲ್ಲ. ಬಾಂಧವ್ಯ ಕರ್ನಾಟಕ ಎನ್ನುವ ವಾಟ್ಸಾಪ್‌ ಗ್ರೂಪ್‌ನಲ್ಲಿ ರಾಜ್ಯಾದ್ಯಂತ ಬೇರೆ ಬೇರೆ ಕಡೆ ಉದ್ಯೋಗದಲ್ಲಿರುವ ಪರಿಚಿತರನ್ನು ಸೇರಿಸಲಾಗಿದೆ. ಹೊಸ ಯೋಜನೆಯೊಂದನ್ನು ಕೈಗೆತ್ತಿಕೊಂಡಾಗ ಟ್ರಸ್ಟ್‌ನ ಮುಖ್ಯಸ್ಥರಾದ ದಿನೇಶ್‌ ಬಾಂಧವ್ಯ ಅವರು ಯೋಜನಾ ಮೊತ್ತ ಹಾಗೂ ಕಲ್ಲು, ಮರಳು, ಮರ ಹೀಗೆ ಯಾವ -ಯಾವ ವಿಭಾಗಕ್ಕೆ ಎಷ್ಟು ಖರ್ಚಾಗುತ್ತದೆ ಎನ್ನುವುದನ್ನು ಗ್ರೂಪ್‌ ಮೂಲಕ ತಿಳಿಸುತ್ತಾರೆ. ಗ್ರೂಪ್‌ನ ಸದಸ್ಯರು ಬೇಕಾದ ಸಹಾಯವನ್ನು ನೀಡುತ್ತಾರೆ. ಕಿಟಕಿ, ದಾರಂದ ಹೀಗೆ ಒಂದೊಂದು ವಸ್ತುಗಳ ರೂಪದಲ್ಲೂ ಸಹಾಯ ಸಿಗುತ್ತದೆ.

ಫಲಾನುಭವಿಗಳ ಆಯ್ಕೆಯೂ ವಿಶೇಷ
ಫಲಾನುಭವಿಗಳ ಆಯ್ಕೆ ವೇಳೆ ಎಚ್ಚರಿಕೆ ವಹಿಸಲಾಗುತ್ತದೆ. ಅಪಘಾತ, ಅನಾರೋಗ್ಯ ಕಾರಣದಿಂದ ಮನೆಯ ಆಧಾರಸ್ತಂಭವನ್ನು ಕಳೆದುಕೊಂಡವರು ಅಥವಾ ಇದೇ ರೀತಿಯ ಸಮಸ್ಯೆಯಿಂದ ಮನೆಯ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಿದವರು, ವಿಕಲಚೇತನ ಕುಟುಂಬಗಳಿಗೆ ನೆರವು ನೀಡಲಾಗುತ್ತದೆ.

ಸದಸ್ಯರೇ ಕೆಲಸಗಾರರು
ಈ ಸಂಘಟನೆಯಲ್ಲಿ ಮೇಸ್ತ್ರಿಗಳು, ಕೂಲಿ ಕಾರ್ಮಿಕರು, ಪೈಂಟರ್‌ಗಳು, ವೈರಿಂಗ್‌ ಕೆಲಸ ಮಾಡುವವರೇ ಸದಸ್ಯರಿದ್ದಾರೆ. ಇವರೇ ರಜಾ ದಿನಗಳಲ್ಲಿ ಅಥವಾ ಬೇರೆ ದಿನ ಬಿಡುವು ಮಾಡಿಕೊಂಡು ಬಂದು ಮನೆ ನಿರ್ಮಾಣದಲ್ಲಿ ತೊಡಗಿಕೊಳ್ಳುತ್ತಾರೆ. ಇದಲ್ಲದೆ ಇನ್ನೂ ಹಲವು ಸೇವಾ ಕಾರ್ಯವನ್ನೂ ನಡೆಸುತ್ತಿದ್ದಾರೆ.

Advertisement

12 ಮನೆ ನಿರ್ಮಿಸಿದ ತೃಪ್ತಿ
ಸಾಮಾಜಿಕವಾಗಿ ಸಣ್ಣಮಟ್ಟದ ಸೇವೆ ಮಾಡುವ ನಿಟ್ಟಿನಲ್ಲಿ ಬಾಂಧವ್ಯ ಸಂಘಟನೆ ಸ್ಥಾಪಿಸಲಾಗಿತ್ತು. ಇದೀಗ 12 ಆಶಕ್ತ ಕುಟುಂಬಗಳಿಗೆ ಮನೆ ನಿರ್ಮಿಸಿದ ತೃಪ್ತಿ ಹಾಗೂ ನೂರಾರು ಮಂದಿ ಅರ್ಥಿಕ ಅಶಕ್ತರು, ಅನಾರೋಗ್ಯ ಪೀಡಿತರಿಗೆ ನೆರವಾದ ತೃಪ್ತಿ ಸಂಘಟನೆಗಿದೆ.
-ದಿನೇಶ್‌, ಬಾಂಧವ್ಯ ಸಂಘಟನೆಯ ಮುಖ್ಯಸ್ಥರು

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next