Advertisement

ಮತ್ತಷ್ಟು ಅಣ್ವಸ್ತ್ರ ಪರೀಕ್ಷೆಗೆ ಉ.ಕೊರಿಯಾ ಸಿದ್ಧತೆ

07:45 AM Sep 05, 2017 | Harsha Rao |

ಸಿಯೋಲ್‌: ಕೆಲ ದಿನಗಳಿಂದ ತಣ್ಣಗಾದಂತೆ ಕಂಡ ಅಮೆರಿಕ-ಉತ್ತರ ಕೊರಿಯಾ ನಡುವಿನ ಯುದ್ಧದ ಕಿಡಿ ಮತ್ತೆ ಹೊಗೆಯಾಡುತ್ತಿದೆ. ಭಾನುವಾರ ನಡೆದ ತನ್ನ ಆರನೇ ಮತ್ತು ಈವರೆಗಿನ ಅತ್ಯಂತ ಶಕ್ತಿಶಾಲಿ ಅಣ್ವಸ್ತ್ರ ಪರೀಕ್ಷೆಯ ಪರಿಪೂರ್ಣ ಯಶಸ್ಸಿನಿಂದ ಉನ್ಮಾದಗೊಂಡಿರುವ ಉತ್ತರ ಕೊರಿಯಾ, ಮತ್ತಷ್ಟು ಅಣ್ವಸ್ತ್ರ ಪರೀಕ್ಷೆಗಳಿಗೆ ಸಿದ್ಧವಾಗಿದೆ.

Advertisement

ಪಾಂಗ್‌ಯಾಂಗ್‌ನ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುವ ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯ, “ಭಾನುವಾರದ ತನ್ನ ಅತಿ ದೊಡ್ಡ ಯಶಸ್ಸಿನ ಗುಂಗಿನಲ್ಲಿರುವ ಉತ್ತರ ಕೊರಿಯಾ ಇನ್ನೂ ಹಲವು ಖಂಡಾಂತರ  ಕ್ಷಿಪಣಿ ಪ್ರಯೋಗದ ತಯಾರಿಯಲ್ಲಿದೆ’ ಎಂಬ ಮಾಹಿತಿಯನ್ನು ಅಮೆರಿಕಕ್ಕೆ ರವಾನಿಸಿದೆ. ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಕೊರಿಯಾ ಪರ್ಯಾಯ ದ್ವೀಪದಲ್ಲಿ ವಿಮಾನವಾಹಕ ನೌಕೆಗಳು ಮತ್ತು ಸ್ಟ್ರಾಟಜಿಕ್‌ ಬಾಂಬರ್‌ಗಳನ್ನು ನಿಯೋಜಿಸುವ ಕುರಿತು ವೈಟ್‌ಹೌಸ್‌ ಜತೆ ಚರ್ಚಿಸಿರುವುದಾಗಿ ಹೇಳಿದೆ.

ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೋಮವಾರ ಮಹತ್ವದ ಸಭೆ ನಡೆಸಿದೆ. ಜತೆಗೆ, ತಕ್ಷಣಕ್ಕೆ ಲಭ್ಯವಿರುವ ಮಿಲಿಟರಿ ಆಯ್ಕೆಗಳ ಕುರಿತು ಮಾಹಿತಿ ನೀಡುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಸೂಚಿಸಿದ್ದಾರೆ.

ಬಾಂಬ್‌ ಗಾತ್ರ 50 ಕಿಲೋ ಟನ್‌!
ಉತ್ತರ ಕೊರಿಯಾ ಭಾನುವಾರ ನಡೆಸಿದ ಅಣ್ವಸ್ತ್ರ ಪರೀಕ್ಷೆಯಲ್ಲಿ ಬಳಸಲಾದ ಬಾಂಬ್‌ನ ಗಾತ್ರ ಸುಮಾರು 50 ಕಿಲೋಟನ್‌ ಎಂದು ದ.ಕೊರಿಯಾ ಅಂದಾಜಿಸಿದೆ! ಗಾತ್ರದಲ್ಲಿ ಈ ಬಾಂಬ್‌ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಉ.ಕೊರಿಯಾ ಪ್ರಯೋಗಕ್ಕೆ ಬಳಸಿದ ಬಾಂಬ್‌ಗಿಂತಲೂ ಐದು ಪಟ್ಟು ದೊಡ್ಡದು ಮತ್ತು 1945ರಲ್ಲಿ ಅಮೆರಿಕ, ಹಿರೋಶಿಮಾ ಮೇಲೆ ಸಿಡಿಸಿದ ಅಣು ಬಾಂಬ್‌ಗಿಂತ 3 ಪಟ್ಟು ದೊಡ್ಡದಾಗಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next